ನ.1ರಿಂದ ವಾರ್ಡ್ ಒನ್ ಅಭಿಯಾನ : ಕೃಷ್ಣ

KannadaprabhaNewsNetwork |  
Published : Oct 29, 2026, 03:45 AM ISTUpdated : Oct 29, 2026, 05:22 AM IST
Krishna Byre Gowda

ಸಾರಾಂಶ

ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ನ.1ರಿಂದ ‘ವಾರ್ಡ್ ಒನ್’ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. ವಿದ್ಯುತ್, ರಸ್ತೆ ಗುಂಡಿ, ಕಸ ಸೇರಿದಂತೆ ಹಲವು ಸಮಸ್ಯೆಗಳನ್ನು ಸಾಧ್ಯವಾದಷ್ಟು ಬಗೆಹರಿಸಲು ತಿಳಿಸಲಾಗಿದೆ.

ಬೆಂಗಳೂರು : ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ನ.1ರಿಂದ ‘ವಾರ್ಡ್ ಒನ್’ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.

ಬೆಸ್ಕಾಂ, ಬಿಡಬ್ಲ್ಯುಎಸ್ ಎಸ್ ಬಿ, ಅರಣ್ಯ ಇಲಾಖೆ ಅಧಿಕಾರಿಗಳು ಸಮನ್ವಯ

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಆಯಾ ವಿಭಾಗದಲ್ಲಿ ಒಂದೊಂದು ವಾರ್ಡ್ ಆಯ್ಕೆ ಮಾಡಿಕೊಂಡು ಅಲ್ಲಿನ ಒಳಚರಂಡಿ, ನೀರು, ವಿದ್ಯುತ್, ರಸ್ತೆ ಗುಂಡಿ, ಕಸ ಸೇರಿದಂತೆ ಹಲವು ಸಮಸ್ಯೆಗಳನ್ನು ಸಾಧ್ಯವಾದಷ್ಟು ಬಗೆಹರಿಸಲು ತಿಳಿಸಲಾಗಿದೆ. ಆಯಾ ವಿಭಾಗದ ಎಂಜಿನಿಯರ್‌ಗಳು ಕಂದಾಯ ಅಧಿಕಾರಿಗಳು, ಆರೋಗ್ಯ ಅಧಿಕಾರಿಗಳು ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಈ ಅಭಿಯಾನದಲ್ಲಿ ಬೆಸ್ಕಾಂ, ಬಿಡಬ್ಲ್ಯುಎಸ್ ಎಸ್ ಬಿ, ಅರಣ್ಯ ಇಲಾಖೆ ಅಧಿಕಾರಿಗಳು ಸಮನ್ವಯ ಸಾಧಿಸಲಿದ್ದಾರೆ ಎಂದರು.

ಸೌಂದರ್ಯೀಕರಣ ಸೇರಿದಂತೆ ಸಮಗ್ರ ಅಭಿವೃದ್ಧಿ

ಸೌಂದರ್ಯೀಕರಣ ಸೇರಿದಂತೆ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುವ ಉದ್ದೇಶದಿಂದ ಜಿಬಿಎ, ಐದು ನಗರ ಪಾಲಿಕೆಗಳು ಹಾಗೂ ಇತರೆ ಸರ್ಕಾರಿ ಸಂಸ್ಥೆಗಳ ಸಹಯೋಗದಲ್ಲಿ ಅಭಿಯಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬೆಸ್ಕಾಂನ ವಿದ್ಯುತ್ ಕಂಬಗಳು ಹಾಗೂ ಆರ್‌ಎಂಯು ಘಟಕಗಳ ಸ್ಥಳಾಂತರ ಅಥವಾ ದುರಸ್ತಿ, ಜಲಮಂಡಳಿಯ ನೀರಿನ ಸೋರಿಕೆ ತಡೆಗಟ್ಟುವುದು ಮತ್ತು ಅಗತ್ಯವಿರುವಲ್ಲಿ ಪೈಪ್‌ಗಳ ದುರಸ್ತಿ ಅಥವಾ ತೆರವು ಸೇರಿದಂತೆ ವಾರ್ಡ್‌ಗಳ ಸ್ವಚ್ಛತೆ ಹಾಗೂ ಸೌಂದರ್ಯೀಕರಣಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಕೈಗೊಳ್ಳಲಾಗುವುದು. ನವೆಂಬರ್ ತಿಂಗಳ ಅಂತ್ಯದೊಳಗೆ ಸಾಧ್ಯವಾದಷ್ಟು ಸಮಸ್ಯೆಗಳಿಗೆ ಪರಿಹಾರ ಒದಗಿಸುವುದು ಈ ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.

ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ವಿಭಾಗವಾರು ಅಧಿಕಾರಿಗಳ ಸಮಿತಿಗಳನ್ನು ರಚಿಸಿ, ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸಲಾಗುವುದು. ಅಭಿಯಾನ ಆರಂಭವಾದ ಬಳಿಕ ಆಯ್ಕೆ ಮಾಡಲಾದ ವಾರ್ಡ್‌ನ ಸ್ವಚ್ಛತಾ ಕಾರ್ಯಗಳು ಹಾಗೂ ಇತರೆ ಅಭಿವೃದ್ಧಿ ಕಾರ್ಯಗಳನ್ನು ಪೂರ್ಣಗೊಳಿಸಲು ಬೇಕಾಗುವ ಸಮಯವನ್ನು ಪರಿಶೀಲಿಸಿ, ಅದರ ಆಧಾರದ ಮೇಲೆ ನಿಖರವಾದ ಕಾರ್ಯಯೋಜನೆ ರೂಪಿಸಿ ಅನುಷ್ಠಾನಗೊಳಿಸಲಾಗುವುದು ಎಂದು ತಿಳಿಸಿದರು.

ಪ್ರತಿ ವಾರ್ಡ್‌ನಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಸಂಬಂಧ ವಾರ್ಡ್ ಅಧಿಕಾರಿಗಳಿಗೆ ಪರಿಶೀಲನಾ ಪಟ್ಟಿ (ಚೆಕ್‌ಲಿಸ್ಟ್)ಯನ್ನು ನೀಡಲಾಗುವುದು. ವಾರ್ಡ್ ಸಹಾಯಕ ಎಂಜಿನಿಯರ್, ಕಿರಿಯ ಹೆಲ್ತ್ ಇನ್ಸ್ ಪೆಕ್ಟರ್ ಹಾಗೂ ಮಾರ್ಷಲ್‌ಗಳು ಈ ಪಟ್ಟಿಯ ಆಧಾರದ ಮೇಲೆ ವಾರ್ಡ್‌ನ ರಸ್ತೆಗಳನ್ನು ಪರಿಶೀಲಿಸಿ, ಅಲ್ಲಿರುವ ಸಮಸ್ಯೆಗಳು ಹಾಗೂ ಅವುಗಳಿಗೆ ಸಂಬಂಧಿಸಿದ ಇಲಾಖೆಗಳ ವಿವರಗಳನ್ನು ಗುರುತಿಸಿ ಪಟ್ಟಿ ಸಿದ್ಧಪಡಿಸಲಿದ್ದಾರೆ. ನಂತರ ಸಿದ್ಧಪಡಿಸಿದ ಪಟ್ಟಿಯ ಆಧಾರದ ಮೇಲೆ, ಸಂಬಂಧಪಟ್ಟ ಇಲಾಖೆಗಳ ಸಹಯೋಗದೊಂದಿಗೆ ಯೋಜನಾಬದ್ಧವಾಗಿ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸಭೆಯಲ್ಲಿ ಆಯುಕ್ತ ರಮೇಶ್ ಡಿ.ಎಸ್., ಪೊಮ್ಮಲ ಸುನಿಲ್ ಕುಮಾರ್, ರಮೇಶ್ ಕೆ.ಎನ್., ಜಿ. ಜಗದೀಶ್, ಡಾ.ರಾಜೇಂದ್ರ ಕೆ.ವಿ., ಬೆಂಗಳೂರು ಘನತ್ಯಾಜ್ಯ ನಿರ್ವಹಣೆ ನಿಯಮಿತದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಕರೀಗೌಡ, ಹೆಚ್ಚುವರಿ ಆಯುಕ್ತ ಲೋಖಂಡೆ ಸ್ನೇಹಲ್ ಸುಧಾಕರ್ ಹಾಗೂ ಮೋನ ರೋಟ್, ಮುಖ್ಯ ಎಂಜಿಯರ್ ಉಪಸ್ಥಿತರಿದ್ದರು.

ಕಸದ ಟೆಂಡರ್ ಸಿಗದವರಿಂದ

ಅಪಪ್ರಚಾರ: ಕೃಷ್ಣಬೈರೇಗೌಡಕಸದ ಟೆಂಡರ್‌ನಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಈ ಕಸದ ಟೆಂಡರ್ ಸಿಗದವರು ಹೊರಗೆ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಡಿಮೆ ದರ ನೀಡಿ ಟೆಂಡರ್‌ನಲ್ಲಿ ಭಾಗವಹಿಸಿ ಗುತ್ತಿಗೆ ಪಡೆದವರನ್ನು ನೋಡಿ ಹೆಚ್ಚು ದರ ನೀಡಿ ಟೆಂಡರ್‌ನಿಂದ ಹೊರಹೋದವರು ಭ್ರಷ್ಟಾಚಾರ ನಡೆದಿದೆ ಎಂದು ಅಪಪ್ರಚಾರ ನಡೆಸುತ್ತಿದ್ದಾರೆ ತಿಳಿಸಿದರು.ವಾರ್ಷಿಕವಾಗಿ ನಗರದ ಕಸವನ್ನು ನಿರ್ವಹಣೆ ಮಾಡಬೇಕಾದರೆ ಇಲ್ಲಿಯವರೆಗೆ 597 ಕೋಟಿ ರು. ವೆಚ್ಚವಾಗುತ್ತಿತ್ತು, ಆದರೂ ಕಸದ ಸಮಸ್ಯೆ ಮಿತಿ ಮೀರಿತ್ತು. ಈಗ ವೈಜ್ಞಾನಿಕವಾಗಿ ಶಿಸ್ತು ಬದ್ಧವಾಗಿ ಜಿಪಿಎಸ್ ಮೂಲಕ ಸುಸಜ್ಜಿತ ವಾಹನಗಳನ್ನು ರಸ್ತೆಗೆ ಇಳಿಸುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು ಈ ಬಾರಿ 620 ಕೋಟಿ ರು. ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ ಎಂದರು.

ನೂತನ ಯೋಜನೆಯಂತೆ ಈಗಾಗಲೇ 5 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿ ಕ್ಷೇತ್ರಕ್ಕೆ ಒಂದರಂತೆ 5 ಪ್ಯಾಕೇಜ್‌ಗಳಿಗೆ ಟೆಂಡರ್ ವರ್ಕ್ ಆರ್ಡರ್ ನೀಡಲಾಗಿದೆ. ನೂತನ ಟೆಂಡರ್ ನಿಯಮಾವಳಿಗಳ ಪ್ರಕಾರ, ಪ್ರತಿಯೊಂದು ಪ್ಯಾಕೇಜ್ ನಿರ್ವಹಣೆಗೆ ಗುತ್ತಿಗೆದಾರರು ಸುಮಾರು 10 ಕೋಟಿ ರುಪಾಯಿ ಬಂಡವಾಳ ತೊಡಗಿಸಬೇಕು. ಹೊಸ ಆಟೋ, ಲಾರಿ ಖರೀದಿಸಬೇಕು, ಅವುಗಳಿಗೆ ಜಿಪಿಎಸ್ ಅಳವಡಿಸಬೇಕು. ನಂತರ ಕಸ ಸಂಗ್ರಹಣೆಗೆ ಅವಕಾಶ. ಇಷ್ಟೆಲ್ಲಾ ಸಿದ್ಧತೆ ಮಾಡಿಕೊಳ್ಳಲು 1 ತಿಂಗಳಿಂದ 2ತಿಂಗಳು ಕಾಲಾವಕಾಶ ಕೋರಿದ್ದರು, ಅದರಂತೆ ಸಮ್ಮತಿಸಲಾಗಿದೆ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆ ಧಮ್ಕಿ ಹಾಕಿ ದಾಂಧಲೆ : ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್