ಕೊನೆಯ ಭಾಗಕ್ಕೆ ತಲುಪದ ನೀರು: ರೈತರ ಆಕ್ರೋಶ

KannadaprabhaNewsNetwork |  
Published : Aug 07, 2024, 01:03 AM IST
6ಕೆಎಂಎನ್‌ಡಿ-10ವಿ.ಸಿ.ನಾಲೆಯ ಕೊನೆಯ ಭಾಗಕ್ಕೆ ನೀರು ಹರಿಸುವಂತೆ ಒತ್ತಾಯಿಸಿ ರೈತಸಂಘದ ಕಾರ್ಯಕರ್ತರು ಕಾವೇರಿ ನೀರಾವರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ನಮ್ಮ ರೈತರು ಕಳೆದ ಎರಡು ವರ್ಷದಿಂದ ಭೀಕರ ಬರ ಪರಿಸ್ಥಿತಿ ಎದುರಿಸಿದ ಪರಿಣಾಮ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಬರದಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಅಣೆಕಟ್ಟೆಯಲ್ಲಿ ನೀರು ಸಂಪೂರ್ಣ ಭರ್ತಿಯಾಗಿರುವುದು ಸಂತಸ ತಂದಿದೆ. ಜಲಾಶಯ ಭರ್ತಿಯಾಗಿದ್ದರೂ ಸಹ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲು ಮುಂದಾಗಿರುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯ ಕೊನೆ ಭಾಗದ ಮದ್ದೂರು, ಮಳವಳ್ಳಿ, ಕೆ.ಎಂ.ದೊಡ್ಡಿ, ಕೊಪ್ಪ ವ್ಯಾಪ್ತಿಯ ನಾಲೆಗಳಿಗೆ ಪರಿಪೂರ್ಣವಾಗಿ ನೀರು ಹರಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ (ಮೂಲ ಸಂಘಟನೆ) ಕಾರ್ಯಕರ್ತರು ಹಾಗೂ ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದ ರೈತರು ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ನಗರದ ಕಾವೇರಿ ನೀರಾವರಿ ನಿಗಮದ ಕಚೇರಿ ಬಳಿ ಸೇರಿದ ಕಾರ್ಯಕರ್ತರು ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದ ನಾಲೆಗಳಿಗೆ ಕಟ್ಟು ಪದ್ಧತಿಯಲ್ಲಿ ನೀರು ಹರಿಸುವ ಅವೈಜ್ಞಾನಿಕ ಕ್ರಮವನ್ನು ಕೈಬಿಡಬೇಕು. ನೀರಿನ ಲಭ್ಯತೆ ಆಧರಿಸಿ ಅವಶ್ಯಕತೆ ಇದ್ದರೆ ಮಾತ್ರ ಬೇಸಿಗೆಯಲ್ಲಿ ಕಟ್ಟು ಪದ್ಧತಿ ನೀರು ಕೊಡಿ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೆಆರ್‌ಎಸ್ ಅಚ್ಚುಕಟ್ಟು ಪ್ರದೇಶದ ರೈತರು ಮುಂಗಾರು ಬೆಳೆ ಬೆಳೆಯಲು ಜಲಾಶಯದಿಂದ ನಾಲೆಗಳಿಗೆ ನಿರಂತರ ನೀರು ಹರಿಸಬೇಕು. ಈ ಹಿಂದೆ ಕೆಆರ್‌ಎಸ್‌ ಅಣೆಕಟ್ಟೆ ತುಂಬಿದ ಸಂದರ್ಭದಲ್ಲಿ ನಾಲೆಗಳಲ್ಲಿ ನಿರಂತರ ನೀರು ಹರಿಯುವ ಪದ್ಥತಿ ವಾಡಿಕೆಯಾಗಿದೆ, ಆದರೆ ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಶಾಸಕರು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಹೇಳಿಕೆ ನೀಡಬೇಕು ಎಂದು ಆಗ್ರಹಿಸಿದರು.

ನಮ್ಮ ರೈತರು ಕಳೆದ ಎರಡು ವರ್ಷದಿಂದ ಭೀಕರ ಬರ ಪರಿಸ್ಥಿತಿ ಎದುರಿಸಿದ ಪರಿಣಾಮ ಬೆಳೆ ಬೆಳೆಯಲು ಸಾಧ್ಯವಾಗಲಿಲ್ಲ. ಬರದಿಂದ ತತ್ತರಿಸಿದ್ದ ಜಿಲ್ಲೆಯ ಜನರಿಗೆ ಅಣೆಕಟ್ಟೆಯಲ್ಲಿ ನೀರು ಸಂಪೂರ್ಣ ಭರ್ತಿಯಾಗಿರುವುದು ಸಂತಸ ತಂದಿದೆ. ಜಲಾಶಯ ಭರ್ತಿಯಾಗಿದ್ದರೂ ಸಹ ಕಟ್ಟು ಪದ್ಧತಿಯಲ್ಲಿ ನೀರು ಹರಿಸಲು ಮುಂದಾಗಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಕೆರೆ ಕಟ್ಟೆಗಳನ್ನು ಶೀಘ್ರ ತುಂಬಿಸಬೇಕು. ಕೆರೆ ಅಚ್ಚುಕಟ್ಟು ರೈತರಿಗೆ ಭತ್ತದ ಸಸಿ ಮಡಿಗೆ ಅವಕಾಶ ನೀಡಿ ಭತ್ತ ಬೆಳೆಯಲು ಅನುವು ಮಾಡಿಕೊಡಬೇಕು. ವಿ.ಸಿ.ನಾಲಾ ಕೊನೆಯ ಭಾಗದ ಮದ್ದೂರು, ಮಳವಳ್ಳಿ, ಕೆ.ಎಂ.ದೊಡ್ಡಿ, ಕೊಪ್ಪ ಭಾಗದ ನಾಲೆಗಳಿಗೆ ನೀರನ್ನು ಹರಿಸಿ ಮುಂಗಾರು ಬೆಳೆಗೆ ಅವಕಾಶ ಮಾಡಬೇಕು ಎಂದು ಒತ್ತಾಯಿಸಿದರು.

ಮುಖ್ಯ ನಾಲೆಗಳಿಂದ ಉಪನಾಲೆಗಳಿಗೆ ನೀರು ಸಮರ್ಪಕವಾಗಿ ಹರಿಯದೆ ರೈತರ ಜಮೀನುಗಳಿಗೆ ನೀರು ತಲುಪಿಲ್ಲ. ನಾಲೆಗಳಲ್ಲಿ ತುಂಬಿರುವ ಹೂಳು, ಗಿಡ-ಗಂಟೆಗಳನ್ನು ಸ್ವಚ್ಛಗೊಳಿಸಬೇಕು. ಜಿಲ್ಲಾ ವ್ಯಾಪ್ತಿಯ ಸಕ್ಕರೆ ಕಾರ್ಖಾನೆಗಳಿಗೆ ನೀರಿನ ಕೊರತೆ ಉಂಟಾಗಿ ನಿರಂತರ ಕಬ್ಬು ಅರೆಯುವಿಕೆ ಸಾಧ್ಯವಾಗುತ್ತಿಲ್ಲ. ಹಾಗಾಗಿ ಕಾರ್ಖಾನೆಗಳಿಗೆ ನೀರು ಪೂರೈಸುವಂತೆ ಆಗ್ರಹಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ, ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ರಘುರಾಮ್‌, ಜಿಲ್ಲೆಯಲ್ಲಿ ಡಿಸೆಂಬರ್‌ ವರೆಗೂ ನಾಲೆಗಳಿಗೆ ನೀರು ಹರಿಸಲು ಕ್ರಮ ವಹಿಸುತ್ತೇವೆ, ಜಿಲ್ಲೆಯ ಕೆರೆ ಕಟ್ಟೆಗಳಿಗೆ ನೀರು ತುಂಬಿಸಲು ಈಗಾಗಲೇ ತಿಳಿಸಲಾಗಿದೆ ಎಂದಾಗ, ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ತಮ್ಮ ಹೇಳಿಕೆಯಲ್ಲಿ ಕಟ್ಟು ಪದ್ಧತಿ ನೀರು ಎಂಬುವ ಮಾತನ್ನು ಹೇಳಿರುವುದನ್ನು ಮೊದಲು ವಾಪಸ್‌ ಪಡೆದು, ನಂತರ ಅವರ ಬಳಿ ಹೇಳಿಕೆ ನೀಡಿಸಿ ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಇಂಡುವಾಳು ಚಂದ್ರಶೇಖರ್, ಪ್ರಧಾನ ಕಾರ್ಯದರ್ಶಿ ಎಸ್.ಮಂಜೇಶ್‌ಗೌಡ, ಮುಖಂಡರಾದ ಬೋರಲಿಂಗೇಗೌಡ, ವೆಂಕಟೇಶ್ ಪಣ್ಣೆದೊಡ್ಡಿ, ಸೋ.ಸಿ ಪ್ರಕಾಶ್, ಆರ್,ಕಾಂತಯ್ಯ, ಡಿ.ಎಸ್.ಚಂದ್ರಣ್ಣ, ಶಿವಲಿಂಗೇಗೌಡ, ಕಾಂತರಾಜು, ಪಿ.ಕೆ.ರಮೇಶ್, ಉಮೇಶ, ಸಿದ್ದರಾಜು, ಚನ್ನಪ್ಪ ಡಿ.ಎ.ಕೆರೆ, ಬಸವಯ್ಯ, ನಾಗರಾಜು, ಗಂಗಾಧರ, ಮರಿಯಪ್ಪ, ಮಹೇಂದ್ರ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೇಶ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರ
ತ್ಯಾಜ್ಯ ವಿಲೇವಾರಿ ಘಟಕ ತೆರವಿಗೆ ಆಗ್ರಹ