ಇಡಗುಂದಿ ಗ್ರಾಪಂ ವ್ಯಾಪ್ತಿಯ ಅರಬೈಲ್ ಘಟ್ಟದ ಬುಡದಲ್ಲಿ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ಜಲಪಾತವೊಂದು ಮಳೆಗಾಲದಲ್ಲಿ ಸುಂದರವಾಗಿ ದುಮ್ಮುಕ್ಕುತ್ತದೆ.
ಯಲ್ಲಾಪುರ: ತಾಲೂಕಿನ ಅರಬೈಲಿನಲ್ಲಿರುವ ಜಲಪಾತದಲ್ಲಿ ಏಕಾಏಕಿ ನೀರು ಹರಿದು ಬಂದ ಪರಿಣಾಮ ಐವರು ಪ್ರವಾಸಿಗರು ನೀರಿನಲ್ಲಿ ಸಿಕ್ಕು ಬಿದ್ದಿದ್ದು, ಸ್ಥಳೀಯರ ರಕ್ಷಣೆಯಿಂದಾಗಿ ಪಾರಾದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಡಗುಂದಿ ಗ್ರಾಪಂ ವ್ಯಾಪ್ತಿಯ ಅರಬೈಲ್ ಘಟ್ಟದ ಬುಡದಲ್ಲಿ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ಜಲಪಾತವೊಂದು ಮಳೆಗಾಲದಲ್ಲಿ ಸುಂದರವಾಗಿ ದುಮ್ಮುಕ್ಕುತ್ತದೆ. ಮಳೆಗಾಲದಲ್ಲಿ ಮಾತ್ರ ನೀರು ಹರಿಯುವುದನ್ನು ಕಾಣಬಹುದು. ಭಾನುವಾರ ಈ ಜಲಪಾತ ವೀಕ್ಷಣೆಗೆ ಹುಬ್ಬಳ್ಳಿ- ಧಾರವಾಡದಿಂದ ನೂರಾರು ಪ್ರವಾಸಿಗರು ಆಗಮಿಸಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಜಲಪಾತವಿರುವ ಹಳ್ಳದಲ್ಲಿ ಅಷ್ಟಾಗಿ ನೀರು ಇಲ್ಲದ ಕಾರಣ ಜನರು ಅದರಲ್ಲಿ ಆಟವಾಡುತ್ತಿದ್ದರು. ಸುತ್ತಮುತ್ತ ಮಳೆಯಾದ ಕಾರಣ ನೋಡ ನೋಡುತ್ತಿದ್ದಂತೆಯೇ ಜಲಪಾತದಲ್ಲಿ ಭಾರಿ ಪ್ರಮಾಣದಲ್ಲಿ ಹಠಾತ್ ನೀರು ಹರಿದು ಬಂದು ಪ್ರವಾಹ ಸೃಷ್ಟಿಯಾಗಿದೆ. ನೀರಿನಲ್ಲಿರುವವರೆಲ್ಲ ನೀರು ಹರಿದು ಬರುವ ರೀತಿ ನೋಡಿ ಅಲ್ಲಿಂದ ಜಾಗ ಖಾಲಿ ಮಾಡಿ ದಡ ಸೇರಿದ್ದರು. ಆದರೆ ನೀರಿನಲ್ಲಿ ಮುಂದೆ ಹೋದ ಐವರು ಸಿಲುಕಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವಿಷಯ ತಿಳಿದ ಅರಣ್ಯ ರಕ್ಷಕ ಚಂದ್ರಹಾಸ ಪಟಗಾರ ತಮ್ಮ ಇಬ್ಬರು ಸಹೋದ್ಯೋಗಿಗಳು ಹಾಗೂ ಸ್ಥಳೀಯ ಗ್ರಾಮಸ್ಥರನ್ನು ಕರೆದುಕೊಂಡು ಹಗ್ಗ ಮತ್ತಿತರ ಸಲಕರಣೆ ತೆಗೆದುಕೊಂಡು ಸ್ಥಳಕ್ಕೆ ತೆರಳಿ, ಐವರನ್ನು ದಡ ಸೇರಿಸಿದ್ದಾರೆ. ಸಿಕ್ಕಿ ಹಾಕಿಕೊಂಡವರು ಹುಬ್ಬಳ್ಳಿಯ ಎಸ್‌ಡಿಎಂ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳೆಂದು ಮಾಹಿತಿ ಲಭಿಸಿದೆ.
ಚಂದ್ರಹಾಸ ಪಟಗಾರ ಜತೆ ಸ್ಥಳೀಯರಾದ ಸೋಮಶೇಖರ ನಾಯ್ಕ, ಜಯರಾಮ ನಾಯ್ಕ, ದೀಪಕ ನಾಯ್ಕ, ಸೂರಜ ಶೆಟ್ಟಿ, ಹರೀಶ ಮಡಿವಾಳ, ದಾಮೋದರ ಶೆಟ್ಟಿ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.