-ತಾಂತ್ರಿಕ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಜೈಪ್ರಕಾಶ್ ತಂಡ
ಕನ್ನಡಪ್ರಭ ವಾರ್ತೆ ಕನಕಪುರ
ಮಂಚನಬೆಲೆ, ಬೈರಮಂಗಲ, ತಿಪ್ಪಗೊಂಡನಹಳ್ಳಿ ಮತ್ತು ಅರ್ಕಾವತಿ ಅಣೆಕಟ್ಟುಗಳಿಗೆ ಹರಿಯುವ ನೀರು ಕಲುಷಿತಗೊಳ್ಳುವುದನ್ನು ತಡೆಗಟ್ಟುವ ಹಾಗೂ ವೃಷಭಾವತಿ-ಅರ್ಕಾವತಿ ಕಣಿವೆಗಳ ಮಾಲಿನ್ಯ ನಿಯಂತ್ರಣ ಕುರಿತು ಪರಿಹಾರ ಮಾರ್ಗೋಪಾಯಗಳ ತಾಂತ್ರಿಕ ವರದಿಯನ್ನು ಶೀಘ್ರದಲ್ಲಿ ರಾಜ್ಯಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ತಾಂತ್ರಿಕ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಜೈಪ್ರಕಾಶ್ ತಿಳಿಸಿದರು.ಹುಣಸನಹಳ್ಳಿ, ಗಾಣಾಳು, ಸಂಗಮ ಹಾಗೂ ಹಾರೋಬೆಲೆ ಜಲಾಶಯಗಳ ಪರಿಶೀಲನೆ ಬಳಿಕ ತಾಪಂ ಕಚೇರಿಯಲ್ಲಿ ಮಾತನಾಡಿದ ಅವರು, ಈ ಕಣಿವೆಗಳಲ್ಲಿನ ನೀರು ಒಳಚರಂಡಿ ತ್ಯಾಜ್ಯ, ಘನತ್ಯಾಜ್ಯ, ಕೈಗಾರಿಕಾ ತ್ಯಾಜ್ಯ ಮತ್ತು ಇತರೆ ರೀತಿಯ ಮಾಲಿನ್ಯಕಾರಕ ಅಂಶಗಳಿಂದಾಗಿ ಕಲುಷಿತಗೊಳ್ಳುತ್ತಿರುವುದು ಅಧ್ಯಯನದ ವೇಳೆ ಕಂಡು ಬಂದಿದ್ದು ಮಾಲಿನ್ಯದ ಮೂಲಗಳು, ಮಾಲಿನ್ಯಕ್ಕೆ ಕಾರಣಗಳು ಹಾಗೂ ಪರಿಹಾರೋಪಾಯ ಅಧ್ಯಯನ ವರದಿಯಲ್ಲಿ ಇರಲಿದೆ ಎಂದು ತಿಳಿಸಿದರು.
ನೀರಿನ ಗುಣಮಟ್ಟ ಪರೀಕ್ಷಿಸುವುದರ ಜೊತೆಗೆ ನೀರಿನ ಸದ್ಬಳಕೆಗೆ ಸಂಬಂಧಿಸಿದ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದ್ದು ಮಾಲಿನ್ಯ ನಿಯಂತ್ರಣ ಹಾಗೂ ನದಿ ನೀರಿನ ಗುಣಮಟ್ಟ ಸುಧಾರಿಸಲು ತೆಗೆದು ಕೊಳ್ಳಬೇಕಾದ ಮಾರ್ಗೋಪಾಯಗಳನ್ನು ವರದಿಯಲ್ಲಿ ಶಿಫಾರಸ್ಸು ಮಾಡುತ್ತೇವೆ. ಕಳೆದ ಎರಡು ತಿಂಗಳ ಹಿಂದೆ ಅಧ್ಯಯನ ಸಮಿತಿ ರಚನೆಗೊಂಡಿದ್ದು ಈಗಾಗಲೇ ಮೂರು ಸಭೆಗಳನ್ನು ನಡೆಸಲಾಗಿದೆ. ಹೆಸರುಘಟ್ಟ ಟ್ಯಾಂಕ್‌ನಿಂದ ಬೆಂಗಳೂರು ರಸ್ತೆಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸೇತುವೆವರೆಗೆ ಹಾಗೂ ಮಾರನಾಯಕನಹಳ್ಳಿ ಅರ್ಕಾವತಿ ಕಣಿವೆಯ ಪರಿಶೀಲನೆ ನಡೆಸಲಾಗಿದೆ. ರಾಷ್ಟ್ರೀಯ ನದಿಗಳು ಮತ್ತು ಅಂತಾರಾಷ್ಟ್ರೀಯ ನದಿಗಳ ಮಾಲಿನ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಕೈಗೊಂಡ ಅಧ್ಯಯನಗಳ ಬಗ್ಗೆ ಸಹ ಪರಿಶೀಲಿಸಿ ಮಾಲಿನ್ಯದ ಮೂಲಗಳು, ಮಾಲಿನ್ಯಕ್ಕೆ ಕಾರಣಗಳು ಮತ್ತು ಸಾಧ್ಯವಾಗಲಿರುವ ತಾಂತ್ರಿಕ ಪರಿಹಾರೋಪಾಯಗಳ ಬಗ್ಗೆ ಕ್ರಮ ಕೈಗೊಳ್ಳುವುದು ಎಂದು ತಿಳಿಸಿದರು.
ಬೆಂಗಳೂರು ನಗರ ವೇಗವಾಗಿ ಬೆಳೆಯುತ್ತಿರುವುದರಿಂದ ಹಾಗೂ ಭಾರತದ ಉದ್ಯಾನನಗರಿ ಮತ್ತು ಸಿಲಿಕಾನ್ ವ್ಯಾಲಿ ಎಂದು ಹೆಸರು ಗಳಿಸಿರುವ ರಾಜ್ಯದ ಆಡಳಿತ ರಾಜಧಾನಿ, ಐಟಿ ರಾಜಧಾನಿ ಮತ್ತು ಹಣಕಾಸು ರಾಜಧಾನಿ ಎಂದು ಉಲ್ಲೇಖವಾಗಿರುವ ಬೆಂಗಳೂರು ನಗರವು ರಾಜ್ಯದ ಒಟ್ಟು ಆದಾಯದಲ್ಲಿ ಶೇ.50ರಷ್ಟು ಕೊಡುಗೆ ನೀಡುತ್ತಿರುವುದರಿಂದ ಬೆಂಗಳೂರ ನಗರವನ್ನು ಸಂಪೂರ್ಣವಾಗಿ ಬೆಳೆಸುವ ಜವಾಬ್ದಾರಿ ಕರ್ನಾಟಕದ ಜನರ ಮೇಲಿದೆ. ಬೆಂಗಳೂರು ನಗರವನ್ನು ಈಗಾಗಲೇ "ಗ್ರೇಟರ್ ಬೆಂಗಳೂರು " ಎಂದು ಘೋಷಿಸಲಾಗಿದ್ದು ಇದಕ್ಕೆ ಪೂರಕವಾಗಿ ಬೆಂಗಳೂರನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ತರುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕಿದೆ ಎಂದರು.
ಜಲಸಂಪನ್ಮೂಲ ಇಲಾಖೆಯ ಮುಖ್ಯ ಅಭಿಯಂತರದ ಸತೀಶ್, ಜಿಲ್ಲಾ ವಾಯು ಮಾಲಿನ್ಯ ನಿಯಂತ್ರಣ ಅಧಿಕಾರಿ ಮಂಜುನಾಥ್, ಕನಕಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅವಿನಾಶ್, ಕಾವೇರಿ ನೀರಾವರಿ ನಿಗಮದ ಸಹಾಯಕ ಅಭಿಯಂತರ ಮೋಹನ್ ಸೇರಿದಂತೆ ಹಲವು ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.
ಅರ್ಕಾವತಿ- ವೃಷಭಾವತಿ ನದಿ ಪಾತ್ರದ ಶುದ್ಧೀಕರಣ ಸಮಿತಿಯಿಂದ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಂತ್ರಿಕ ಅಧ್ಯಯನ ಸಮಿತಿ ಅಧ್ಯಕ್ಷ ಕೆ.ಜೈಪ್ರಕಾಶ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.