ಕೆರೆಗಳಿಗೆ ನೀರು: ಬಾದಿಮನಾಳ ಕ್ರಾಸ್‌ನಲ್ಲಿ ರಸ್ತೆ ತಡೆ

KannadaprabhaNewsNetwork |  
Published : Nov 03, 2026, 02:30 AM IST
ಬಾದಿಮನಾಳ ಕ್ರಾಸ್‌ನಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆ ಸ್ಥಳದಲ್ಲಿ ನಜೀರಸಾಬ ಮೂಲಿಮನಿ ಮಾತನಾಡಿದರು. | Kannada Prabha

ಸಾರಾಂಶ

ಹನುಮಸಾಗರ ಸಮೀಪದ ಹನುಮನಾಳ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ರೈತರು ಬಾದಿಮನಾಳ ಕ್ರಾಸ್‌ನಲ್ಲಿ ಸೋಮವಾರ ಮತ್ತೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಹನುಮಸಾಗರ: ಸಮೀಪದ ಹನುಮನಾಳ ಹೋಬಳಿ ವ್ಯಾಪ್ತಿಯ ಕೆರೆಗಳಿಗೆ ನೀರು ಬಿಡುವಂತೆ ಆಗ್ರಹಿಸಿ ರೈತರು ಬಾದಿಮನಾಳ ಕ್ರಾಸ್‌ನಲ್ಲಿ ಸೋಮವಾರ ಮತ್ತೆ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು.

ಹನುಮನಾಳ ಹೋಬಳಿ ವ್ಯಾಪ್ತಿಯ ಬಾದಿಮನಾಳ, ಜಹಗೀರಗುಡದೂರ, ಮಾವಿನಇಟಗಿ ಗ್ರಾಮಗಳ ಕೆರೆಗಳಿಗೆ ನೀರು ತುಂಬಿಸುವಂತೆ ಆ. 17 ಮತ್ತು 18ರಂದು ಎರಡು ದಿನಗಳ ಕಾಲ ರಸ್ತೆ ತಡೆ ನಡೆಸಿದ್ದರು. ಆಗ ಸ್ಥಳಕ್ಕೆ ಆಗಮಿಸಿದ ಸಣ್ಣ ನೀರಾವರಿ ಇಲಾಖೆ ಎಇಇ ದೇವೇಂದ್ರಪ್ಪ ಇಟ್ಟಂಗಿ ರೈತರ ಮನವೊಲಿಸಿ, ಒಂದು ವಾರದಲ್ಲಿ ಕೆರೆಗಳಿಗೆ ಶೇ. 50ರಷ್ಟು ನೀರು ಬಿಡುತ್ತೇವೆ ಎಂದು ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಬಾದಿಮನಾಳ ಕೆರೆಗೆ ಎರಡು-ಮೂರು ದಿನಗಳಲ್ಲಿ ನೀರು ಬಿಟ್ಟರು. ಆದರೆ, ಹನುಮಸಾಗರದಿಂದ ಬಾದಿಮನಾಳ ಕೆರೆಗೆ ಇರುವ ಪೈಪ್‌ಲೈನ್ ಬಹಳ ಕಡೆ ಕೆಟ್ಟಿರುವುದರಿಂದ ಕೆರೆಗೆ ನೀರು ಬರಲಿಲ್ಲ. ನಾಲ್ಕೈದು ದಿನಗಳ ಕಾಲ ಅಲ್ಲಲ್ಲಿ ಪೈಪ್‌ಲೈನ್ ದುರಸ್ತಿ ಮಾಡಿಸಿದರೂ ಪ್ರಯೋಜನವಾಗಲಿಲ್ಲ. ರೈತರಿಗೆ ನಿರಾಸೆಯಾಯಿತು. ಈಗ ಮತ್ತೆ ರೈತರು ಕೆರೆಗಳಿಗೆ ನೀರು ತುಂಬಿಸುವಂತೆ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಳಗ್ಗೆ ಬಾದಿಮನಾಳ ಕ್ರಾಸ್‌ನಲ್ಲಿ ರೈತರು ಕುಷ್ಟಗಿ - ಬದಾಮಿ, ಗುಡೂರ - ಗಜೇಂದ್ರಗಡ ಸಂಪರ್ಕಿಸುವ ರಸ್ತೆ ಮೇಲೆ ಬೃಹತ್ ಗಾತ್ರದ ಮರದ ಕೊಂಬಿಗಳನ್ನು ಹಾಕಿ, ಸಂಚಾರ ಬಂದ್ ಮಾಡಿದರು. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಯಿತು.

ಹನುಮನಾಳ ಹೋಬಳಿ ವ್ಯಾಪ್ತಿಯ ಬಾದಿಮನಾಳ, ಜಹಗೀರಗುಡದೂರ, ಮಾವಿನಇಟಗಿ ಗ್ರಾಮಗಳ ಕೆರೆಗಳಿಗೆ ಕೃಷ್ಣ ಜಲ ಭಾಗ್ಯ ನಿಗಮದಿಂದ ತಾತ್ಕಾಲಿಕ ಸಂಪರ್ಕ ಕಲ್ಪಿಸಿ ಶೇ. 50ರಷ್ಟು ನೀರು ತುಂಬಿಸಲು ಅನುಮತಿ ನೀಡಿ ಒಂದು ವರ್ಷಗಳು ಕಳೆದಿವೆ. ಆದರೆ, ಇನ್ನೂವರೆಗೆ ಕೆರೆಗಳಿಗೆ ನೀರು ಹರಿಸುತ್ತಿಲ್ಲ. ಕೊಪ್ಪಳ ಏತ ನೀರಾವರಿ ಯೋಜನೆಯ ಹನುಮಸಾಗರ ಪೈಪ್‌ಲೈನ್‌ನಿಂದ ಸಣ್ಣ ನೀರಾವರಿ ಇಲಾಖೆಯು ಅಳವಡಿಸಿರುವ ಪೈಪ್‌ಲೈನ್‌ಗೆ ತಾತ್ಕಾಲಿಕ ಸಂಪರ್ಕ ಕಲ್ಪಿಸಿ ಮೂರು ಕೆರೆಗಳಿಗೆ ನೀರು ತುಂಬಿಸುವ ಕುರಿತು ಪರಿಶೀಲನೆ ನಡೆಸಲಾಗಿತ್ತು. ಆದರೆ, ಯೋಜನೆ ನನೆಗುದಿಗೆ ಬಿದ್ದಿದೆ. ಕಳೆದ ಬಾರಿ ಪ್ರತಿಭಟನೆ ಮಾಡಿದಾಗ ಸ್ಥಳಕ್ಕೆ ಬಂದ ಅಧಿಕಾರಿಗಳು ನೀರು ಬಿಡುವ ಭರವಸೆ ನೀಡಿದ್ದರು. ಹನುಮಸಾಗರದಿಂದ ಬರುವ ಪೈಪ್‌ಲೈನ್ ಕೆಟ್ಟಿದ್ದರಿಂದ ನೀರು ಬಿಟ್ಟಿಲ್ಲ. ಕೂಡಲೇ ಪೈಪ್‌ಲೈನ್ ದುರಸ್ತಿ ಮಾಡಿ ನೀರು ಬಿಡಬೇಕು. ಈ ಬಾರಿ ಕೆರೆ ತುಂಬುವ ವರೆಗೆ ಪ್ರತಿಭಟನೆ ಕೈಬಿಡಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯ ರೈತ ಸೇನೆ ಹಾಗೂ ಹಸಿರು ಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ನಜೀರಸಾಬ ಮೂಲಿಮನಿ, ಹನುಮಂತಪ್ಪ ಕೆ., ಶ್ರೀಕಾಂತ ಅಂಗಡಿ, ನೀಲಪ್ಪ ಕಡಿಯವರ, ದೇವಪ್ಪ ಮೆಣಸಗಿ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಗಿಯತ್ತ ಮುಖ ಮಾಡಿದ ರೈತ
ಸಹಕಾರ ಸಾಕು, ಕ್ಷೇತ್ರದಲ್ಲಿ ಕಾರ್ಯಕರ್ತರು ಸ್ವತಂತ್ರರಾಗಿ ಗುರುತಿಸಿಕೊಳ್ಳಿ: ಶಾಸಕಿ ಎಂ.ಪಿ. ಲತಾ