ಕನ್ನಡಪ್ರಭ ವಾರ್ತೆ ಮಡಿಕೇರಿ
ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಶೀಘ್ರವಾಗಿ ತಡೆಯದಿದ್ದಲ್ಲಿ ಕೇರಳದ ವಯನಾಡು ಮಾದರಿಯ ಪ್ರಾಕೃತಿಕ ದುರಂತ ಇಲ್ಲಿಯೂ ಸಂಭವಿಸಬಹುದೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಅಧ್ಯಕ್ಷ ಎನ್.ಯು.ನಾಚಪ್ಪ ಆತಂಕ ವ್ಯಕ್ತಪಡಿಸಿದ್ದಾರೆ.ಹುದಿಕೇರಿಯಲ್ಲಿ ನಡೆದ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿಯಲ್ಲಿ ತೊಡಗಿರುವ ಉದ್ಯಮಪತಿ ಬಂಡವಾಳಶಾಹಿಗಳು ಜನರ ಗಮನ ಬೇರೆಡೆಗೆ ಸೆಳೆಯಲು ಸಮಾಜ ಸೇವೆಯ ಮುಖವಾಡ ತೊಟ್ಟು ಕೊಡುಗೆಗಳನ್ನು ನೀಡುತ್ತಿದ್ದಾರೆ. ಕಪ್ಪುಹಣ ಬಿಳಿ ಮಾಡುವುದಕ್ಕಾಗಿ ಕೊಡಗಿನ ಪ್ರಕೃತಿಯ ಮೇಲೆ ದಾಳಿ ನಡೆಸಿ ರೆಸಾರ್ಟ್, ವಿಲ್ಲಾ, ಟೌನ್ ಶಿಪ್ ಗಳ ನಿರ್ಮಾಣಕ್ಕಾಗಿ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ಮಾಡುತ್ತಿರುವ ಮಾಫಿಯಾಗಳು ಅರಣ್ಯ ಪ್ರದೇಶವನ್ನು ಕೂಡ ಒತ್ತುವರಿ ಮಾಡಿಕೊಳ್ಳುತ್ತಿವೆ. ಸರ್ಕಾರದ ಕೃಪಾಕಟಾಕ್ಷದಿಂದ ಸಾವಿರಾರು ಮರಗಳು ಹನನವಾಗುತ್ತಿವೆ, ಜಲನಾಳಗಳು ನಾಶವಾಗುತ್ತಿವೆ. ಭಾರಿ ಸ್ಫೋಟಕಗಳನ್ನು ಬಳಸಿ ಭೂಗರ್ಭಕ್ಕೆ ಹಾನಿ ಮಾಡಲಾಗುತ್ತಿದೆ. ಪ್ರಾಕೃತಿಕ ವಿಕೋಪದ ಅಪವಾದಗಳನ್ನು ಅಮಾಯಕ ಕೊಡವರ ಮೇಲೆ ಹಾಕಲಾಗುತ್ತಿದೆ ಎಂದು ಆರೋಪಿಸಿದರು.ಈ ಎಲ್ಲಾ ಅಕ್ರಮಗಳನ್ನು ಮುಚ್ಚಿಡುವ ಉದ್ದೇಶದಿಂದ ಬಂಡವಾಳಶಾಹಿಗಳು ಜಿಲ್ಲೆಯ ಜನರಿಗೆ ವೈದ್ಯಕೀಯ ಸೇವೆ, ಆಂಬ್ಯುಲೆನ್ಸ್, ಪ್ರಯಾಣಿಕರ ತಂಗುದಾಣ ಸೇರಿದಂತೆ ವಿವಿಧ ಆಮಿಷಗಳನ್ನೊಡ್ಡಿ ಸಮಾಜ ಸೇವೆಯ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದರು.ಮಾಫಿಯಾಗಳು ನೀಡುವ ಆಮಿಷಗಳನ್ನು ತಿರಸ್ಕರಿಸಿ ಭೂಅಕ್ರಮಗಳ ವಿರುದ್ಧ ಕೊಡವರು ಜಾಗೃತರಾಗದಿದ್ದಲ್ಲಿ ಕೊಡವ ಲ್ಯಾಂಡ್ ಕಳೆದುಕೊಳ್ಳುವ ಹೀನಾಯ ಸ್ಥಿತಿ ಬರಬಹುದೆಂದು ನಾಚಪ್ಪ ಬೇಸರ ವ್ಯಕ್ತಪಡಿಸಿದರು.
ಟೌನ್ ಶಿಪ್, ನಗರೀಕರಣ, ವಿಲ್ಲಾ, ರೆಸಾರ್ಟ್‌ಗಳ ನಿರ್ಮಾಣದಿಂದ ಕೊಡಗಿನಲ್ಲಿ ಜನಸಂಖ್ಯೆ ಹೆಚ್ಚಾಗಲಿದ್ದು, ಇದನ್ನು ತಡೆದುಕೊಳ್ಳುವ ಶಕ್ತಿ ಇಲ್ಲಿನ ಭೂಪ್ರದೇಶಕ್ಕೆ, ಭೂದೇವಿಗೆ ಇಲ್ಲವಾದ ಕಾರಣ ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ತಕ್ಷಣ ನಿಲ್ಲಿಸಬೇಕೆಂದು ಒತ್ತಾಯಿಸಿದರು.ಸಿಎನ್‌ಸಿ ಪ್ರಮುಖರು ಹಾಗೂ ಗ್ರಾಮಸ್ಥರು ಬೃಹತ್ ಭೂಪರಿವರ್ತನೆ ಮತ್ತು ಭೂವಿಲೇವಾರಿ ವಿರುದ್ಧ ನಿರ್ಣಯ ಕೈಗೊಂಡು ಸಿಎನ್‌ಸಿ ಹೋರಾಟಕ್ಕೆ ಬೆಂಬಲ ಸೂಚಿಸಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಬೊಜ್ಜಂಗಡ ಯಶ್ಮಾ, ಚಕ್ಕೇರ ಜಾನ್ಸಿ, ಮಂಡಂಗಡ ತಾರಾ, ಚಂಗುಲಂಡ ಸೂರಜ್, ಬೊಜ್ಜಂಗಡ ಸುನಿಲ್, ಕೋಳೇರ ರಾಜ, ಬೊಜ್ಜಂಗಡ ಬೋಪಣ್ಣ, ಬೊಜ್ಜಂಗಡ ತಮ್ಮಯ್ಯ, ದಡ್ಡೇರ ಸುರೇಶ್, ನೂರೇರ ಚಿಟ್ಟಿಯಪ್ಪ, ಮಂಡೇಚಂಡ ಪೊನ್ನಪ್ಪ ಮತ್ತಿತರರು ಇದ್ದರು.