ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಸವಣಾಲು ಗ್ರಾಮದ ಹಿತ್ತಿಲಪೇಲ ಎಂಬಲ್ಲಿ ಕಳೆದ ವರ್ಷ ಜೂ. 15 ರಂದು ದ್ವಿಚಕ್ರ ವಾಹನದ ಮೂಲಕ ಹಳ್ಳದ ನೀರಿನಲ್ಲಿ ಕೊಚ್ಚಿಕೊಂಡು ಹೋದ ಪ್ರದೇಶದಲ್ಲಿ ನದಿ ತುಂಬಿ ಹರಿಯುತ್ತದೆ ನದಿ ದಾಟುವುದು ನಿಷೇಧಿಸಲಾಗಿದೆ ಎಂಬ ಬ್ಯಾನರ್ ಹಾಕುವ ಮೂಲಕ ಮೂಲನಿವಾಸಿಗಳಿಗೆ ದಿಗ್ಬಂಧನ ವಿಧಿಸುವ ಕಾರ್ಯ ಇಲಾಖೆಗಳು ಮಾಡಿವೆ.ಸವಣಾಲು ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಹಿತ್ತಿಲಪೇಲ ಎಂಬಲ್ಲಿ 9 ಆದಿವಾಸಿ ಮಲೆಕುಡಿಯ ಕುಟುಂಬಗಳು ಎರಡು ಶತಮಾನಗಳಿಂದ ವಾಸಿಸುತ್ತಿವೆ. ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಜೀವಿಸುತ್ತಿರುವ ಕುಟುಂಬಗಳು ವಿದ್ಯುತ್, ರಸ್ತೆ, ಸೇತುವೆ ಮುಂತಾದ ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಸ್ವಾತಂತ್ರ್ಯ ಲಭಿಸಿ 79 ವರ್ಷಗಳಾದರೂ ಮೂಲಭೂತ ಸೌಕರ್ಯಗಳನ್ನು ಒದಗಿಸಲು ವಿಫಲವಾದ ಆಡಳಿತ ವ್ಯವಸ್ಥೆ ಇದೀಗ ಸಂಪರ್ಕ ಕೊಂಡಿಯಾಗಿರುವ ಇಲ್ಲಿ ನದಿಯನ್ನೇ ದಾಟಬಾರದು ಎಂದು ಬ್ಯಾನರ್ ಅಳವಡಿಸುವ ಮೂಲಕ ಆದಿವಾಸಿಗಳಿಗೆ ದಿಗ್ಬಂಧನ ವಿಧಿಸುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನವನ್ನು ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆ ಮಾಡಿದೆ.ಕಳೆದ ವರ್ಷ ಯುವಕರು ಹಳ್ಳದ ನೀರಿನ ರಭಸಕ್ಕೆ ದ್ವಿಚಕ್ರ ಸಮೇತ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಅದೃಷ್ಟವಶಾತ್ ಬದುಕಿ ಬಂದಿದ್ದರು. ಆ ಸಂದರ್ಭದಲ್ಲಿ ತಾಲೂಕು , ಜಿಲ್ಲಾ ಆಡಳಿತದ ಅಧಿಕಾರಿಗಳು ಸೇರಿದಂತೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಿತ್ತಿಲಪೇಲಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ನಿವಾಸಿಗಳು ಅಧಿಕಾರಿಗಳ ಜನಪ್ರತಿನಿಧಿಗಳ ಮುಂದೆ ತಮಗೆ ಕನಿಷ್ಟ ಸಂಪರ್ಕಕ್ಕೆ ಒಂದು ಸೇತುವೆ ನಿರ್ಮಿಸಿಕೊಡಿ ಎಂಬ ಬೇಡಿಕೆ ಇಟ್ಟಿದ್ದರು. ಸೇತುವೆ ನಿರ್ಮಾಣ ಮಾಡುವ ಬಗ್ಗೆ ಎಲ್ಲರೂ ಭರವಸೆ ನೀಡಿದ್ದರು. ಆದರೆ ಇಲ್ಲಿಯ ತನಕವೂ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ಕೆಲಸಗಳು ನಡೆದಿಲ್ಲ. ಅಧಿಕಾರಿಗಳು, ಜನಪ್ರತಿನಿಧಿಗಳು ನೀಡಿದ ಭರವಸೆಗಳು ಇಲ್ಲಿಯ ತನಕವೂ ಈಡೇರಿಲ್ಲ.