ಕನ್ನಡಪ್ರಭ ವಾರ್ತೆ ಮೈಸೂರುಚುನಾವಣೆ ವೇಳೆ ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದೇವೆ ಎನ್ನುವ ಸಿದ್ದರಾಮಯ್ಯನವರೇ ಭ್ರಷ್ಟಾಚಾರ, ಬೆಲೆ ಏರಿಕೆ, ರಾಜ್ಯದ ಸಾಲ ಏರಿಕೆ ನಿಮ್ಮ ಭರವಸೆ ಆಗಿತ್ತಾ? ಎಂಬುದನ್ನು ಹೇಳಿ, ನಿಮ್ಮ ಅವಧಿಯಲ್ಲಿ ಯಾವುದಕ್ಕೆ ಎಷ್ಟು ಸಾಲ ಮಾಡಿದ್ದೀರಿ, ಎಷ್ಟು ಬೆಲೆ ಏರಿಸಿದ್ದೀರಿ ಎಂಬುದನ್ನೂ ತಿಳಿಸಿ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಸವಾಲು ಹಾಕಿದರು.ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಾಲಿನಿಂದ ಹಾಲ್ಕೋಹಾಲ್‌ವರೆಗೆ, ನೀರಿಗೆ, ಸ್ಟಾಂಪ್‌ಡ್ಯೂಟಿ, ಸ್ಮಾರ್ಟ್ ಮೀಟರ್, ವಿದ್ಯುತ್‌ಕಂಬ, ಟಿಸಿ ಸೇರಿದಂತೆ ಅನೇಕ ವಸ್ತುಗಳ ಬೆಲೆಯನ್ನು ವಿಪರೀತವಾಗಿ ಹೆಚ್ಚಿಸಿದ್ದೀರಿ. ಇದು ನಿಮ್ಮ ಭರವಸೆಗಳ ಪಟ್ಟಿಯಲ್ಲಿ ಇತ್ತೇ? ಎಂದು ಪ್ರಶ್ನಿಸಿದರು.ಸುಳ್ಳು ಹೇಳುವುದಕ್ಕೆ ಚಾಂಪಿಯನ್ ಶಿಪ್ ಇಟ್ಟರೆ ಅದು ಸಿದ್ದರಾಯ್ಯಗೆ ಮಾತ್ರ ಸಿಗುವುದು. ಸುಳ್ಳು ಹೇಳುವುದು ಅವರ ಜಾಯಮಾನ. ಕೇಂದ್ರ ಸರ್ಕಾರವು ಈ ಹಿಂದೆ ಶೇ. 32 ಪ್ರತಿಶತ ತೆರಿಗೆ ಹಣ ನೀಡುತ್ತಿತ್ತು. ಈಗ ಶೇ. 42ಕ್ಕೆ ಹೆಚ್ಚಿಸಿದೆ. ಉಳಿಕೆ ಹಣವನ್ನು ವಿವಿಧ ಯೋಜನೆಗಳ ಮೂಲಕ ಹಿಂದಿರುಗಿಸುತ್ತದೆ. ಆದರೂ ತೆರಿಗೆ ಬಾಕಿ ನೀಡಿಲ್ಲ ಎಂದು ಹೇಳಿ ತಮ್ಮ ತಪ್ಪನ್ನು ಮುಚ್ಚಿ ಹಾಕಿಕೊಳ್ಳುತ್ತಿದ್ದಾರೆ ಎಂದು ಅವರು ಕಟುವಾಗಿ ಟೀಕಿಸಿದರು.ಸ್ಮಾರ್ಟ್ ಮೀಟರ್‌ಗೆ ಕೇರಳದಲ್ಲಿ 1800 ರೂ. ಇದೆ. ನಮ್ಮಲ್ಲಿ 4 ಸಾವಿರ ಇದೆ. ರೈತರು ತಮ್ಮ ಪಂಪ್ ಸೆಟ್ ಗಳಿಗೆ ಒಂದು ವಿದ್ಯುತ್ ಕಂಬ ಹಾಕಿಸಿಕೊಳ್ಳಲು 15 ಸಾವಿರ ಕೊಡಬೇಕಾದ ಪರಿಸ್ಥಿತಿ ಇದೆ. ಒಂದು ಟಿಸಿಗೆ 30 ಸಾವಿರ ಇದ್ದದ್ದು ಈಗ 3 ಲಕ್ಷ ಕೊಡಬೇಕು. ಈ ಪರಿಸ್ಥಿತಿಯನ್ನು ತಂದಿಟ್ಟಿರುವುದು ಯಾರು ಸಿದ್ದರಾಮಯ್ಯನವರೇ? ಪೆಟ್ರೋಲ್‌ದರವನ್ನು 3.85 ರೂ. ಹೆಚ್ಚಿಸಿದರೆ, ಡೀಸೆಲ್‌ದರವನ್ನು 5.85 ರೂ. ಹೆಚ್ಚಿಸಿದ್ದೀರಿ. 20 ರೂ. ಸ್ಟಾಂಪ್ ಪೇಪರ್‌ಸಿಗದಂತೆಯೇ ಮಾಡಿದ್ದೀರಿ. ವಾಹನ ನೊಂದಣಿ ಶುಲ್ಕ ಹೆಚ್ಚಿಸಿದ್ದೀರಿ, ಪ್ರತಿ ಯೂನಿಟ್ ವಿದ್ಯುತ್‌ದರ ಏರಿಸಿದ್ದೀರಿ ಎಂದರು.ನಿಮ್ಮ ಸಾಧನೆಯ ಪಟ್ಟಿಯಲ್ಲಿ ದರ ಏರಿಸಿದ್ದು, ಸಾಲ ಮಾಡಿದ ಪಟ್ಟಿಯನ್ನು ಹಾಕಬೇಕಿತ್ತು. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಆತ್ಮಹತ್ಯೆ ಮಾಡಿಕೊಂಡರು, 2 ವರ್ಷದಲ್ಲಿ 736 ಬಾಣಂತಿಯರು ಮೃತಪಟ್ಟಿದ್ದಾರೆ, 1100ಕ್ಕೂ ನವಜಾತ ಶಿಶುಗಳು ಮೃತಪಟ್ಟಿವೆ, 3 ಸಾವಿರ ರೈತರು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಲ್ಲಾ ಇಲಾಖೆಯಲ್ಲಿಯೂ ಭ್ರಷ್ಟಾಚಾರ ಮಿತಿ ಮೀರಿದೆ ಇದು ಸಂಭ್ರಮ ಪಡುವ ಕಾರ್ಯವೇ? ಪೊಲೀಸರ ಮೇಲೆ ದಾಳಿಯಾಗುತ್ತಿದೆ. ಕೊಲೆ, ದರೋಡೆ ಹೆಚ್ಚಾಗುತ್ತಿದೆ. ಇದೆಲ್ಲವೂ ಸಂಭ್ರಮ ಪಡುವ ಸಂಗತಿಯೇ ಎಂದು ಅವರು ಪ್ರಶ್ನಿಸಿದರು.ಸಾಧನೆ ಮಾಡಿ ಸಂಭ್ರಮಿಸುವುದು ಸ್ವಾಭಾವಿಕ. ಆದರೆ ಬೆಂಗಳೂರು ಮಳೆ ಬಂದು ಮುಳುಗಿರುವಾಗ, ಕಾಂಗ್ರೆಸಿಗರು ವಿಜಯನಗರದಲ್ಲಿ ತೇಲುತ್ತಿದ್ದರು. 64 ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರ ನಡುವೆಯು ಜನರ ತೆರಿಗೆ ಹಣದಲ್ಲಿ ಸಮಾವೇಶ ನಡೆದಿದೆ. ಅದು ಸರ್ಕಾರ್‌ಸಮಾವೇಶವೋ ಅಥವಾ ಕಾಂಗ್ರೆಸ್ ಸಮಾವೇಶವೋ ಎಂಬುದನ್ನು ಅಧಿಕಾರಿಗಳು ಸ್ಪಷ್ಟಪಡಿಸಬೇಕು ಎಂದು ಅವರು ಹೇಳಿದರು.ಬೆಂಗಳೂರಿನಲ್ಲಿ ಒಂದು ಚದರ ಅಡಿಗೆ 100 ರೂ. ಲಂಚ ಕೊಡಬೇಕು. ತಿಂಗಳ ಮಾಮೂಲಿ ಇವರಿಗೆ ಕಡಿಮೆ ಆಗಬಾರದು. ಪಂಚ ಗ್ಯಾರಂಟಿ ಯೋಜನೆಗಳು ಪಂಚರ್ ಆಗಿವೆ. ಶಕ್ತಿ ಯೋಜನೆ ಗ್ರಾಮಾಂತರ ಪ್ರದೆಶದಲ್ಲಿ ನಿಶ್ಯಕ್ತಿ ಯೋಜನೆ ಆಗಿದೆ. ಬಸ್ ರೂಟ್ ರದ್ದಾಗಿದೆ. ಪುರುಷ ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕಿಸಾನ್‌ಸಮ್ಮಾನ್ ಯೋಜನೆಯನ್ನೇ ಸದ್ದಿಲ್ಲದೆ ರದ್ದುಪಡಿಸಿದರು. ಎಸ್ಸಿ, ಎಸ್ಟಿಗೆ ಮೀಸಲಾದ ಹಣವನ್ನು ವಂಚಿಸಿದ್ದಾಗಿ ಗದಾ ಪ್ರಹಾರ ನಡೆಸಿದರು.ವಿಪಕ್ಷದವರನ್ನು ಬೆದರಿಸುವ ತಂತ್ರಅಧಿಕಾರ ದುರುಪಯೋಗಪಡಿಸಿಕೊಂಡು ವಿಪಕ್ಷ ನಾಯಕರನ್ನು ಬೆದರಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಬೆಳಗಾವಿಯಲ್ಲಿ ನನ್ನನ್ನು ಬೆದರಿಸಲು ಮುಂದಾದರು. ಕಲ್ಬುರ್ಗಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ಅದನ್ನು ನಾನು ಕಟುವಾಗಿ ಟೀಕಿಸುತ್ತೇನೆ. ಆನೆ ಹೋಗುತ್ತಿರುತ್ತೆ ನಾಯಿ ಬೊಗಳುತ್ತೆ, ಆಕಾಶಕ್ಕೆ ಉಗಿದರೆ ಅವನ ಮುಖಕ್ಕೆ ಬೀಳುವುದು ಎಂಬುದು ಸಾಮಾನ್ಯ ಪದ ಬಳಕೆ. ಇದಕ್ಕೆ ಗುಂಡಾಗಿರಿ ಮಾಡುವುದೇ? ಇದಕ್ಕೀ ಜನ ಉತ್ತರ ಕೊಡುತ್ತಾರೆ. ರಿಪಬ್ಲಿಕ್ ಕಲ್ಬುರ್ಗಿ ಬಹಳ ದಿನ ನಡೆಯುವುದಿಲ್ಲ. ಪೊಲೀಸರು ಯಾವುದೇ ಕಾರಣಕ್ಕೂ ಆಡಳಿತ ಪಕ್ಷದ ಕೈಗೊಂಬೆ ಆಗಬಾರದು ಎಂದರು.ಸುದ್ದಿಗೋಷ್ಠಿಗೂ ಮುನ್ನ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ಚಾರ್ಜ್ ಶೀಟ್ ಬಿಡುಗಡೆಗೊಳಿಸಿದರು. ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ, ಜಿಲ್ಲಾಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ, ಅಲ್ಪಸಂಖ್ಯಾತ ಮೋರ್ಚಾ ರಾಜ್ಯಾಧ್ಯಕ್ಷ ಡಾ. ಅನಿಲ್ ಥಾಮಸ್, ಪ್ರಕೋಷ್ಠಗಳ ರಾಜ್ಯಸಂಚಾಲಕರಾದ ಎನ್.ವೈ. ಫಣೀಶ್, ಮಾಜಿ ಮೇಯರ್‌ಸಂದೇಶ್ ಸ್ವಾಮಿ, ನಗರ ವಕ್ತಾರ ಮೋಹನ್, ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ರಘು, ಕೇಬಲ್ ಮಹೇಶ್, ಉಪಾಧ್ಯಕ್ಷ ರುದ್ರಮೂರ್ತಿ, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಮಾಧ್ಯಮ ಸಹ ಸಂಚಾಲಕರಾದ ಬಿ.ಎಂ. ಸಂತೋಷ್ ಕುಮಾರ್ ಇದ್ದರು.