ಭದ್ರಾ ಮೇಲ್ದಂಡೆಗೆ ನೀರು: ಸೆ.1ರಂದು ದಾವಣಗೆರೆ ಬಂದ್‌

KannadaprabhaNewsNetwork |  
Published : Aug 30, 2026, 01:15 AM IST
29ಕೆಡಿವಿಜಿ4-ದಾವಣಗೆರೆ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಸಭೆಯ ನಂತರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ. | Kannada Prabha

ಸಾರಾಂಶ

ಬರ ಪರಿಸ್ಥಿತಿಯಲ್ಲೂ ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆ ಯೋಜನೆಗೆ 3 ಟಿಎಂಸಿ ನೀರು ಬಿಡುವ ರಾಜ್ಯ ಸರ್ಕಾರದ ಆದೇಶವನ್ನು ವಿರೋಧಿಸಿ ಸೆ.1ರಂದು ದಾವಣಗೆರೆ ಮಹಾನಗರ ಬಂದ್‌ಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದ್ದಾರೆ.

- ಹಿರಿಯೂರು ಉಪ ಚುನಾವಣೆಗಾಗಿ ಅಚ್ಚುಕಟ್ಟು ರೈತರನ್ನು ಬಲಿ ಕೊಡಬೇಡಿ: ರೇಣು

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬರ ಪರಿಸ್ಥಿತಿಯಲ್ಲೂ ಭದ್ರಾ ಡ್ಯಾಂನಿಂದ ಭದ್ರಾ ಮೇಲ್ದಂಡೆ ಯೋಜನೆಗೆ 3 ಟಿಎಂಸಿ ನೀರು ಬಿಡುವ ರಾಜ್ಯ ಸರ್ಕಾರದ ಆದೇಶವನ್ನು ವಿರೋಧಿಸಿ ಸೆ.1ರಂದು ದಾವಣಗೆರೆ ಮಹಾನಗರ ಬಂದ್‌ಗೆ ಕರೆ ನೀಡಲಾಗಿದೆ ಎಂದು ಬಿಜೆಪಿ ಮುಖಂಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ರೈತ ಮುಖಂಡರು, ಅಚ್ಚುಕಟ್ಟು ರೈತರು, ಬಿಜೆಪಿ ರೈತ ಮೋರ್ಚಾ ಮುಖಂಡರ ಜೊತೆಗೆ ನಡೆದ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸೆ.1ರಂದು ದಾವಣಗೆರೆ ಮಹಾನಗರ ವ್ಯಾಪ್ತಿಯಲ್ಲಿ ಬಂದ್‌ಗೆ ಕರೆ ನೀಡಿದ್ದು, ರೈತಪರ ಹೋರಾಟಕ್ಕೆ ಜಿಲ್ಲಾ ಕೇಂದ್ರದ ಸಮಸ್ತರೂ ಸಹಕರಿಸಿ, ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದರು.

ಸರ್ಕಾರ ಭದ್ರಾ ಡ್ಯಾಂ ವ್ಯಾಪ್ತಿಯ ಅಚ್ಚುಕಟ್ಟು ರೈತರ ಬದುಕಿನೊಂದಿಗೆ ಹುಡುಗಾಟವಾಡುತ್ತಿದೆ. ಭದ್ರಾ ಮೇಲ್ದಂಡೆಗೆ ನೀರು ಬಿಡುವ ಬಗ್ಗೆ ನಿಯಮ, ಷರತ್ತು ಸಹ ಇದೆ. ಆದರೆ, ಅದನ್ನೆಲ್ಲಾ ಗಾಳಿಗೆ ತೂರಿ, ಆದೇಶಿಸಿರುವುದು ರೈತವಿರೋಧಿ ನೀತಿ. ತುಂಗಾ ನದಿಯಿಂದ ಭದ್ರಾ ಡ್ಯಾಂಗೆ 17.41 ಟಿಎಂಸಿ ನೀರು ತುಂಬಿಸಬೇಕು. ಭದ್ರಾ ಡ್ಯಾಂಗೆ ತುಂಬಿದ ನೀರನ್ನೇ ಭದ್ರಾ ಮೇಲ್ದಂಡೆ ಯೋಜನೆಗೆ ಹರಿಸಬೇಕು. ಆದರೆ, ಸರ್ಕಾರವೇ ಮಾಡಿದ್ದ ಆದೇಶ, ನಿಯಮವನ್ನು ಈಗಿನ ಸರ್ಕಾರ ಕಡೆಗಣಿಸಿದೆ. ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಸಿಎಂ ಆಗಿದ್ದಾಗ ಮುತ್ತಿನಕೊಪ್ಪ ಬಳಿ ಕಾಮಗಾರಿ ಕೈಗೊಳ್ಳಲು ಹಣ ನೀಡಿದ್ದರು. ಈಗ ಶೇ.20ರಷ್ಟು ಮಾತ್ರ ಕಾಮಗಾರಿ ಬಾಕಿ ಇದೆ. ರಾಜ್ಯ ಸರ್ಕಾರ ₹30 ಕೋಟಿ ಬಿಡುಗಡೆ ಮಾಡಿ, ಕಾಮಗಾರಿ ಪೂರ್ಣಗೊಳಿಸುವ ಕೆಲಸ ಮಾಡಲಿ ಎಂದು ಆಗ್ರಹಿಸಿದರು.

ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ರೈತರು ಒಟ್ಟಾಗಿ ಮುಖ್ಯಮಂತ್ರಿ, ಜಲ ಸಂಪನ್ಮೂಲ ಸಚಿವರು, ಗೃಹ ಸಚಿವರನ್ನು ಭೇಟಿ ಮಾಡುತ್ತೇವೆ. ನಮ್ಮ ಹೋರಾಟ ನಮ್ಮ ಹಕ್ಕಿಗಾಗಿ. 3 ವರ್ಷದಿಂದ ಭದ್ರಾ ನೀರಿಗಾಗಿ ಹೋರಾಟ ನಡೆಸುತ್ತಿದ್ದೇವೆ. ನೀರಿನ ವಿಚಾರ ಬಂದಾಗ ಮಂಡ್ಯ, ಮೈಸೂರು ಭಾಗದ ಎಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡುತ್ತಾರೆ. ಹಾಗಾಗಿ, ದಾವಣಗೆರೆ ಜನತೆ, ಶಾಲೆ ಕಾಲೇಜು, ವರ್ತಕರು, ಉದ್ಯಮಿಗಳು, ವಾಹನ ಮಾಲೀಕರು, ಖಾಸಗಿ ಬಸ್ಸು, ಲಾರಿ ಮಾಲೀಕರು ಹೀಗೆ ಎಲ್ಲರಿಗೂ ಸೆ.1ರಂದು ಬಂದ್‌ಗೆ ಸಹಕರಿಸುವಂತೆ ಮನವಿ ಮಾಡುತ್ತಿದ್ದೇವೆ. ಇವತ್ತು ಭದ್ರಾ ಡ್ಯಾಂನಿಂದ ನೀರು ಬಿಟ್ಟರೆ, ನಾಳೆ ದಾವಣಗೆರೆ ಜನತೆಗೆ ಕುಡಿಯುವುದಕ್ಕೆ ನೀರು ಸಿಗುವುದಿಲ್ಲ ಎಂಬ ಅರಿವು ಇರಲಿ ಎಂದರು.

ಪಕ್ಷದ ಮುಖಂಡರಾದ ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಚಂದ್ರಶೇಖರ ಪೂಜಾರ, ಬಿ.ಜಿ.ಅಜಯಕುಮಾರ, ಬಿ.ಎಂ.ಸತೀಶ ಕೊಳೇನಹಳ್ಳಿ, ಚೇತನಾ ಬಾಯಿ, ಜಯಲಕ್ಷ್ಮಿ ಮಹೇಶ ಪಲ್ಲಾಗಟ್ಟೆ, ಎಚ್.ಸಿ.ಜಯಮ್ಮ, ದೇವೀರಮ್ಮ, ಪ್ರವೀಣ ಜಾಧವ್, ರಾಜು ವೀರಣ್ಣ, ಕೆ.ಎನ್.ವೆಂಕಟೇಶ ಇತರರು ಇದ್ದರು.

- - -

(ಕೋಟ್‌) ದಾವಣಗೆರೆ ಬಂದ್ ಹಿನ್ನೆಲೆಯಲ್ಲಿ ಆ.31ರಂದು ದಾವಣಗೆರೆ ಹಳೆ ಪ್ರವಾಸಿ ಮಂದಿರದಿಂದ ಬೈಕ್ ರ್ಯಾಲಿ ನಡೆಸಿ, ಜಿಲ್ಲಾ ಕೇಂದ್ರಾದ್ಯಂತ ಸುತ್ತಾಡಿ ಬಂದ್‌ಗೆ ಸಹಕಾರ ನೀಡುವಂತೆ ಮಹಾಜನತೆ, ವರ್ತಕರು, ಶಾಲಾ- ಕಾಲೇಜು ಆಡಳಿತ ಮಂಡಳಿಗಳಿಗೆ ಮನವಿ ಮಾಡುತ್ತೇವೆ. ಸೆ.1ರಂದು ಮಂಗಳವಾರ ದಾವಣಗೆರೆ ಬಂದ್ ಮಾಡುತ್ತೇವೆ.

- ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಮಾಜಿ ಶಾಸಕ.

- - -

-29ಕೆಡಿವಿಜಿ4: ದಾವಣಗೆರೆ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಸಭೆಯ ನಂತರ ಸುದ್ದಿಗಾರರನ್ನು ಉದ್ದೇಶಿಸಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಡವರ ಆರ್ಥಿಕ ಅಭಿವೃದ್ಧಿಗೆ ಧಗ್ರಾಯೋ ಸಹಕಾರಿ
ಪಡಿತರ ಅಕ್ಕಿ-ರಾಗಿ ಅಕ್ರಮ ಸಾಗಾಟ ಅಪಘಾತದಲ್ಲಿ ಬಯಲು!