ಗದಗ: ಗದಗ-ಬೆಟಗೇರಿಯಲ್ಲಿ ಕುಡಿವ ನೀರಿನ ತೀವ್ರ ಕೊರತೆ ಉಂಟಾಗಿದ್ದು, 20 ದಿನಗಳಾದರೂ 35 ವಾರ್ಡ್‌ಗಳಿಗೆ ನೀರು ಪೂರೈಕೆಯಾಗಿಲ್ಲ. ಸಾರ್ವಜನಿಕರು ಹನಿ ನೀರಿಗೂ ಪರದಾಡುವಂತಾಗಿದೆ.
ಪ್ರಭಾವಿಗಳ ಊರಲ್ಲಿ ಹನಿ ನೀರಿಲ್ಲ: ರಾಜ್ಯದ ಪ್ರಭಾವಿ ಸಚಿವ ಎಚ್.ಕೆ. ಪಾಟೀಲರ ತವರು ಕ್ಷೇತ್ರವಾದ ಗದಗ ನಗರದಲ್ಲಿ ಕುಡಿವ ನೀರು ತಿಂಗಳು ಕಳೆದರೂ ಪೂರೈಕೆಯಾಗದೇ ಇರುವುದು ಅವಳಿ ನಗರದ ಜನರ ದೌರ್ಭಾಗ್ಯವೇ ಸರಿ. ಅವಳಿ ನಗರದ ನೀರಿನ ಸಮಸ್ಯೆ ಕುರಿತು ಸಚಿವರು ಇದುವರೆಗೂ ಎಲ್ಲ ಸದಸ್ಯರು, ಅಧಿಕಾರಿಗಳ ಸಭೆಯನ್ನು ಕನಿಷ್ಟ ಒಂದೇ ಬಾರಿ ನಡೆಸಿ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿಲ್ಲ. ಇದಕ್ಕೆ ಕಾರಣ ನಗರಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿದೆ ಎಂದು ಅವರಿಗೆ ಅಸೂಯೆ ಇದೆ ಎನ್ನುತ್ತಾರೆ ಬಿಜೆಪಿ ಸದಸ್ಯರು.
ಕಾಲ ಹರಣ: ಗದಗ-ಬೆಟಗೇರಿ ನಗರಸಭೆಯಲ್ಲಿ ಕಳೆದ 6 ತಿಂಗಳಿಂದ ಆಡಳಿತ ಮಂಡಳಿ ಇಲ್ಲ, ಜಿಲ್ಲಾಧಿಕಾರಿ ಗೋವಿಂದರೆಡ್ಡಿಯೇ ಆಡಳಿತಾಧಿಕಾರಿಗಳಾಗಿದ್ದು ಅವರು ಕೂಡಾ ಇಲ್ಲಿನ ಸಮಸ್ಯೆ ಗಮನ ಹರಿಸುತ್ತಿಲ್ಲ, ಇನ್ನು ಬಿಜೆಪಿಗೆ ಬಹುಮತವಿದ್ದರೂ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಪ್ರಕರಣ ನ್ಯಾಯಾಲಯದಲ್ಲಿ ಇರುವ ಹಿನ್ನೆಲೆಯಲ್ಲಿ ಯಾರೂ ಏನೂ ಮಾಡದಂತ ಸ್ಥಿತಿ ಇದ್ದು ಅನಗತ್ಯವಾಗಿ ಕಾಲಹರಣವಾಗುತ್ತಿದೆ.ದುರಸ್ಥಿಯಿಂದ ಸಮಸ್ಯೆ: ಗದಗ-ಬೆಟಗೇರಿ ಅವಳಿ ನಗರಕ್ಕೆ ನೀರು ಒದಗಿಸಲು 24*7 ಹೆಸರಿನಲ್ಲಿ ₹500 ಕೋಟಿ ಯೋಜನೆ ರೂಪಿಸಿ ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ಉದ್ಘಾಟನೆ ಮಾಡಿರುವ ಹಿನ್ನೆಲೆಯಲ್ಲಿ ಪದೇ ಪದೇ ಪೈಪ್ ಲೈನ್ ಒಡೆದು ನೀರು ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ. ಇದಕ್ಕೆ ಹಿಂದೆ ಅಧಿಕಾರ ನಡೆಸಿದ ಕಾಂಗ್ರೆಸ್ ಆಡಳಿತದ ವೈಫಲ್ಯವೇ ಕಾರಣ ಎನ್ನುತ್ತಾರೆ ಬಿಜೆಪಿ ಸದಸ್ಯರು.
24*7 ಕುಡಿಯುವ ನೀರು ಯೋಜನೆಯ ಕಾಮಗಾರಿ ಸರಿಯಾಗಿಲ್ಲ. ಗುತ್ತಿಗೆದಾರನ ಅಪೂರ್ಣ ಕಾಮಗಾರಿಯಿಂದ ಸಮಸ್ಯೆಯಾಗುತ್ತಿದೆ. ಹೀಗಾಗಿ, ತುಂಗಭದ್ರಾ ನದಿಯಿಂದ ಗದಗಿಗೆ ಸಂಪರ್ಕಿಸುವ ಪೈಪ್‌ಲೈನ್ ಒಡೆದು ದುರಸ್ಥಿ ಹಂತದಲ್ಲಿ ಇದೆ. ಹೀಗಾಗಿ ಸಮಸ್ಯೆ ಎದುರಾಗಿದೆ ಎಂದು ಗದಗ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ತಿಳಿಸಿದ್ದಾರೆ.