ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಮೇಲಿದೆ: ಶ್ರೀಗಳು

KannadaprabhaNewsNetwork | Published : May 15, 2025 1:32 AM

ಚನ್ನಪಟ್ಟಣ: ಭಾರತೀಯ ಸಂಸ್ಕೃತಿಗೆ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದುದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿರಕ್ತಮಠದ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿ ತಿಳಿಸಿದರು.

ಚನ್ನಪಟ್ಟಣ: ಭಾರತೀಯ ಸಂಸ್ಕೃತಿಗೆ ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠವಾದುದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ವಿರಕ್ತಮಠದ ಶ್ರೀ ಶ್ರೀ ಶಿವರುದ್ರ ಮಹಾಸ್ವಾಮಿ ತಿಳಿಸಿದರು.

ಪಟ್ಟಣದ ಖಾಸಗಿ ಕನ್ವೆನ್ಷನ್ ಹಾಲ್‌ನಲ್ಲಿ ಭಾರತ ವಿಕಾಸ ಪರಿಷದ್ ಕಣ್ವ ಶಾಖೆ ಹಮ್ಮಿಕೊಂಡಿದ್ದ ೨೦೨೫ - ೨೬ನೇ ಸಾಲಿನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೌಟುಂಬಿಕ ಸಭೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದ ಅವರು, ಇಂದು ನಮ್ಮತನವನ್ನು ಮರೆತ ಕಾರಣ ಸಂಸ್ಕೃತಿಯಿಂದ ವಿಮುಖರಾಗುತ್ತಿದ್ದೇವೆ. ಸಂಸ್ಕೃತಿ ಸಂಸ್ಕಾರದಿಂದ ನಮ್ಮ ಪರಂಪರೆಯ ಅರಿವಾಗುತ್ತದೆ. ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರ ಬೆಳೆಯುವಲ್ಲಿ ಹಿರಿಯರು ಸೂಕ್ತ ಸಮಯದಲ್ಲಿ ತಿಳಿವಳಿಕೆ ನೀಡಬೇಕು. ಇಲ್ಲವಾದಲ್ಲಿ ಮಕ್ಕಳು ದಾರಿ ತಪ್ಪುವ ಸಾಧ್ಯತೆ ಇರುತ್ತದೆ. ಸಂಸ್ಕಾರ ಮರೆತರೆ ಸಂಘರ್ಷಕ್ಕೆ ಹಾದಿಯಾಗುತ್ತದೆ ಎಂದರು.

ಗೌಡಗೆರೆ ಶ್ರೀ ಚಾಮುಂಡೇಶ್ವರಿ ಬಸಪ್ಪನ ಪುಣ್ಯಕ್ಷೇತ್ರದ ಧರ್ಮದರ್ಶಿ ಡಾ. ಮಲ್ಲೇಶ್ ಗುರೂಜಿ ಮಾತನಾಡಿ, ಮಾನವೀಯ ಮೌಲ್ಯ ಮೈಗೂಡಿಸಿಕೊಂಡು ಭಾವಿಪ ಸಮಾಜಮುಖಿ ಕೆಲಸ ಮಾಡುತ್ತಿದೆ. ಯುವ ಜನಾಂಗ ಈ ಸಂಸ್ಥೆಯ ಸಕ್ರಿಯ ಸದಸ್ಯರಾಗುವ ಮೂಲಕ ಸಮಾಜಸೇವೆ ಮಾಡುವ ಮೂಲಕ ತಮ್ಮ ಜೀವನ ಸಾರ್ಥಕ ಪಡಿಸಿಕೊಳ್ಳಬೇಕು. ಅನ್ನ ಕೊಡುವ ರೈತರು ಮತ್ತು ಜೀವ ಕಾಯುವ ಸೈನಿಕರು ದೇಶದ ಎರಡು ಕಣ್ಣುಗಳಿದ್ದಂತೆ. ಇವರಿಬ್ಬರೂ ದೇಶದ ಸಂಪತ್ತು. ಇವರನ್ನು ಸಂಸ್ಥೆ ಗೌರವಿಸುತ್ತಿರುವುದು ಸಂತಸದಾಯಕ ವಿಚಾರ ಎಂದರು.

ಕಣ್ವ ಡಯಾಗ್ನೋಸ್ಟಿಕ್ ಸೆಂಟರ್ ಸಂಸ್ಥಾಪಕ ಡಾ.ವೆಂಕಟಪ್ಪ ಮಾತನಾಡಿ, ಸಮಾಜದಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಪಸರಿಸುವ ನಿಟ್ಟಿನಲ್ಲಿ ಹಾಗೂ ಪರಿಸರ, ಆರೋಗ್ಯ, ಶಿಕ್ಷಣದ ಕ್ಷೇತ್ರದಲ್ಲಿ ಭಾರತ ವಿಕಾಸ ಪರಿಷದ್ ಸೇವೆ ಅಮೂಲ್ಯವಾದುದು. ಇಂದಿನ ಜಗತ್ತಿನಲ್ಲಿ ದುಷ್ಟ ಶಕ್ತಿಗಳು ಭಯೋತ್ಪಾದನೆ ಮೂಲಕ ದೇಶವನ್ನು ಛಿದ್ರಗೊಳಿಸಲು ಯತ್ನಿಸುತ್ತಿರುವುದು ವಿಷಾದದ ಸಂಗತಿ ಎಂದು ಹೇಳಿದರು.

ಭಾವಿಪ ಸೇವಾ ವಿಭಾಗದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ, ಕರ್ನಾಟಕ ದಕ್ಷಿಣ ಪ್ರಾಂತ್ಯ ಮಾಜಿ ಅಧ್ಯಕ್ಷ ಅರುಣ್ ಘಾಟಗೆ ನೂತನ ಪದಾಧಿಕಾರಿಗಳಿಗೆ ಹಾಗೂ ಭಾವಿಪ ದಕ್ಷಿಣ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ವಸಂತ್ ಕುಮಾರ್ ನೂತನ ಸದಸ್ಯರಿಗೆ ದಾಯಿತ್ವ ಬೋಧಿಸಿರು.

ಇದೇ ವೇಳೆ ನಿವೃತ್ತ ಯೋಧ ಮತ್ತಿಕೆರೆ ಚಂದ್ರಶೇಖರ್ ಹಾಗೂ ಪ್ರಗತಿಪರ ರೈತ ಹೊನ್ನಾಯಕನಹಳ್ಳಿ ಕೃಷ್ಣಯ್ಯರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಮಾಜಿ ಕಾರ್ಯದರ್ಶಿ ಬಿ. ಎನ್. ಕಾಡಯ್ಯ ಅವರಿಗೆ ವಿಕಾಸರತ್ನ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಹುತಾತ್ಮ ಯೋಧರಿಗೆ ಭಾವಪೂರ್ಣ ನಮನ ಸಲ್ಲಿಸಲಾಯಿತು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷ ಗುರುಮಾದಯ್ಯ, ಚಂದು ಎಲೆಕ್ಟ್ರಾನಿಕ್ಸ್ ಮಾಲೀಕ ಮಹೇಶ್ವರ್, ಭಾವಿಪ ಭಾರತೀಯ ದಕ್ಷಿಣ ಪ್ರಾಂತ್ಯದ ಪದಾಧಿಕಾರಿ ಚಂದ್ರಿಕಾಗಿರೀಶ್, ಭಾ.ವಿ. ಪ ನೂತನ ಅಧ್ಯಕ್ಷ ಪುಟ್ಟಸ್ವಾಮಿಗೌಡ ( ಡಿಪಿಎಸ್ ), ಕಾರ್ಯದರ್ಶಿ ಯೋಗೇಶ್ ಚಕ್ಕೆರೆ, ಖಜಾಂಚಿ ವಿ.ಟಿ.ರಮೇಶ್, ಬೆಸ್ಕಾಂ ಶಿವಲಿಂಗಯ್ಯ, ರಾಧಿಕಾ ರವಿಕುಮಾರ್ ಗೌಡ ಇತರರು ಉಪಸ್ಥಿತರಿದ್ದರು.

ಪೊಟೋ೧೪ಸಿಪಿಟಿ೧:

ಚನ್ನಪಟ್ಟಣದಲ್ಲಿ ಭಾರತ ವಿಕಾಸ ಪರಿಷದ್ ಕಣ್ವ ಶಾಖೆಯ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಕೌಟುಂಬಿಕ ಸಭೆ ಕಾರ್ಯಕ್ರಮ ನಡೆಯಿತು.