ಕನ್ನಡಪ್ರಭ ವಾರ್ತೆ ಗುಳೇದಗುಡ್ಡ
ಕನ್ನಡಿಗರಿಗೆ ಈ ದಿನ ಹಬ್ಬದ ದಿನ. ನಾಡಿನ ಅರಸು ಮನೆತನಗಳು, ಕವಿಗಳು, ಕಲಿಗಳು, ಹೋರಾಟಗಾರರು ಈ ನಾಡು-ನುಡಿ, ಭಾಷೆಯನ್ನು ಕಟ್ಟಿ ಬೆಳೆಸಿದ್ದಾರೆ. ಅಂತಹ ನಾಡಿನಲ್ಲಿ ಹುಟ್ಟಿದ ನಾವೇ ಪುಣ್ಯವಂತರು ಎಂದು ತಹಸೀಲ್ದಾರ್ ಎಸ್.ಎಫ್.ಬೊಮ್ಮಣ್ಣವರ ಹೇಳಿದರು.ತಾಲೂಕು ಆಡಳಿತದಿಂದ ಪುರಸಭೆ ಎದುರಿಗೆ ಕರ್ನಾಟಕ ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. ದೇಶ ಸ್ವಾತಂತ್ರ್ಯವಾದ ಬಳಿಕ, ಭಾಷಾ ಆಧಾರದ ಮೇಲೆ ರಾಜ್ಯಗಳ ಪುನಾರಚನೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ 1956ರಲ್ಲಿ ಮೈಸೂರು ರಾಜ್ಯ ಸ್ಥಾಪಿಸಲಾಯಿತು. ನಂತರ ಅಧಿಕೃತವಾಗಿ 1973ರಲ್ಲಿ ಡಾ.ದೇವರಾಜ ಅರಸು ಅವರ ನೇತೃತ್ವದಲ್ಲಿ ಕರ್ನಾಟಕ ಎಂದು ಮರು ನಾಮಕರಣಗೊಂಡಿತು. ನ.1ರಿಂದ ಕರ್ನಾಟಕ ರಾಜ್ಯದ ಜನರು ರಾಜ್ಯೋತ್ಸವವನ್ನು ಆಚರಿಸಲು ಆರಂಭಿಸಿದರು ಎಂದು ತಿಳಿಸಿದರು.
ನಾವೆಲ್ಲ ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ನಿತ್ಯ ಗೌರವ ನೀಡಬೇಕು. ಜಾತಿ, ಮತ, ಧರ್ಮ, ಇವೆಲ್ಲವುಗಳನ್ನು ಮೀರಿ ನಾವು ಕನ್ನಡಿಗರೆಂಬ ಏಕತೆ ಮೆರೆಯಬೇಕಾಗಿದೆ. ಹಿರಿಯರು ಕಟ್ಟಿ ಬೆಳೆಸಿದ ಕನ್ನಡ ನಾಡನ್ನು ನಾವೆಲ್ಲ ಪ್ರೀತಿ, ವಿಶ್ವಾಸ, ಭ್ರಾತೃತ್ವದಿಂದ ಮುನ್ನಡೆಸಬೇಕೆಂದರು.ಶನಿವಾರ ಬೆಳಗ್ಗೆ 9 ಗಂಟೆಗೆ ತಹಸೀಲ್ದಾರ್ ಕಚೇರಿಯಲ್ಲಿ ನಾಡದೇವಿ ಭಾವಚಿತ್ರಕ್ಕೆ ತಹಸೀಲ್ದಾರ್ ಬೊಮ್ಮಣ್ಣವರ ಪೂಜೆ ಸಲ್ಲಿಸಿದರು. ಪುರಸಭೆ ಅಧ್ಯಕ್ಷೆ ಜ್ಯೋತಿ ಗೋವಿನಕೊಪ್ಪ ಮೆರವಣಿಗೆಗೆ ಚಾಲನೆ ನೀಡಿದರು. ಭಾವಚಿತ್ರದ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಪುರಸಭೆ ಆವರಣಕ್ಕೆ ಬಂದು ತಲುಪಿತು. ಸಾರ್ವಜನಿಕ ಧ್ವಜಾರೋಹಣವನ್ನು ತಹಸೀಲ್ದಾರ್ ಎಸ್.ಎಫ್.ಬೊಮ್ಮಣ್ಣವರ್ ನೆರವೇರಿಸಿದರು.
ಮೆರವಣಿಗೆಯಲ್ಲಿ ಶಾಲಾ ಮಕ್ಕಳ ಕನ್ನಡ ನಾಡಿನ ಹೋರಾಟಗಾರರ, ಕವಿಗಳ, ಶರಣರ ಛದ್ಮವೇಶಗಳು ಜನರನ್ನು ಆಕರ್ಷಿಸಿದವು. ಕರವೇ ಪದಾಧಿಕಾರಿಗಳ ಬೈಕ್ ರ್‍ಯಾಲಿ ಗಮನಸೆಳೆಯಿತು. ಕುಂಭ ಹೊತ್ತ ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪುರಸಭೆ ಮುಖ್ಯಾಧಿಕಾರಿ ಎ.ಎಚ್.ಮುಜಾವರ, ಕೃಷಿ ಅಧಿಕಾರಿ ಆನಂದಗೌಡ್ರ, ಪಿಎಸೈ ಸಿದ್ದಪ್ಪ ಯಡಹಳ್ಳಿ, ಪುರಸಭೆ ಉಪಾಧ್ಯಕ್ಷ ರಾಜಶೇಖರ ಹೆಬ್ಬಳ್ಳಿ, ಸದಸ್ಯರು, ತಾಲೂಕು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಂಜಯ ಬರಗುಂಡಿ, ಕರವೇ ಅಧ್ಯಕ್ಷ ರವಿ ಅಂಗಡಿ, ಉಪ ತಹಸೀಲ್ದಾರ್ ಜಿ.ವಿ.ರಜಪೂತ, ಎಸ್.ಡಿ.ಜೋಗಿನ, ಮಲ್ಲಿಕಾರ್ಜುನ ತುಪ್ಪದ, ಮೂಕಪ್ಪ ಹುನೂರ, ಬಾಲಚಂದ್ರ ಪತ್ತಾರ ಸೇರಿದಂತೆ ಇನ್ನೂ ಅನೇಕರಿದ್ದರು. ಕಸಾಪ ಜಿಲ್ಲಾ ಕೋಶಾಧ್ಯಕ್ಷ ಡಾ.ಸಿ.ಎಂ.ಜೊಶಿ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ಕಲಾವಿದ ಜ್ಞಾನೇಶ ಬೊಂಬಲೇಕರ ರಾಷ್ಟ್ರಗೀತೆ ಮತ್ತು ನಾಡಗೀತೆ ಹಾಡಿದರು.