ಕಿಮ್ಸ್ ಆಸ್ಪತ್ರೆಯಲ್ಲಿನ ಅವಧಿ ಮೀರಿದ ಔಷಧಿಗಳಿರುವ ಉಗ್ರಾಣ ಸೀಜ್

KannadaprabhaNewsNetwork |  
Published : Oct 29, 2026, 02:15 AM IST
ಕೊಪ್ಪಳ ಕಿಮ್ಸ್‌ನಲ್ಲಿ ಅವಧಿ ಮೀರಿದ ಔಷಧ | Kannada Prabha

ಸಾರಾಂಶ

ರೋಗಿಗಳಿಗೆ ವಿತರಿಸಬೇಕಾದ ಔಷಧಿಗಳನ್ನು ಸಮರ್ಪಕವಾಗಿ ನಿರ್ವಹಿಸದೆ, ಅವುಗಳ ಅವಧಿ ಮುಗಿಯುವ ವರೆಗೆ ಉಗ್ರಾಣದಲ್ಲೇ ಉಳಿಸಿ, ಕೊನೆಗೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳುಹಿಸಿರುವುದು ಕೊಪ್ಪಳದ ಕಿಮ್ಸ್ ಆಸ್ಪತ್ರೆಯ ಔಷಧಿ ನಿರ್ವಹಣಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ರೋಗಿಗಳಿಗೆ ವಿತರಿಸಬೇಕಾದ ಔಷಧಿಗಳನ್ನು ಸಮರ್ಪಕವಾಗಿ ನಿರ್ವಹಿಸದೆ, ಅವುಗಳ ಅವಧಿ ಮುಗಿಯುವ ವರೆಗೆ ಉಗ್ರಾಣದಲ್ಲೇ ಉಳಿಸಿ, ಕೊನೆಗೆ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳುಹಿಸಿರುವುದು ಕೊಪ್ಪಳದ ಕಿಮ್ಸ್ ಆಸ್ಪತ್ರೆಯ ಔಷಧಿ ನಿರ್ವಹಣಾ ವ್ಯವಸ್ಥೆಯನ್ನೇ ಪ್ರಶ್ನಿಸುವಂತೆ ಮಾಡಿದೆ.

ಬರೋಬ್ಬರಿ 10 ಕ್ವಿಂಟಲ್ ಔಷಧಿಗಳು ಅವಧಿ ಮುಗಿದು ತ್ಯಾಜ್ಯ ಘಟಕಕ್ಕೆ ರವಾನೆಯಾಗಿರುವ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ, ಆಸ್ಪತ್ರೆಯಲ್ಲಿ ಇನ್ನೂ 2-3 ಟನ್ ಅವಧಿ ಮೀರಿದ ಔಷಧಿಗಳಿರುವುದು ಪತ್ತೆಯಾಗಿದೆ. ''''ಕನ್ನಡಪ್ರಭ'''' ವರದಿಯ ಬಳಿಕ ಈ ಔಷಧಿಗಳನ್ನು ಸಂಗ್ರಹಿಸಿಟ್ಟಿದ್ದ ಉಗ್ರಾಣವನ್ನು ಸೀಜ್ ಮಾಡಲಾಗಿದ್ದು, ಕಿಮ್ಸ್ ನಿರ್ದೇಶಕರು ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ವೆಬ್‌ಪೋರ್ಟಲ್ ಇದ್ದರೂ ಬಳಸಿಲ್ಲ: ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ ಎದುರಾದಾಗ ರೋಗಿಗಳಿಗೆ ಹೊರಗಿನಿಂದ ಔಷಧಿ ಖರೀದಿಸುವ ಅನಿವಾರ್ಯತೆ ಎದುರಾಗುತ್ತದೆ. ಮತ್ತೊಂದೆಡೆ, ಆಸ್ಪತ್ರೆಗಳಲ್ಲಿ ಸಂಗ್ರಹಿಸಿಟ್ಟ ಔಷಧಿಗಳೇ ಬಳಕೆಯಾಗದೆ ಅವಧಿ ಮುಗಿದು ತ್ಯಾಜ್ಯವಾಗುತ್ತಿರುವುದು ಆಡಳಿತಾತ್ಮಕ ವೈಫಲ್ಯಕ್ಕೆ ಕನ್ನಡಿ ಹಿಡಿದಿದೆ.

ಒಂದು ಆಸ್ಪತ್ರೆಯಲ್ಲಿ ಬೇಡಿಕೆಗಿಂತ ಹೆಚ್ಚಿನ ಔಷಧಿಗಳು ಸಂಗ್ರಹವಾಗಿದ್ದರೆ, ಅವುಗಳ ಅವಧಿ ಮುಗಿಯುವ ಮುನ್ನವೇ ಸರ್ಕಾರ ರೂಪಿಸಿರುವ ವೆಬ್‌ಪೋರ್ಟಲ್‌ನಲ್ಲಿ ವಿವರಗಳನ್ನು ಅಪ್‌ಲೋಡ್ ಮಾಡಬೇಕು. ರಾಜ್ಯದ ಇತರ ಸರ್ಕಾರಿ ಆಸ್ಪತ್ರೆಗಳು ಹಾಗೂ ಕಿಮ್ಸ್ ಆಸ್ಪತ್ರೆಗಳಲ್ಲಿ ಆ ಔಷಧಿಗಳಿಗೆ ಬೇಡಿಕೆ ಇದ್ದರೆ, ನಿಯಮಾನುಸಾರ ಅವುಗಳನ್ನು ಅಲ್ಲಿಗೆ ವರ್ಗಾಯಿಸಿ ಬಳಕೆಗೆ ಒದಗಿಸಬಹುದು. ಹೀಗಿರುವಾಗ, ಹೆಚ್ಚುವರಿ ಔಷಧಿಗಳ ಮಾಹಿತಿಯನ್ನು ಸಮಯಕ್ಕೆ ಸರಿಯಾಗಿ ಹಂಚಿಕೊಳ್ಳಲಾಗಿತ್ತೇ? ಬೇರೆ ಆಸ್ಪತ್ರೆಗಳಲ್ಲಿ ಬೇಡಿಕೆ ಇದ್ದರೂ ಔಷಧಿಗಳನ್ನು ಏಕೆ ವರ್ಗಾಯಿಸಲಿಲ್ಲ ಎಂಬ ಪ್ರಶ್ನೆಗಳು ಎದ್ದಿವೆ.

ಬಳಕೆಯಾಗಬೇಕಿದ್ದ ಔಷಧಿ ತ್ಯಾಜ್ಯಕ್ಕೆ!: ಆಸ್ಪತ್ರೆಯ ವೈದ್ಯರು ತಮ್ಮ ವಿಭಾಗಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಸಂಖ್ಯೆಯನ್ನು ಆಧರಿಸಿ ಔಷಧಿಗಳ ಅಗತ್ಯವನ್ನು ಅಂದಾಜಿಸಿ ಬೇಡಿಕೆ ಸಲ್ಲಿಸಬೇಕು. ಅದರಂತೆ ಖರೀದಿಸುವ ಔಷಧಿಗಳು ಸಾಧ್ಯವಾದಷ್ಟು ಸಂಪೂರ್ಣವಾಗಿ ಬಳಕೆಯಾಗುವಂತೆ ನೋಡಿಕೊಳ್ಳುವುದು ಸಂಬಂಧಪಟ್ಟ ಅಧಿಕಾರಿಗಳ ಜವಾಬ್ದಾರಿ. ಔಷಧಿಗಳ ಶೇ.99ರಷ್ಟು ಬಳಕೆಯಾಗಬೇಕು ಎಂಬ ನಿರೀಕ್ಷೆಯೂ ಇದೆ.

ಆರು ತಿಂಗಳ ಅಗತ್ಯಕ್ಕೆ ಔಷಧಿ ಖರೀದಿಸುವಾಗ ಅವುಗಳಿಗೆ 18 ತಿಂಗಳ ಅವಧಿ ಇರುವಂತೆ ನೋಡಿಕೊಳ್ಳಬೇಕು ಎಂಬ ನಿಯಮವಿದೆ ಎಂದು ತಿಳಿದುಬಂದಿದೆ. ಹೀಗಿದ್ದರೂ ಇಷ್ಟೊಂದು ಪ್ರಮಾಣದ ಔಷಧಿಗಳು ಅವಧಿ ಮುಗಿಯುವ ವರೆಗೆ ಬಳಕೆಯಾಗದೆ ಉಳಿದಿರುವುದಕ್ಕೆ ಕಾರಣವೇನು ಎಂಬುದು ತನಿಖೆಯಿಂದ ಸ್ಪಷ್ಟವಾಗಬೇಕಿದೆ.

ಔಷಧಿಗಳ ಬೇಡಿಕೆಯನ್ನು ವೈಜ್ಞಾನಿಕವಾಗಿ ಅಂದಾಜಿಸಲಾಗಿತ್ತೇ? ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಲಾಗಿತ್ತೇ? ಖರೀದಿಗೆ ಶಿಫಾರಸು ಮಾಡಿದವರು ಯಾರು? ಔಷಧಿಗಳನ್ನು ವಿತರಿಸುವ ಜವಾಬ್ದಾರಿ ಹೊಂದಿದ್ದವರು ಯಾರು? ಅವುಗಳ ಬಳಕೆ ಹಾಗೂ ದಾಸ್ತಾನು ಪರಿಶೀಲನೆ ಏಕೆ ನಡೆಯಲಿಲ್ಲ ಎಂಬ ಪ್ರಶ್ನೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಉತ್ತರಿಸಬೇಕಿದೆ.

ಇನ್ನೂ ಎಷ್ಟು ಔಷಧಿ ವ್ಯರ್ಥವಾಗಿದೆ?: ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಳುಹಿಸಲಾದ 10 ಕ್ವಿಂಟಲ್ ಔಷಧಿಗಳಷ್ಟೇ ಅಲ್ಲದೆ, ಆಸ್ಪತ್ರೆಯ ಉಗ್ರಾಣದಲ್ಲಿ ಇನ್ನೂ 2–3 ಟನ್ ಅವಧಿ ಮೀರಿದ ಔಷಧಿಗಳಿರುವುದು ಬೆಳಕಿಗೆ ಬಂದಿದೆ. ''''ಕನ್ನಡಪ್ರಭ''''ದಲ್ಲಿ ಈ ಕುರಿತು ವರದಿ ಪ್ರಕಟವಾದ ಬಳಿಕ ಅವುಗಳನ್ನು ಸಂಗ್ರಹಿಸಿಟ್ಟಿದ್ದ ಉಗ್ರಾಣವನ್ನು ಸೀಜ್ ಮಾಡಲಾಗಿದೆ.

ಅವಧಿ ಮೀರಿದ ಔಷಧಿಗಳ ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ರೋಗಿಗಳಿಗೆ ವಿತರಿಸಬಹುದಾಗಿದ್ದ ಔಷಧಿಗಳನ್ನು ಸಕಾಲದಲ್ಲಿ ವಿತರಿಸದೆ ಅವುಗಳ ಅವಧಿ ಮುಗಿಯಲು ಕಾರಣವಾದ ಅಂಶಗಳ ಕುರಿತು ಪರಿಶೀಲನೆ ನಡೆಯುತ್ತಿದೆ. ಔಷಧಿಗಳ ಖರೀದಿ, ದಾಸ್ತಾನು, ವಿತರಣೆ ಮತ್ತು ಬಳಕೆಯ ದಾಖಲೆಗಳನ್ನು ಪರಿಶೀಲಿಸಿದರೆ ನಿರ್ಲಕ್ಷ್ಯ ಎಲ್ಲಿ ನಡೆದಿದೆ ಎಂಬುದು ತಿಳಿಯಲಿದೆ.

ಅಧಿಕಾರಿಗಳಿಗೆ ನೋಟಿಸ್: ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಕಿಮ್ಸ್ ನಿರ್ದೇಶಕರು, ಔಷಧಿ ನಿರ್ವಹಣಾಧಿಕಾರಿ ಹಾಗೂ ಆಸ್ಪತ್ರೆಯ ಮುಖ್ಯ ವೈದ್ಯರಿಗೆ ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದ ಔಷಧಿಗಳು ಬಳಕೆಯಾಗದೆ ಅವಧಿ ಮುಗಿಯಲು ಕಾರಣವೇನು? ಔಷಧಿಗಳ ಬೇಡಿಕೆ ಮತ್ತು ಖರೀದಿಯಲ್ಲಿ ನಿಗದಿತ ನಿಯಮಗಳನ್ನು ಪಾಲಿಸಲಾಗಿದೆಯೇ? ದಾಸ್ತಾನು ನಿರ್ವಹಣೆಯಲ್ಲಿ ಲೋಪವಾಗಿದೆಯೇ? ಎಂಬ ಕುರಿತು ಉತ್ತರಿಸುವಂತೆ ಸೂಚಿಸಲಾಗಿದೆ.

ನೋಟಿಸ್‌ಗೆ ಅಧಿಕಾರಿಗಳು ನೀಡುವ ಉತ್ತರ ಹಾಗೂ ಔಷಧಿಗಳ ಖರೀದಿ ಮತ್ತು ವಿತರಣೆಯ ದಾಖಲೆಗಳ ಪರಿಶೀಲನೆಯ ಬಳಿಕ ಪ್ರಕರಣದ ಸಂಪೂರ್ಣ ಚಿತ್ರಣ ಹೊರಬರಬೇಕಿದೆ.

ಸೀಜ್‌ ಮಾಡಲಾಗಿದೆ: ''''ಕನ್ನಡಪ್ರಭ'''' ವರದಿಯನ್ನಾಧರಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಿ ವರದಿ ಕೇಳಲಾಗಿದೆ. ಅವಧಿ ಮೀರಿದ ಔಷಧಿಗಳನ್ನು ಸಂಗ್ರಹಿಸಿಟ್ಟಿದ್ದ ಉಗ್ರಾಣವನ್ನು ಸೀಜ್ ಮಾಡಲಾಗಿದೆ ಎಂದು ಕೊಪ್ಪಳ ಕಿಮ್ಸ್ ನಿರ್ದೇಶಕ ಡಾ. ಅಂಬ್ರೇಶ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲ ನೀಡದ್ದಕ್ಕೆ ಬೇಕರಿ ಮಾಲೀಕರಿಗೆಧಮ್ಕಿ ಹಾಕಿ ದಾಂಧಲೆ: ಇಬ್ಬರ ಬಂಧನ
ಮೆಟ್ರೋದಲ್ಲಿ ಮಹಿಳೆಯ ವಿಡಿಯೋ ಮಾಡಿದ ಕಿಡಿಗೇಡಿ ವಿರುದ್ಧ ಕೇಸ್