ಕನ್ನಡಪ್ರಭ ವಾರ್ತೆ ಕುಶಾಲನಗರ
ಹಾರಂಗಿ ಜಲಾಶಯ ಇದುವರೆಗೆ ನಾಲ್ಕು ಬಾರಿ ತುಂಬಿದ್ದು ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಸಂದರ್ಭ ಮುನ್ನೆಚ್ಚರಿಕೆ ವಹಿಸಿದ ಕಾರಣ ಕುಶಾಲನಗರ ವ್ಯಾಪ್ತಿಯ ನದಿ ತಟದ ತಗ್ಗು ಪ್ರದೇಶಗಳು ಜಲಾವೃತಗೊಂಡರೂ, ಪ್ರವಾಹ ಉಂಟಾಗುವುದನ್ನು ತಪ್ಪಿಸುವಲ್ಲಿ ಅಣೆಕಟ್ಟು ಅಧಿಕಾರಿಗಳು ಯಶಸ್ಸು ಸಾಧಿಸಿದ್ದರು. ಯಾವುದೇ ರೀತಿಯ ಪ್ರವಾಹ ಎದುರಾಗದಂತೆ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಡುಗಡೆ ಸಂದರ್ಭ ಎಚ್ಚರ ವಹಿಸಲಾಗಿತ್ತು ಎಂದು ಹಾರಂಗಿ ಅಣೆಕಟ್ಟು ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ಅವರು ತಿಳಿಸಿದ್ದಾರೆ.ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಈ ಸಾಲಿನಲ್ಲಿ ಮೇ ತಿಂಗಳಲ್ಲಿ 302 ಮಿಲಿಮೀಟರ್ ಪ್ರಮಾಣದ ಮಳೆ ಸುರಿದಿದ್ದು ನಂತರ ಪ್ರತಿ ತಿಂಗಳು ಸರಾಸರಿ 150 ಮಿಲಿ ಮೀಟರ್ ಪ್ರಮಾಣದ ಮಳೆ ಬಿದ್ದ ದಾಖಲೆ ಕಂಡು ಬಂದಿದೆ. ಈ ಸಾಲಿನ ಮಳೆಗಾಲದಲ್ಲಿ ಇದುವರೆಗೆ ಸುಮಾರು ಅಂದಾಜು 950 ಮಿಲಿ ಮೀಟರ್ ಪ್ರಮಾಣದ ಮಳೆ ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಸುರಿದಿದೆ.ಕಳೆದ ವರ್ಷ ಇದೇ ಅವಧಿಯಲ್ಲಿ ಒಟ್ಟು 1200 ಮಿಮಿ ಪ್ರಮಾಣದ ಮಳೆ ಬಿದ್ದಿತ್ತು.
ಸುದೀರ್ಘ ಮಳೆ ಸುರಿದರೂ ಪಟ್ಟಣ ಅಥವಾ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಪ್ರಮಾಣದ ಅನಾಹುತಗಳು ಉಂಟಾಗಿಲ್ಲ ಎಂದು ಕಂದಾಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.