ಕನ್ನಡಪ್ರಭ ವಾರ್ತೆ ಪಾಂಡವಪುರ
ಬೆಳಿಗ್ಗೆ 9 ಗಂಟೆ ವೇಳೆಗೆ ಕ್ಷೇತ್ರದಲ್ಲಿ ಶೇ.6.61, 11 ಗಂಟೆಗೆ ಶೇ.20, ಮಧ್ಯಾಹ್ನ ಶೇ.41.04, 3 ಗಂಟೆ ವೇಳೆಗೆ 59.69ರಷ್ಟು ಮತದಾನ ನಡೆಯಿತು, ಸಂಜೆ 5 ಗಂಟೆಗೆ ವೇಳೆಗೆ ಶೇ.74.87ರಷ್ಟು ಮತದಾನವಾಯಿತು. ಮತಕೇಂದ್ರಗಳಿಗೆ ಮತಚಲಾಯಸಲು ಬರುವ ವಿಕಲಚೇತನರು, ವಯೋವೃದ್ಧರಿಗಾಗಿ ವೀಲ್ ಚೇರ್ ಗಳನ್ನು ವ್ಯವಸ್ಥೆ ಮಾಡಲಾಗಿತ್ತು.
ಮತಕೇಂದ್ರಗಳಿಂದ ನೂರು ಮೀ. ದೂರದಲ್ಲಿ ಅಭ್ಯರ್ಥಿಗಳ ಬೆಂಬಲಿಗರು ಮತ ಚಲಾಯಿಸಲು ಆಗಮಿಸುವ ಮತದಾರರಿಗೆ ಕೈಮುಗಿದು ತಮ್ಮ ಅಭ್ಯರ್ಥಿಗೆ ಮತ ಹಾಕುವಂತೆ ಬೇಡಿಕೊಳ್ಳುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.ಮಜ್ಜಿಗೆ, ಜೂಸ್ ವಿತರಣೆ:
ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಮತಕೇಂದ್ರಗಳ ಸಮೀಪ ಟೆಂಟ್ ಹಾಕಿಕೊಂಡು ಕುಳಿತಿದ್ದ ಅಭ್ಯರ್ಥಿಗಳ ಬೆಂಬಲಿಗರು ಬಿಸಿಲಿನ ತಾಪಮಾನದಿಂದ ಧಣಿವಾರಿಸಿಕೊಳ್ಳಲು ಮಜ್ಜಿಗೆ, ಜ್ಯೂಸ್ ಕುಡಿದರು.ಶಾಸಕರು, ಗಣ್ಯರ ಮತದಾನ:
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಪತ್ನಿ ನಾಗಮ್ಮ ಪುಟ್ಟರಾಜು, ಮೊಮ್ಮಗ ಡಾ.ಸಂಜೀವ್ ಅವರು ಬೆಳಿಗ್ಗೆ ಸ್ವಗ್ರಾಮ ಚಿನಕುರಳಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆಗೆ ತೆರಳಿ ಸಾಮಾನ್ಯರಂತೆ ಸರತಿಸಾಲಿನಲ್ಲಿ ನಿಂತು ಮತ ಚಲಾಯಿಸಿದರು. ಶಾಸಕ ದರ್ಶನ್ ಪುಟ್ಟಣ್ಣಯ್ಯ ಕ್ಯಾತನಹಳ್ಳಿಯಲ್ಲಿ ಮತಚಲಾಯಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಪಟ್ಟಣದ ವಿಜಯ ಕಾಲೇಜಿನ ಮತಗಟ್ಟೆಯಲ್ಲಿ ಪತ್ನಿ ಸಮೇತವಾಗಿ ಆಗಮಿಸಿ ಮತಚಲಾಯಿಸಿದರು.ಬೇಬಿಮಠದ ದುರ್ದಂಡೇಶ್ವರಮಠದ ಪೀಠಾಧ್ಯಕ್ಷ ಡಾ.ಶ್ರೀತ್ರಿನೇತ್ರ ಮಹಾಂತಸ್ವಾಮಿ ತಾಲೂಕಿನ ಬೇಬಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಕಾಂಗ್ರೆಸ್ ಮುಖಂಡ ಬಿ.ರೇವಣ್ಣ ಲಕ್ಷ್ಮೀಸಾಗರ ಗ್ರಾಮದಲ್ಲಿ ಹಾಗೂ ಕೆಪಿಸಿಸಿ ಪ್ರಧಾನ ಕಾರ್‍ಯದರ್ಶಿ ಎಚ್.ತ್ಯಾಗರಾಜು ಅಮೃತಿ ಗ್ರಾಮದ ಸರಕಾರಿ ಶಾಲೆಯಲ್ಲಿ ಮತದಾನ ಮಾಡಿದರು.