ಹಿಂದೂಗಳು ಶಾಂತಿಪ್ರಿಯರು ಎಂದು ತೋರಿಸಿಕೊಟ್ಟಿದ್ದೇವೆ: ಮುತಾಲಿಕ್‌

KannadaprabhaNewsNetwork | Published : Sep 10, 2024 1:35 AM

ಸಾರಾಂಶ

ಸರ್ಕಾರ ಡಿಜೆ ಹಚ್ಚುವ ವಿಚಾರದಲ್ಲಿ ಅನಗತ್ಯ ಕಿರಿಕಿರಿ ಮಾಡುತ್ತಿದೆ. ಡಿಜೆ ಜತೆಗೆ ಆಜಾನ್ ವಿರುದ್ಧವೂ ಕ್ರಮಕೈಗೊಳ್ಳಲಿ. ಈ ಆಜಾನ್‌ ವಿಚಾರದಲ್ಲಿ ಎಲ್ಲ ಪಕ್ಷದವರೂ ನಿರ್ಲಜ್ಜರೇ ಆಗಿದ್ದಾರೆ.

ಹುಬ್ಬಳ್ಳಿ:

ಇಲ್ಲಿನ ರಾಣಿ ಚೆನ್ನಮ್ಮ ಮೈದಾನದಲ್ಲಿ (ಈದ್ಗಾ ಮೈದಾನ) ಗಣೇಶೋತ್ಸವ ಮಾಡಿದರೆ ಗಲಭೆ, ಗಲಾಟೆಯಾಗುತ್ತದೆ ಎಂಬ ಮಾತು ಕೇಳಿ ಬರುತ್ತಿತ್ತು. ಆದರೆ 3 ವರ್ಷದಿಂದ ಅತ್ಯಂತ ಶಾಂತಿಯುತವಾಗಿ ಗಣೇಶೋತ್ಸವ ಆಚರಿಸುವ ಮೂಲಕ ಹಿಂದೂಗಳು ಶಾಂತಿಪ್ರಿಯರು ಎಂಬುದನ್ನು ತೋರಿಸಿಕೊಟ್ಟಿದ್ದೇವೆ ಎಂದು ಶ್ರೀರಾಮಸೇನೆಯ ಮುಖ್ಯಸ್ಥ ಪ್ರಮೋದ ಮುತಾಲಿಕ ಹೇಳಿದರು.

ಅ‍ವರು ನಗರದ ಚೆನ್ನಮ್ಮ (ಈದ್ಗಾ) ಮೈದಾನದಲ್ಲಿ ಪ್ರತಿಷ್ಠಾಪಿಸಿದ ಗಣೇಶಮೂರ್ತಿಗೆ ಸೋಮವಾರ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಹಿಂದೂಗಳು ಶಾಂತಿಪ್ರಿಯರು ಎಂಬುದನ್ನು ಹಿಂದಿನಿಂದಲೂ ತೋರಿಸುತ್ತಾ ಬಂದಿದ್ದೇವೆ. ಈ ಬಾರಿ ಗಣೇಶೋತ್ಸವಕ್ಕೆ ವಿರೋಧಿಗಳೂ ಸಹಕಾರ ನೀಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ ಎಂದರು.

ಎಲ್ಲ ಪಕ್ಷದವರು ನಿರ್ಲಜ್ಜರೇ:

ಸರ್ಕಾರ ಡಿಜೆ ಹಚ್ಚುವ ವಿಚಾರದಲ್ಲಿ ಅನಗತ್ಯ ಕಿರಿಕಿರಿ ಮಾಡುತ್ತಿದೆ. ಡಿಜೆ ಜತೆಗೆ ಆಜಾನ್ ವಿರುದ್ಧವೂ ಕ್ರಮಕೈಗೊಳ್ಳಲಿ. ಈ ಆಜಾನ್‌ ವಿಚಾರದಲ್ಲಿ ಎಲ್ಲ ಪಕ್ಷದವರೂ ನಿರ್ಲಜ್ಜರೇ ಆಗಿದ್ದಾರೆ. ಬಿಜೆಪಿ ಏನು ಸಾಚಾ ಅಲ್ಲ. ಅವರಿಗೆ ಹಿಂದೂಗಳು ಬೇಕು, ಅವರ ಭಾವನೆ ಬೇಕಿಲ್ಲ. ಈ ವಿಷಯವಾಗಿ ನಮ್ಮ ಸಂಘಟನೆ ಹೋರಾಟ ಮಾಡಿದಾಗ ಇದೇ ಬಿಜೆಪಿ ಸರ್ಕಾರ ನಮ್ಮನ್ನು ಬಂಧಿಸಿತ್ತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಬಲ್‌ ಡಿಜೆ ಹಚ್ಚಿ:

ಸುಪ್ರೀಂಕೋರ್ಟ್ ತೀರ್ಪು ನೆಪದಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಡಿಜೆ ಬಳಕೆಗೆ ನಿರ್ಬಂಧಿಸಿರುವುದು ಸರಿಯಲ್ಲ. ಮಸೀದಿ ಧ್ವನಿವರ್ಧಕಕ್ಕೂ ಕೋರ್ಟ್ ನಿರ್ಬಂಧ ವಿಧಿಸಿದೆ. ಅಲ್ಲಿ ಕ್ರಮವಿಲ್ಲದೆ ವರ್ಷಕ್ಕೊಮ್ಮೆ ಎಲ್ಲ ಸಮಾಜ ಬಾಂಧವರು ಸೇರಿ ಅದ್ಧೂರಿಯಾಗಿ ಆಚರಿಸುವ ಗಣೇಶೋತ್ಸವಕ್ಕೆ ಮಾತ್ರ ನಿರ್ಬಂಧವೇಕೆ? ಮಹಾನಗರದ ಎಲ್ಲ ಗಣೇಶೋತ್ಸವ ಮಂಡಳಿಗೆ ಮನವಿ ಮಾಡುತ್ತೇನೆ. ಈ ಬಾರಿ ಎಲ್ಲರೂ ಮೆರವಣಿಗೆಯಲ್ಲಿ ಡಬಲ್ ಡಿಜೆ ಹಾಕಿ ಸಂಭ್ರಮಿಸಿ ಎಂದು ಕರೆ ನೀಡಿದರು.

ಪ್ರಸಾದ ವಿತರಣೆಯಲ್ಲೂ ಕಾಂಗ್ರೆಸ್‌ ಸರ್ಕಾರ ರಾಜಕಾರಣ ಮಾಡುತ್ತಿದೆ. ಪ್ರಸಾದ ವಿತರಣೆಗೆ ಪ್ರಮಾಣೀಕರಣದ ಅಗತ್ಯವಿಲ್ಲ. ಈ ನಿಯಮ ಬರೀ ಹಿಂದೂಗಳಿಗೆ ಏಕೆ ಅನ್ವಯ? ಕಾಂಗ್ರೆಸ್‌ನಿಂದ ಪದೇ ಪದೇ ಹಿಂದೂ ವಿರೋಧಿ ನೀತಿ ಜಾರಿಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ನಮಗೆ ಮೋದಿ ಬೇಕು

ಪ್ರಧಾನಿ ನರೇಂದ್ರ ಮೋದಿ ಇಲ್ಲದಿದ್ದರೆ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಈ ದೇಶವನ್ನು ಮಾರಿಬಿಡುತ್ತಾರೆ. ನಮಗೆ ಮೋದಿ ಬೇಕು. ಆದರೆ, ರಾಜ್ಯದ ಬಿಜೆಪಿ ನಾಯಕರು ಸರಿಯಿಲ್ಲ. ನಿರ್ಲಜ್ಯ ರಾಜಕಾರಣಿಗಳು ಎಂದು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಪ್ರಮೋದ್‌ ಮುತಾಲಿಕ್‌ ಹರಿಹಾಯ್ದರು.

ಎಸ್‌ಡಿಪಿಐ ಬ್ಯಾನ್‌ ಮಾಡಲಿ:

ರಾಣಿ ಚೆನ್ನಮ್ಮ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ವಿರೋಧ ವ್ಯಕ್ತಪಡಿಸಿರುವ ಎಸ್‌ಡಿಪಿಐ ದೇಶದ್ರೋಹಿ ಪಕ್ಷವಾಗಿದೆ. ಹಲವು ಹಿಂದೂಗಳ ಕೊಲೆಯಲ್ಲಿ ಈ ದೇಶದ್ರೋಹಿ ಎಸ್‌ಡಿಪಿಐ ಪಕ್ಷದವರು ಭಾಗಿಯಾಗಿರುವುದು ಕಂಡುಬಂದಿದೆ. ಕೇಂದ್ರ ಸರ್ಕಾರ ಕೂಡಲೇ ಪಿಎಫ್ಐ ಮಾದರಿಯಲ್ಲಿ ಎಸ್‌ಡಿಪಿಐಯನ್ನು ನಿಷೇಧಿಸಬೇಕು ಎಂದು ಪ್ರಮೋದ ಮುತಾಲಿಕ್‌ ಒತ್ತಾಯಿಸಿದರು.

Share this article