ಕನ್ನಡಪ್ರಭ ವಾರ್ತೆ ಕಲಬುರಗಿ
ವಕೀಲರ ಮೇಲೆ ನಡೆಯುವ ಹಲ್ಲೆ ತಡೆಯುವ ಉದ್ದೇಶದಿಂದ ಹಾಗೂ ಆರೋಪಿಗಳಿಗೆ ಕಾನೂನು ಮೂಲಕ ಶಿಕ್ಷೆ ನೀಡುವ ವಕೀಲರ ಸಂರಕ್ಷಣಾ ಕಾಯಿದೆ ಜಾರಿಗೆ ತಂದು ನುಡಿದಂತೆ ನಡೆದಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.ಕಲಬುರಗಿ ನಗರದ ಜಿಲ್ಲಾ ವಕೀಲರ ಸಂಘದ ಸಭೆಯಲ್ಲಿ ಮತಯಾಚಿಸಿ ಅವರು ಮಾತನಾಡಿದರು. ಕಲಬುರಗಿ ಜಿಲ್ಲಾ ನ್ಯಾಯಾಲಯ, ವಕೀಲರ ಸಂಘದ ಕಟ್ಟಡ, ಕೆಎಟಿ, ಹೈಕೋರ್ಟ್, ಜಯದೇವ, ಕಿದ್ವಾಯಿ, ಟ್ರಾಮಾ ಕೇರ್ ಸೆಂಟರ್, ಕೇಂದ್ರಿಯ ವಿಶ್ವವಿದ್ಯಾಲಯ ಸೇರಿದಂತೆ ಹಲವಾರು ಗಮನಾರ್ಹ ಯೋಜನೆಗಳು ಖರ್ಗೆ ಸಾಹೇಬರು ಹಾಗೂ ಪಕ್ಷ ಅಧಿಕಾರದಲ್ಲಿ ಇದ್ದಾಗ ಜಾರಿಗೆ ಬಂದಿವೆ ಇದಕ್ಕೆಲ್ಲಾ ಕಾರಣ ನಿಮ್ಮೆಲ್ಲರ ಮತದಾನದ ಆಶೀರ್ವಾದ ಎಂದರು.ಕಳೆದ ಹತ್ತು ವರ್ಷದಲ್ಲಿ 30,000 ಕಾಮಗಾರಿಗಳು 8,000 ಮೆಡಿಕಲ್, 22,219 ಇಂಜಿನಿಯರಿಂಗ್, 5,500 ಫಾರ್ಮಸಿ, 3,448 ಐಎಚ್‌ಆರ್‌ಸಿ ಸೀಟುಗಳು ಪಡೆದುಕೊಳ್ಳಲಾಗಿದೆ ಹಾಗೂ 1,19,419 ನೇರ ನೇಮಕಾತಿ ಮಾಡಲಾಗಿದೆ. ಇದೆಲ್ಲ ಸಾಧ್ಯವಾಗಿದ್ದು ಆರ್ಟಿಕಲ್ 371 ಜೆ ಅಡಿಯಲ್ಲಿ ಎಂದು ಖರ್ಗೆ ಹೇಳಿದರು.
ಸಚಿವರಾದ ಶರಣಪ್ರಕಾಶ ಪಾಟೀಲ ಮಾತನಾಡಿ ಮತದ ಮೌಲ್ಯ ವಕೀಲರಿಗೆ ಸರಿಯಾಗಿದೆ ತಿಳಿದಿದೆ. ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ ಸಾಹೇಬರಿಗೆ ಸೋಲಾಯಿತು. ಅದು ಅವರ ವೈಯಕ್ತಿಕ ಸೋಲಲ್ಲ ಅದು ಕಲಬುರಗಿಯ ಸೋಲು.ಕಲಬುರಗಿ ಬಾರ್ ಅಸೋಸಿಯೇಷನ್ ಸದಸ್ಯರಾದ ಖರ್ಗೆ ಸಾಹೇಬರು ಆರ್ಟಿಕಲ್ 371 ಜೆ ಸೇರಿದಂತೆ ಹಲವಾರು ಪ್ರಮುಖ ಯೋಜನೆಗಳನ್ನು ಜಿಲ್ಲೆಗೆ ತಂದಿದ್ದರು. ಈಗ ಅವರ ಮಾರ್ಗದರ್ಶನದಲ್ಲಿ ಅಭ್ಯರ್ಥಿ ರಾಧಾಕೃಷ್ಣ ಅವರು ಚುನಾವಣೆಗೆ ನಿಂತಿದ್ದಾರೆ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು. ಶಾಸಕರಾದ ಅಲ್ಲಂ ಪ್ರಭು ಪಾಟೀಲ, ಸಂಘದ ಅಧ್ಯಕ್ಷರಾದ ಗುಪ್ತಲಿಂಗ ಪಾಟೀಲ ಸೇರಿದಂತೆ ಹಿರಿಯ, ಕಿರಿಯ ಹಾಗೂ ಮಹಿಳಾ ವಕೀಲರು ಇದ್ದರು.