ನವಲಗುಂದ: ಭಾರಿ ಬಿಸಿಲಿನಿಂದ ತತ್ತರಿಸಿದ ಜನ- ಜಾನುವಾರುಗಳಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಮಲಪ್ರಭಾ ಬಲದಂಡೆ ಕಾಲುವೆಗೆ ಮೇ 13ರಂದು ನೀರು ಹರಿಸಲು ಬೆಳಗಾವಿಯ ಪ್ರಾದೇಶಿಕ ಆಯುಕ್ತರು ಆದೇಶಿಸಿದ್ದಾರೆ ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.
ತಾಲೂಕಿನ ಮೊರಬ ಗ್ರಾಮದಲ್ಲಿ ಬಸವ ಜಯಂತಿ ಅಂಗವಾಗಿ ಹುಬ್ಬಳ್ಳಿಯ ಭೈರಿದೇವರಕೊಪ್ಪ ಗೆಳೆಯರ ಬಳಗದ ವತಿಯಿಂದ ಆಯೋಜಿಸಿದ್ದ ಅಖಂಡ ಧಾರವಾಡ ಜಿಲ್ಲೆಯ ಧಾರವಾಡ, ಗದಗ, ಹಾವೇರಿ ರೈತರ ಭಾರಿ ಜೋಡೆತ್ತಿನ ಚಕ್ಕಡಿ ಓಡಿಸುವ ಸ್ಪರ್ಧೆಗೆ ಶಾಸಕ ಮಹೇಶ ಟೆಂಗಿನಕಾಯಿ ಜತೆ ಚಾಲನೆ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಅದರ ಪರಿಹಾರಕ್ಕಾಗಿ ವಿವಿಧ ತಾಲೂಕುಗಳ ಕೆರೆಗಳನ್ನು ತುಂಬಿಸಲು ಸವದತ್ತಿಯ ನವೀಲುತೀರ್ಥದ ಜಲಾಶಯದಿಂದ ಮೇ 13ರಂದು ಬೆಳಗ್ಗೆ 6ಕ್ಕೆ ಯಲ್ಲಮ್ಮನ ಗುಡ್ಡದ ರೇಣುಕಾ ಯಲ್ಲಮ್ಮ ದೇವಿಗೆ ಪೂಜೆ ಸಲ್ಲಿಸಿ ಪ್ರತಿ ದಿನ ಮಲಪ್ರಭಾ ಬಲದಂಡೆ ಬಲದಂಡೆ ಕಾಲುವೆಗೆ 900 ಕ್ಯೂಸೆಕ್ ಹಾಗೂ ನರಗುಂದ ಶಾಖಾ ಕಾಲುವೆಗೆ ಪ್ರತಿದಿನ 700 ಕ್ಯೂಸೆಕ್‌ನಂತೆ 10 ದಿನಗಳ ವರೆಗೆ ನೀರು ಹರಿಸಲು ಬೆಳಗಾವಿಯ ಪ್ರಾದೇಶಿಕ ಆಯುಕ್ತ ಎಸ್.ಬಿ. ಶೆಟ್ಟೆಣ್ಣವರ ಆದೇಶಿದ್ದಾರೆ ಎಂದು ತಿಳಿದರು.
ಮೊರಬ ಗ್ರಾಮದಲ್ಲಿ ನಡೆದ ಚಕ್ಕಡಿ ಓಡಿಸುವ ಸ್ಪರ್ಧೆ ಭಾರಿ ಸಂಖ್ಯೆಯಲ್ಲಿ ಮೊರಬದಲ್ಲಿ ಜನ ಸೇರಿದ್ದು ವಿಶೇಷವಾಗಿತ್ತು ಎಂದರು.ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಸ್ಪರ್ಧೆಯ ಆರಂಭದ ದಿನ ಮಳೆ ಸುರಿದಿರುವುದು ರೈತರಿದೆ ಶುಭ ಸಂಕೇತ ಎಂದರು.
ಬಸಣ್ಣ ಮಾಯ್ಕರ (ಬೆಲ್ಲದ), ಚಂದ್ರಪ್ಪ ಬೆಲ್ಲದ, ವೆಂಕಣ್ಣ ಕರಡ್ಡಿ, ಮಲ್ಲಿಕಾರ್ಜುನ ಕಾಲವಾಡ, ಶಿವಾನಂದ ಗಾಳಿ, ಸದಾನಂದ ವಾಲಿಕಾರ, ಮಂಜು ಕುರುಬರ, ಪರಮೇಶ ತಿಪ್ಪಣ್ಣವರ, ನಾಗರಾಜ ವಗ್ಗರ, ರವಿ ಗೋಕುಲ, ಪ್ರದೀಪ ಮಾಯ್ಕರ, ಸಿದ್ದು ಪಾಟೀಲ ಮುಂತಾದವರು ಉಪಸ್ಥಿತರಿದ್ದರು.