ಪ್ರಕೃತಿ ಧರ್ಮ ಮರೆತು ದುಃಖಿಗಳಾಗಿದ್ದೇವೆ: ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

KannadaprabhaNewsNetwork |  
Published : Mar 18, 2025, 12:32 AM IST
ಫೋಟ- ನಿಜಉಣಕಲ್ ಸಿದ್ದಪ್ಪಜ್ಜನ ಗುಡಿಯ ಆವರಣದಲ್ಲಿ ಸೋಮವಾರ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಪ್ರವಚನ ನೀಡಿದರು. ಮೇಯರ್ ರಾಮಣ್ಣ ಬಡಿಗೇರ ಇದ್ದಾರೆ. | Kannada Prabha

ಸಾರಾಂಶ

ಮನುಷ್ಯ ತನ್ನತನವನ್ನೇ ಕಳೆದುಕೊಂಡು ನೆಮ್ಮದಿ ಅರಸುತ್ತ ಯಾತ್ರೆ, ಜಾತ್ರೆ, ಮೇಳಗಳ ಬೆನ್ನುಹತ್ತಿ ಹತಾಶನಾಗಿದ್ದಾನೆ ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ವಿಷಾಧಿಸಿದರು.

ಹುಬ್ಬಳ್ಳಿ: ಪ್ರಕೃತಿ ಧರ್ಮ ಮರೆತು ಮನುಷ್ಯ ದುಃಖಿತನಾಗಿದ್ದಾನೆ. ಈ ಪ್ರಕೃತಿಯ 84 ಲಕ್ಷ ಜೀವರಾಶಿಯಲ್ಲಿ ಮನುಷ್ಯನೂ ಒಂದು ಜೀವಿಯಷ್ಟೇ. ಅದನ್ನು ಮರೆತು ಜಾತೀಯ ಕಟ್ಟಳೆ, ಧರ್ಮದ ಅಮಲಿಗೆ ಒಳಗಾಗಿ ತನ್ನತನವನ್ನೇ ಕಳೆದುಕೊಂಡು ನೆಮ್ಮದಿ ಅರಸುತ್ತ ಯಾತ್ರೆ, ಜಾತ್ರೆ, ಮೇಳಗಳ ಬೆನ್ನುಹತ್ತಿ ಹತಾಶನಾಗಿದ್ದಾನೆ ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ವಿಷಾಧಿಸಿದರು.

ಉಣಕಲ್ ಸಿದ್ದಪ್ಪಜ್ಜನ ಜಾತ್ರಾಮಹೋತ್ಸವ ಅಂಗವಾಗಿ ಸೋಮವಾರ ಸಂಜೆ ಎರಡನೇ ದಿನದ ಪ್ರವಚನ ನೀಡಿದ ಅವರು, ಹಾವು, ಕಾಗೆ, ಕೋಳಿ, ಇರುವೆಗಳಿಂದ ಮನುಷ್ಯ ನೆಮ್ಮದಿಯಾಗಿ ಬದುಕುವುದನ್ನು ಕಲಿಯಬೇಕಿದೆ ಎಂದರು.

ಈ ಭೂಮಿಗೆ ಏಕೆ ಬಂದಿದ್ದೇವೆ ಎಂದು ಅರಿತು ಬಾಳುವುದೇ ನಿಜವಾದ ಸುಖ ಜೀವನ. ಪ್ರತಿಯೊಂದು ಜೀವಿಯೂ ಸುಖವಾಗಿರಲೆಂದು ಈ ಪೃಕೃತಿ ಸೃಷ್ಟಿಯಾಗಿದೆ. ಪ್ರಕೃತಿ ಸಹಜವಾದ ಬದುಕು ನಮ್ಮದಾಗಬೇಕು. ಅದು ಬಿಟ್ಟು ರಾಗ, ದ್ವೇಷ, ಅಸೂಯೆ, ಅತಿಯಾದ ಆಸೆ, ಲೋಭದಿಂದ ಬದುಕು ಹಾಳು ಮಾಡಿಕೊಂಡು ಪ್ರಾಣಿ-ಪಕ್ಷಿಗಳಿಗಿಂತ ಮನುಷ್ಯ ಕಡೆಯಾಗಿದ್ದಾನೆ ಎಂದು ಹೇಳಿದರು.

ಬುದ್ಧ, ಬಸವ, ಶರಣರು, ಸಂತರು, ತತ್ವಜ್ಞಾನಿಗಳು ಈ ಪ್ರಕೃತಿ ತತ್ವ ತಿಳಿ ಹೇಳಿದರೂ ಯತಾರ್ಥ ಜ್ಞಾನ ಅರಿಯುವಲ್ಲಿ ವಿಫಲನಾಗಿ, ತನ್ನತನವಿದವನಂತೆ ಪರಿತಪಿಸುತ್ತಿದ್ದಾನೆ. ಧಾರ್ಮಿಕ ಮುಖಂಡರು ಧರ್ಮದ ಚೌಕಟ್ಟಿಗೆ, ರಾಜಕೀಯ ಮುಖಂಡರು ಮುಲಾಜಿನಲ್ಲಿ ಕಟ್ಟಿ ಹಾಕುತ್ತ ಬಂದಿದ್ದರಿಂದ ಸರಿಯಾದ ದಾರಿ ಯಾವುದು ಎನ್ನುವುದನ್ನೇ ಮರೆತಿದ್ದಾನೆ. ಜಾತಿ, ಧರ್ಮ, ಆಸ್ತಿ, ಅಂತಸ್ತು, ಪ್ರತಿಷ್ಠೆಯೇ ಜೀವನ ಎಂದು ಭಾವಿಸಿದ್ದರಿಂದ ಅತೃಪ್ತಜೀವಿಯಾಗಿದ್ದಾನೆ ಎಂದು ಶ್ರೀಗಳು ವಿಶ್ಲೇಷಿಸಿದರು.

ಪ್ರಾಣಿ, ಪಕ್ಷಿ ಸಂಕುಲ‌‌ ತನ್ನ ಸ್ವಾಭಿಮಾನ ಕಳೆದುಕೊಳ್ಳದೇ ಬದುಕಿವೆ. ಆದರೆ ಮನುಷ್ಯ ಸ್ವಾಭಿಮಾನ ಮರೆತು ಪರಾವಲಂಬಿಯಾಗಿದ್ದಾನೆ. ಹೇರಲ್ಪಟ್ಟ ಧರ್ಮ ಅವನನ್ನು ಸಹಜವಾಗಿ ನಗುವುದಕ್ಕೂ ಲಾಪಿಂಗ್‌ ಕ್ಲಬ್‌ ಆಶ್ರಯಿಸುವಂತೆ ಮಾಡಿದೆ. ಯಾರ ಮನೆಯಲ್ಲೂ ಇಂದು ನೆಮ್ಮದಿ ಉಳಿಸಿಲ್ಲ. ಮಠ, ಮಂದಿರಗಳನ್ನು ಸುತ್ತಿ ಸುಸ್ತಾಗುತ್ತಿದ್ದಾನೆಯೇ ಹೊರತು ದೇವರ ಕೊಡುಗೆಯಾದ ತನ್ನ ದೇಹವನ್ನು ದೇವಾಲಯ ಎಂದು ಭಾವಿಸುತ್ತಿಲ್ಲ. ಹಾಗಾಗಿ ದೇಹವೇ ದೇಗುಲ, ಶಿರವೇ ಹೊನ್ನಕಳಶ ಎಂದ ಬಸವಣ್ಣನ ಮಾತು ಇಂದು ಮನದಟ್ಟಾಗಬೇಕಿದೆ ಎಂದರು.

ಎಷ್ಟು ಸಿರಿವಂತನಾದರೂ ಆತ ಕೊನೆಕಾಣುವುದು ಐಶ್ಯೂದಲ್ಲಿಯೇ. ಇದಕ್ಕೆ ಸ್ವಾಮಿಗಳೂ ಹೊರತಾಗಿಲ್ಲ. ಬಹಳಷ್ಟು ಮಠಾಧೀಶರು ಅಂತ್ಯ ಮಠದಲ್ಲಿ ಆಗದೇ‌ ಆಸ್ಪತ್ರೆಯಲ್ಲಿ‌ ನಡೆಯುವುದನ್ನು ನಾವು ಕಾಣುತ್ತಿದ್ದೇವೆ. ಇದರಿಂದ ಹೊರಬರಲು ನಾವು ಪ್ರಕೃತಿಯೊಂದಿಗೆ ಬದುಕುವುದನ್ನು ಕಲಿಯಬೇಕಿದೆ. ಈ ದೇಹ ಆ ದೇವರ ಅದ್ಭುತ ಸೃಷ್ಟಿ, ಈ ದೇಹವೆಂಬ ದೇವಾಲಯ ಮತ್ತು ಆತ್ಮವನ್ನು ಶುದ್ಧವಾಗಿ ಇಟ್ಟುಕೊಳ್ಳುವುದೇ ನಿಜವಾದ ಪೂಜೆ. ಇದು ಸೃಷ್ಟಿಯ ಆರಾಧನೆ ಕೂಡ ಎಂದು ಮಾರ್ಮಿಕವಾಗಿ ನುಡಿದರು.

ಪಾಂಚಾಲಿ, ಅಕ್ಕಮಹಾದೇವಿ ಹಾಗೂ ಇಂದಿನ‌ ಜಯಲಲಿತಾ ಅವರನ್ನು ಉದಾಹರಿಸಿದ ಶ್ರೀಗಳು, ದ್ರೌಪದಿ ವಸ್ತ್ರಾಪಹರಣ ಸಂದರ್ಭದಲ್ಲಿ ಶ್ರೀ ಕೃಷ್ಣನ ಮೊರೆ ಹೋದಳು, ಜಯಲಲಿತ ಅಧಿಕಾರ ಬಲದಿಂದ ಅವರ ಮೇಲೆ ಸೇಡು ತೀರಿಸಿಕೊಂಡಳು, ಆದರೆ ಅಕ್ಕಮಹಾದೇವಿ ಕೌಶಿಕ ಮುಂದೆ ಬೆತ್ತಲೆ ದೇಹ ತೋರಿಸಿ ತನ್ನತನ ಮೆರೆದಳು. ಈ ತನ್ನತನ ಅರಿಯುವುದೇ ಯತಾರ್ಥ ಜ್ಞಾನ ಎಂದರು.

ಮೇಯರ್‌ ರಾಮಣ್ಣ ಬಡಿಗೇರ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮತ್ತು ಉಣಕಲ್ ಗ್ರಾಮದ ಪ್ರಮುಖರು ಇದ್ದರು.

PREV

Recommended Stories

ಬುರುಡೆ ಗ್ಯಾಂಗ್‌ಗೆ ಚಿನ್ನಯ್ಯ ಸೇರಿದ್ದು ಹೇಗೆ ? ಪರಿಚಯಿಸಿದ್ದೇ ಸೌಜನ್ಯ ಮಾವ!
ಬುರುಡೆ ತನಿಖೆ ವೇಳೆ ಎಲ್ಲರೂ, ಬಂಧನ ವೇಳೆ ಕೈಕೊಟ್ಟರು!