ಜಲಸಂರಕ್ಷಣೆಯ ಮಹತ್ವ ಸಾರಿದ ಜಲಾಡಳಿತ ಬಯಲಾಟ

KannadaprabhaNewsNetwork |  
Published : Apr 09, 2025, 12:31 AM IST
ಚಿತ್ರ: ೭ಎಸ್.ಎನ್.ಡಿ.೦೧- ಸಂಡೂರು ತಾಲೂಕಿನ ತಾಳೂರು ಗ್ರಾಮದಲ್ಲಿ ಶನಿವಾರ ಜಲ ಸಾಕ್ಷರತೆಯನ್ನು ಸಾರುವ ಜಲಾಡಳಿತ ಎಂಬ ಬಯಲಾಟ ಪ್ರದರ್ಶಿಸಲಾಯಿತು. | Kannada Prabha

ಸಾರಾಂಶ

ತಾಲೂಕಿನ ತಾಳೂರು ಗ್ರಾಮದಲ್ಲಿ ಜೆಎಸ್‌ಡಬ್ಲೂ ಫೌಂಡೇಶನ್, ಗ್ರಾಪಂ ಹಾಗೂ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹಯೋಗದಲ್ಲಿ ಶನಿವಾರ ಜಲ ಸಂರಕ್ಷಣೆಯ ಮಹತ್ವ ಸಾರುವ ಜಲಾಡಳಿತ ಎಂಬ ಬಯಲಾಟವನ್ನು ಪ್ರದರ್ಶಿಸಲಾಯಿತು.

ಕನ್ನಡಪ್ರಭ ವಾರ್ತೆ ಸಂಡೂರು

ತಾಲೂಕಿನ ತಾಳೂರು ಗ್ರಾಮದಲ್ಲಿ ಜೆಎಸ್‌ಡಬ್ಲೂ ಫೌಂಡೇಶನ್, ಗ್ರಾಪಂ ಹಾಗೂ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಸಹಯೋಗದಲ್ಲಿ ಶನಿವಾರ ಜಲ ಸಂರಕ್ಷಣೆಯ ಮಹತ್ವ ಸಾರುವ ಜಲಾಡಳಿತ ಎಂಬ ಬಯಲಾಟವನ್ನು ಪ್ರದರ್ಶಿಸಲಾಯಿತು.

ಜೆಎಸ್‌ಡಬ್ಲೂ ಫೌಂಡೇಶನ್ ಸದಸ್ಯ ಮಂಜುನಾಥ್ ಮೇಟಿ ಮಾತನಾಡಿ, ತಾಳೂರು ಗ್ರಾಮದಲ್ಲಿ ಜನರಿಗೆ ನೀರಿನ ನಿರ್ವಹಣೆ ಹಾಗೂ ಸಂರಕ್ಷಣೆ ಕುರಿತು ಜಾಗೃತಿ ಮತ್ತು ತರಬೇತಿ ಹಮ್ಮಿಕೊಂಡಾಗ ಜನತೆ ಹೆಚ್ಚಿನ ಆಸಕ್ತಿ ತೋರಿಸಲಿಲ್ಲ. ಇದರಿಂದ ವಿಚಲಿತನಾಗದೆ, ಗ್ರಾಮಸ್ಥರಿಂದಲೇ ಜಾಗೃತಿ ಕಾರ್ಯಕ್ರಮ ಮಾಡಬೇಕೆಂದು ಮಹಾಭಾರತದ ಕಥೆಯೊಂದಿಗೆ ಪ್ರಸ್ತುತ ಪರಿಸ್ಥಿತಿಯನ್ನು ಹೋಲಿಕೆ ಮಾಡಿ ಹೊಸ ಕಥೆಯೊಂದನ್ನು ರಚಿಸಿದೆ. ಈ ಪ್ರಯತ್ನದ ಹಿನ್ನೆಲೆ ಮೂಡಿದ್ದು ಜಲಾಡಳಿತ ಬಯಲಾಟ ಕಥೆ ಎಂದರು.

ಈ ಕಥೆಯಲ್ಲಿ ಶಕುನಿಯ ತಂತ್ರದಿಂದ ಇಂದ್ರಪ್ರಸ್ಥದಲ್ಲಿ ಬರಗಾಲ ಬಂದಾಗ, ಪಾಂಡವರು ಶ್ರೀಕೃಷ್ಣನ ಮೊರೆ ಹೊಕ್ಕು ಬರಗಾಲಕ್ಕೆ ಕಾರಣ ಮತ್ತು ಪರಿಹಾರವನ್ನು ಕೇಳಿದಾಗ, ಕೃಷ್ಣನು ಬರಗಾಲಕ್ಕೆ ಕಾರಣವಾದ ಪರಿಸರ ನಾಶ, ಅನವಶ್ಯಕವಾಗಿ ನೀರನ್ನು ಬಳಸುವುದು, ವ್ಯರ್ಥಮಾಡುವುದು, ಅರಣ್ಯ ನಾಶವಲ್ಲದೆ, ರಾಜ್ಯದಲ್ಲಿ ನೀರಿನ ನಿರ್ವಹಣೆ ಮತ್ತು ಜಲ ಸಂರಕ್ಷಣೆಗಾಗಿ ಯಾವುದೇ ಯೋಜನೆ ಅಥವಾ ಹಣಕಾಸು ಇಲ್ಲದಿರುವುದನ್ನು ತಿಳಿಸುತ್ತಾರೆ. ಮುಂದೆ ಬರಗಾಲ ಬರದಂತೆ ತಡೆಯಲು ಮಳೆ ನೀರು ಸಂರಕ್ಷಣಾ ತಂತ್ರ, ದಿನಬಳಕೆ, ಜಾನುವಾರು ಹಾಗೂ ಕೃಷಿಗೆ ಬೇಕಾದ ನೀರಿನ ಲೆಕ್ಕವನ್ನು ಮತ್ತು ಅದಕ್ಕೆ ಬೇಕಾದ ಹಣಕಾಸನ್ನು ಸಿದ್ಧಪಡಿಸಿ ಯೋಜನೆ ಅನುಷ್ಠಾನ ಮಾಡುವಂತೆ ತಿಳಿಸುತ್ತಾನೆ. ಪಾಂಡವರು ಶ್ರೀಕೃಷ್ಣನು ತಿಳಿಸಿದ ಜಲಾಡಳಿತ ಸೂತ್ರಗಳನ್ನು ಅನುಸರಿಸಿ, ಮತ್ತೆ ಸಂಪದ್ಭರಿತವಾದ ಸಾಮ್ರಾಜ್ಯವನ್ನು ಕಟ್ಟಿಕೊಳ್ಳುವುದರಲ್ಲಿ ಯಶಸ್ವಿಯಾಗುತ್ತಾರೆ ಎಂದು ತಿಳಿಸಿದರು.

ಭುವನರಾಜ್, ಪ್ರವೀಣ್‌ಕುಮಾರ್ ಬಂಡ್ರಿ, ವೀರೇಂದ್ರ ಶೆಟ್ರು, ಸುದೀಪ ಕೋರಿ, ಹೇಮಂತರಾಜ ಕೋಡಾಲು, ಕಿರಣ್ ಅಂತಾಪುರ, ಕುಮಾರಸ್ವಾಮಿ ಮೇಟಿ ಕ್ರಮವಾಗಿ ಬಾಲಕೃಷ್ಣ, ಕೃಷ್ಣ, ಧರ್ಮರಾಯ, ಭೀಮ, ಅರ್ಜುನ ಮತ್ತು ನಕುಲ ಸಹದೇವ, ಶಕುನಿ ಪಾತ್ರಗಳಲ್ಲಿ ಕಾಣಿಸಿಕೊಂಡರು.

ಜೆಎಸ್‌ಡಬ್ಲೂ ಫೌಂಡೇಶನ್ ಕೃಷಿ ವಿಭಾಗದ ಸಂಯೋಜಕ ನಾಗನಗೌಡ, ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ್, ಶಾಲೆಯ ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಬಯಲಾಟ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

PREV

Recommended Stories

‘ಉದ್ಯೋಗದಲ್ಲಿ ಕನ್ನಡಿಗರಿಗೆ ಮೀಸಲು ತನ್ನಿ’ : ನಾರಾಯಣಗೌಡ
ಅಶೋಕ್ ನೇತೃತ್ವದಲ್ಲಿ ಟನಲ್ ರಸ್ತೆ ಸಮಿತಿ ರಚನೆಗೆ ಸಿದ್ಧ: ಡಿಕೆಶಿ