ಮೇವು ಸಂಗ್ರಹಕ್ಕೆ ಕೃಷಿಕರ ಅಲೆದಾಟ

KannadaprabhaNewsNetwork |  
Published : Mar 07, 2024, 01:51 AM IST
ಅಫಜಲ್ಪುರ ತಾಲೂಕಿಗೆ ಲಗ್ಗೆ ಇಟ್ಟಿರುವ ಇಂಡಿ ಸಿಂದಗಿ ಅಕ್ಕಲಕೋಟ ಆಳಂದ ತಾಲೂಕಿನ ರೈತರು ಬೇಸಿಗೆಯಲ್ಲಿ ತಮ್ಮ ಜಾನುವಾರುಗಳಿಗೆ ಮೇವಿನ ಯಾವುದೇ ತೊಂದರೆಯಾಗಬಾರದು ಎಂದು ದುಬಾರಿ ದರ ಆದರೂ ಸರಿ ಮೇವು (ಕಣಕಿ) ತೊಗರಿ ಕಡಲೆ ಹೊಟ್ಟು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. | Kannada Prabha

ಸಾರಾಂಶ

ಮೇವಿನ ದರ ಹೆಚ್ಚಳ ಜಾನುವಾರು ಮಾಲೀಕರು ಕಂಗಾಲು । ₹8ರಿಂದ ₹10 ಸಾವಿರಕ್ಕೆ ಮೇವು ಖರೀದಿ

ಬಿಂದುಮಾಧವ ಮಣ್ಣೂರ

ಕನ್ನಡಪ್ರಭ ವಾರ್ತೆ ಅಫಜಲ್ಪುರ

ಬೇಸಿಗೆ ಹೆಚ್ಚಾಗುತ್ತಿದಂತೆ ರೈತರು ತಮ್ಮ ಒಡನಾಡಿಯಾದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉದ್ಭವಿಸಬಾರದು ಎನ್ನುವ ಉದ್ದೇಶದಿಂದ ಈಗಾಗಲೇ ಹೊಟ್ಟು, ಮೇವು ಸಂಗ್ರಹಣೆಯಲ್ಲಿ ತಲ್ಲೀನರಾಗಿದ್ದಾರೆ. ಕಳೆದ ಎರಡ್ಮೂರು ವರ್ಷಗಳಿಂದ ಮಳೆ ಪ್ರಮಾಣ ವಾಡಿಕೆಗಿಂತ ಕಡಿಮೆಯಾಗುತ್ತಿರುವುದು ಈ ಭಾಗದ ರೈತರನ್ನು ಚಿಂತೆಗೀಡು ಮಾಡಿದೆ.

ಬಹುತೇಕ ಅನ್ನದಾತರು ಮಳೆಯಾಶ್ರಿತ ಭೂಮಿ ಹೊಂದಿದ್ದಾರೆ. ಮಳೆ ಪ್ರಮಾಣದ ಮೇಲೆ ತಾವು ಪಾರಂಪರಿಕವಾಗಿ ಬೆಳೆಯುತ್ತಿರುವ ಶೇಂಗಾ, ಜೋಳ ಬದಲಾಗಿ ಸೂರ್ಯಕಾಂತಿ, ಉಳ್ಳಾಗಡ್ಡಿ, ಮೆಣಸಿನಕಾಯಿ, ಕಬ್ಬು, ಬಾಳೆ, ಹತ್ತಿ, ಗೋವಿನ ಜೋಳದಂತಹ ವಾಣಿಜ್ಯ ಬೆಳೆ ಬೆಳೆಯಲು ಆರಂಭಿಸಿದ್ದಾರೆ. ಇದರ ಪರಿಣಾಮವಾಗಿ ಜಾನುವಾರುಗಳ ಮುಖ್ಯ ಆಹಾರವಾದ ಶೇಂಗಾ ಹೊಟ್ಟು, ಜೋಳದ ಮೇವಿನ ಕೊರತೆಯಾಗಿದೆ. ಹೀಗಾಗಿ ಮೇವಿನ ಬೆಲೆಯಲ್ಲೂ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ರೈತ ಸಮೂಹವನ್ನು ಕೆಂಗಡಿಸಿದೆ.

ಈಗಾಗಲೇ ತಾಲೂಕಿನಾದ್ಯಾಂತ ಬಿಸಿಲಿನ ಪ್ರಖರತೆ ದಿನದಿಂದ ದಿನಕ್ಕೆ ಏರುತ್ತಿದೆ. ಜಾನುವಾರುಗಳಿಗೆ ಮೇವಿನ ಕೊರತೆಯೂ ಎದುರಾಗಿದೆ. ಈ ಹಿನ್ನೆಲೆಯಲ್ಲಿ ರೈತರು ಬೆಲೆ ಎಷ್ಟೆ ಹೆಚ್ಚಾದರೂ ತಮ್ಮ ಜಾನುವಾರುಗಳಿಗೆ ಮೇವು ಸಂಗ್ರಹಿಸುವಲ್ಲಿ ನಿರತರಾಗಿದ್ದಾರೆ. ಕಳೆದ ವರ್ಷ ಶೇಂಗಾ ಹೊಟ್ಟು ಟ್ರ್ಯಾಕ್ಟರ್‌ ಒಂದಕ್ಕೆ 5 ಸಾವಿರವಾಗಿತ್ತು. ಆದರೆ, ಈ ವರ್ಷ 8ರಿಂದ 10 ಸಾವಿರಕ್ಕೇರಿದೆ. ಅದರಂತೆ ಜೋಳದ ಮೇವು (ಕಣಕಿ) ಟ್ರ್ಯಾಕ್ಟರ್‌ ಒಂದಕ್ಕೆ 3ರಿಂದ 4 ಸಾವಿರ ರು. ಇತ್ತು. ಅದು ಕೂಡ 5ರಿಂದ 6 ಸಾವಿರ ವರೆಗೆ ಬೆಲೆ ಏರಿದೆ. ಇನ್ನು ಹುರಳಿ ಹೊಟ್ಟು 8ರಿಂದ 10 ಸಾವಿರವೆರೆಗೆ ಬೆಲೆಯಿದೆ. ಕೆಲ ನೀರಾವರಿ ಆಶ್ರಿತ ಜಮೀನಿನಲ್ಲಿ ಬೆಳೆದ ಜೋಳದ ಮೇವಿಗೆ ಭಾರಿ ಬೇಡಿಕೆ ಬಂದಿದೆ. ಪರಿಣಾಮ ರೈತ ದಿನಬೆಳಗಾದರೆ ಯಾವ ಹೊಲದಲ್ಲಿ ಜೋಳದ ರಾಶಿ ನಡೆದಿದೆ. ಮತ್ತಿನ್ಯಾವ ಹೊಲದಲ್ಲಿ ಶೆಂಗಾ, ಗೋಧಿ ರಾಶಿ ನಡೆದಿದೆ ಎಂದು ಹೊಲದಿಂದ ಹೊಲಕ್ಕೆ ಅಲೆದಾಡಿ ಹೊಟ್ಟು ಮೇವು ಖರೀದಿಸುವುದು ದೊಡ್ಡ ಸಾಹಸವಾಗಿದೆ.

ಬೇಸಿಗೆಯನ್ನು ಎದುರಿಸುವ ಸಲುವಾಗಿ ಗ್ರಾಮೀಣ ಭಾಗದ ರೈತರು ಟ್ರ್ಯಾಕ್ಟರ್‌, ಚಕ್ಕಡಿ ಬಂಡಿಗಳಲ್ಲಿ ಮೇವು ಒಯ್ದು ಒಂದೆಡೆ ಒಂದೆಡೆ ಶೇಖರಿಸುತ್ತಿದ್ದಾರೆ. ಮೇವು ಖರೀದಿಗೂ ಪೈಪೋಟಿ ನಡೆದಿದೆ. ವಿಜಯಪುರ ಸೋಲಾಪುರ. ಅಕ್ಕಲಕೋಟ. ಆಳಂದ. ಇಂಡಿ. ಸಿಂದಗಿ ಸೇರಿದಂತೆ ವಿವಿಧ ಜಿಲ್ಲೆ ಹಾಗೂ ತಾಲೂಕುಗಳ ರೈತರು ತಾಲೂಕಿನ ಗ್ರಾಮೀಣ ಭಾಗದಲ್ಲಿ ಬಂದು ಮೇವು (ಕಣಕಿ) ತೊಗರಿ ಹೊಟ್ಟು ಕಡಲೆ ಹೊಟ್ಟು ಖರೀದಿಸುತ್ತಿದ್ದಾರೆ.

ಬೆಲೆ ಕಡಿಮೆ ಮಾಡುವಂತೆ ರೈತರಿಂದ ಚೌಕಾಸಿಯೂ ನಡೆದಿದೆ. ಪ್ರಸಕ್ತ ವರ್ಷ ಬೇಸಿಗೆಯ ತೀವ್ರತೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುವ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿದ್ದು, ದನಕರುಗಳ ಉದರ ತುಂಬಿಸಲು ಅನ್ನದಾತರು ಪಡುತ್ತಿರುವ ಶ್ರಮಕ್ಕೆ ಸರ್ಕಾರ ಸಹ ಕೈಜೋಡಿಸಿ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಮೇವು ಪೂರೈಕೆಗೆ ಮುಂದಾಗಬೇಕು ಎನ್ನುವುದು ರೈತ ಸಮೂಹದ ಆಗ್ರಹವಾಗಿದೆ.

ಹೆಚ್ಚಾದ ಮೇವಿನ ಬೆಲೆ: ಕಳೆದ ವರ್ಷ ಶೇಂಗಾ ಹೊಟ್ಟು ಟ್ರ್ಯಾಕ್ಟರ್‌ ಒಂದಕ್ಕೆ 3 ಸಾವಿರವಾಗಿತ್ತು. ಆದರೆ ಈ ವರ್ಷ 5 ಸಾವಿರಕ್ಕೇರಿದೆ. ಅದರಂತೆ ಜೋಳದ ಮೇವು ಕಣಕಿ ಟ್ರ್ಯಾಕ್ಟರ್‌ ಒಂದಕ್ಕೆ 3ರಿಂದ 4 ಸಾವಿರ ರು. ಇತ್ತು. ಅದು ಕೂಡ 5ರಿಂದ 6 ಸಾವಿರದ ವರೆಗೆ ಬೆಲೆ ಏರಿದೆ. ಇನ್ನು ಹುರಳಿ ಹೊಟ್ಟು 5ರಿಂದ 6 ಸಾವಿರ ವರೆಗೆ ಬೆಲೆಯಿದೆ. ಬೇಸಿಗೆ ಕಾಲದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ರೈತರಿಗೆ ಉಚಿತ ಮೇವು ವಿತರಿಸುವುದರ ಜತೆಗೆ ಮೇವು ಬೆಳೆಗೆ ಉತ್ತೇಜನ ನೀಡಬೇಕು ಎಂದು ತಾಲೂಕಿನ ರೈತರು ಆಗ್ರಹಿಸಿದ್ದಾರೆ. ಮನುಷ್ಯರು ಹೊಟ್ಟೆಪಾಡಿಗಾಗಿ ಎಲ್ಲಾದರೂ ಹೋಗಿ ಏನನ್ನಾದರೂ ತಿಂದು ಬದುಕಬಹುದರ್ರೀ. ಆದರೆ ಭೂಮಿತಾಯಿ ಸೇವೆ ಮಾಡೋ ಬಾಯಿಲ್ಲದ ಬಸವಣ್ಣನಿಗೆ ಹೊಟ್ಟು ಮೇವು ಇಲ್ಲಂದ್ರ ಹ್ಯಾಂಗ ಬದಕ್ತಾವರ್ರೀ. ದುಬಾರಿ ರೊಕ್ಕಾ ಕೊಟ್ಟು ಹೊಟ್ಟು ಮೇವು ಖರೀದಿಸ್ತೀವಿ ಎನ್ನುತ್ತಾರೆ ಬೇನೂರ ಗ್ರಾಮದ ರೈತರಾದ ಮಲ್ಲಿಕಾರ್ಜುನ ಪೂಜಾರಿ, ನಾಮದೇವ ಪೂಜಾರಿ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಾವಣಗೆರೆ, ಬಾಗಲಕೋಟೆ ಕ್ಷೇತ್ರ ನಮ್ದೆ : ಡಿ.ಕೆ.ಶಿವಕುಮಾರ್‌
ಟಿಬಿ ಡ್ಯಾಂ ಹಿನ್ನೀರಿನ ಕೈಗಾರಿಕೆ ಲೈಸೆನ್ಸ್‌ ರದ್ದತಿಗಾಗಿ ಹೋರಾಟ