ಹಾವೇರಿ: ನಮ್ಮ ದೈನಂದಿನ ಚಟುವಟಿಕೆಯಲ್ಲಿ ನೀರು ಅತ್ಯಗತ್ಯವಾಗಿದೆ. ಹಾಗಾಗಿ ನೀರಿನ ಸಂರಕ್ಷಣೆ ಜತೆಗೆ ನೀರನ್ನು ಮಿತವಾಗಿ ಬಳಸುವುದು ಅವಶ್ಯಕವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಆರ್. ಮುತಾಲಿಕದೇಸಾಯಿ ತಿಳಿಸಿದರು.ನಗರದ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಎನ್ಎಸ್ಎಸ್ ಘಟಕದ ಸಹಯೋಗದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ನೀರು ನೈಸರ್ಗಿಕ ಸಂಪತ್ತಾಗಿದ್ದು, ಭೂಮಿಯ ಮೇಲಿನ ಪ್ರತಿ ಜೀವಸಂಕುಲಕ್ಕೂ ನೀರು ಅಗತ್ಯವಾಗಿದೆ. ಒಬ್ಬ ವ್ಯಕ್ತಿ ಒಂದು ದಿನಕ್ಕೆ ಸರಾಸರಿ 45 ಲೀಟರ್ ಬಳಕೆ ಮಾಡುತ್ತಾನೆ. ಮುಂದಿನ ಪೀಳಿಗೆಗೆ ನೀರಿನ ಅಭಾವ ಉಂಟಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ನೀರು ವ್ಯರ್ಥವಾಗದಂತೆ ಅಗತ್ಯಕ್ಕೆ ತಕ್ಕಂತೆ ಮಿತವಾಗಿ ಬಳಸಬೇಕು ಹಾಗೂ ನೈಸರ್ಗಿಕ ಸಂಪತ್ತು ಉಳಿಸಿವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಸಲಹೆ ನೀಡಿದರು.ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಉಪ ಪರಿಸರ ಅಧಿಕಾರಿ ಲೋಹಿತಕುಮಾರ ಪಿ.ಜೆ. ಅವರು ನೀರಿನ ಮಹತ್ವದ ಕುರಿತು ಉಪನ್ಯಾಸ ನೀಡಿದರು.ಸಿಂದಗಿ ಶಾಂತವೀರೇಶ್ವರ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಸಿ.ಎನ್. ಗೌಡರ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಿ.ಆರ್. ಮುತಾಲಿಕದೇಸಾಯಿ ಅವರು ಔಷಧೀಯ ಸಸಿಗಳನ್ನು ನೆಟ್ಟು ನೀರು ಹಾಕಿದರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಚ್. ಜತ್ತಿ, ಡಾ. ಗುಹೇಶ್ವರ ಪಾಟೀಲ ಇತರರು ಉಪಸ್ಥಿತರಿದ್ದರು. ಡಿ.ಕೆ. ಶಿವಕುಮಾರಗೆ ನಿಂದಿಸಿಲ್ಲ: ಅರುಣಕುಮಾರ
ರಾಣಿಬೆನ್ನೂರು: ವಿಧಾನಸಭೆಯಲ್ಲಿ ಪಕ್ಷದ 18 ಶಾಸಕರ ಅಮಾನತು ಹಾಗೂ ಗುತ್ತಿಗೆ ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ವಿಷಯ ಕುರಿತು ಹಾವೇರಿಯಲ್ಲಿ ಇತ್ತೀಚೆಗೆ ಬಿಜೆಪಿ ವತಿಯಿಂದ ನಡೆಸಲಾದ ಪ್ರತಿಭಟನೆ ಸಮಯದಲ್ಲಿ ರಾಜ್ಯದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ನಾನಲ್ಲ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ತಿಳಿಸಿದರು.ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾನು ಕೂಡ ಜವಾಬ್ದಾರಿ ಸ್ಥಾನದಲ್ಲಿದ್ದು ಆ ರೀತಿ ಮಾತನಾಡಿಲ್ಲ. ಗುಂಪಿನಲ್ಲಿ ಯಾರೋ ಆ ರೀತಿ ಮಾತನಾಡಿರಬೇಕು. ಯಾರೇ ಆಗಿರಲಿ, ಆ ರೀತಿ ಮಾತನಾಡುವುದು ಸರಿಯಲ್ಲ. ಅದಕ್ಕಾಗಿ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.ನಗರಸಭಾ ಸದಸ್ಯ ನಿಂಗರಾಜ ಕೋಡಿಹಳ್ಳಿ ಮಾತನಾಡಿ, ಪ್ರತಿಭಟನೆ ಸಂದರ್ಭದಲ್ಲಿ ನಮ್ಮ ಜಿಲ್ಲಾಧ್ಯಕ್ಷರು ಆಡಿರುವ ಮಾತನ್ನು ತಿರುಚಲಾಗಿದೆ. ಬಹುಶಃ ಪಕ್ಷದ ಕಾರ್ಯಕರ್ತರಾರೋ ಆ ರೀತಿ ಮಾತನಾಡಿರಬಹುದು. ಆದರೂ ಯಾವುದೇ ವ್ಯಕ್ತಿಯ ಬಗ್ಗೆ ವೈಯಕ್ತಿಕ ನಿಂದನೆ ಸರಿಯಲ್ಲ. ರಾಜಕೀಯವನ್ನು ರಾಜಕೀಯವಾಗಿಯೇ ನೋಡಬೇಕೆ ಹೊರತು ಅದನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದರು.
ಪವನಕುಮಾರ ಮಲ್ಲಾಡದ ಸುದ್ದಿಗೋಷ್ಠಿಯಲ್ಲಿದ್ದರು.