ಕಾರವಾರ: ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಹೊಸ ಷರತ್ತುಗಳನ್ನು ವಿಧಿಸುತ್ತಿಲ್ಲ. ಆದರೆ ಯೋಜನೆಗಳು ಅನರ್ಹ ವ್ಯಕ್ತಿಗಳಿಗೆ ತಲುಪದಂತೆ ನೋಡಿಕೊಳ್ಳಲಾಗುವುದು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಹೇಳಿದರು.
ಅವರು ಗುರುವಾರ ಕಾರವಾರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ಸ್ವಾತಂತ್ರ್ಯೋತ್ಸವ ದಿನಾಚರಣೆ ಕಾರ್ಯಕ್ರಮದ ಆನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಕಟ್ಟಕಡೆಯ ಅರ್ಹ ವ್ಯಕ್ತಿಗಳಿಗೂ ತಲುಪಿಸುವ ಮೂಲಕ ಅವರ ಸಮಗ್ರ ಅಭಿವೃದ್ಧಿಗೆ ನೆರವಾಗುವ ಉದ್ದೇಶ ಹೊಂದಿದ್ದು, ಈ ಯೋಜನೆಗಳು ಅನರ್ಹ ವ್ಯಕ್ತಿಗಳಿಗೆ ತಲುಪದಂತೆ ಎಚ್ಚರ ವಹಿಸಲಾಗುತ್ತಿದೆ. ಗ್ಯಾರಂಟಿ ಕುರಿತು ವಿವಿಧ ರೀತಿಯಲ್ಲಿ ಚರ್ಚೆಯಾಗುತ್ತಿದೆ, ಅದೆಲ್ಲವನ್ನೂ ಸರ್ಕಾರ ಗಮನಿಸುತ್ತಿದೆ. ಗ್ಯಾರಂಟಿ ಯೋಜನೆಗಳಿಗೂ ರಾಜಕಾರಣಕ್ಕೂ ಸಂಬಂಧವಿಲ್ಲ. ಯೋಜನೆಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ ಎಂದರು.ಅಂಕೋಲಾ ಮತ್ತು ಹುಬ್ಬಳ್ಳಿ ರೈಲು ಮಾರ್ಗವನ್ನು ಅನುಷ್ಠಾನಗೊಳಿಸಲು ಬದ್ಧವಾಗಿದ್ದೇವೆ ಎಂದ ಅವರು, ಶಿರೂರು ಗುಡ್ಡ ಕುಸಿತದಲ್ಲಿ ಇನ್ನೂ ಕಣ್ಮರೆಯಾಗಿರುವ 3 ಕುಟುಂಬಗಳಿಗೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು ನೀಡಲಾಗುವುದು. ಮೃತಪಟ್ಟ ಕುಟುಂಬಗಳಲ್ಲಿನ ಮಕ್ಕಳ ವಿದ್ಯಾಭ್ಯಾಸಕ್ಕೂ ಅಗತ್ಯ ನೆರವು ನೀಡಲಾಗುವುದು ಎಂದ ಸಚಿವರು ಹೇಳಿದರು.ಅಲಗೇರಿ ನಾಗರಿಕ ವಿಮಾನ ನಿಲ್ದಾಣದ ಪುರ್ನವಸತಿ ಮತ್ತು ಪುನರ್‌ನಿರ್ಮಾಣ ಸೌಲಭ್ಯದಡಿ 72 ಕುಟುಂಬಗಳಿಗೆ, ಅಂಕೋಲಾ ತಾಲೂಕಿನ ಹೊಸಗದ್ದೆ ಗ್ರಾಮದಲ್ಲಿ 4 ಎಕರೆ ಹಾಗೂ ಬೊಗ್ರಿಬೈಲ್ ಗ್ರಾಮದಲ್ಲಿ 3.30 ಎಕರೆ ಜಾಗದಲ್ಲಿ 60*90 ಚದುರ ಅಡಿ ನಿವೇಶನ ಹಂಚಿಕೆ ಮಾಡಲಾಗುತ್ತಿದೆ ಹಾಗೂ ಜಮೀನಿನ ಭೂ ಮಾಲೀಕರಿಗೆ ₹11 ಕೋಟಿಗಳ ಹೆಚ್ಚುವರಿ ಪರಿಹಾರಧನ ನೀಡಲಾಗುತ್ತಿದೆ ಎಂದರು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರ ಕುಮಾರ ಕಾಂದೂ, ಪೊಲೀಸ್ ವರಿಷ್ಠ ನಾರಾಯಣ್ ಉಪಸ್ಥಿತರಿದ್ದರು.