ಬ್ಯಾಡಗಿ: ನಾವು ಬದುಕಬೇಕು, ಇನ್ನೊಬ್ಬರನ್ನು ಬದುಕಲು ಬಿಡಬೇಕು. ರೂಪಗೊಂಡಿರುವ ಜಗತ್ತನ್ನು ಕೆಡಿಸದಿರುವುದೇ ಅಹಿಂಸೆ. ಧರ್ಮವನ್ನು ಅರ್ಥೈಸಿಕೊಳ್ಳುವವನಿಗೆ ಸ್ವಲ್ಪ ಮಟ್ಟಿಗಾದರೂ ಅಹಿಂಸೆ ಕುರಿತು ತಿಳಿದಿರಬೇಕು ಎಂದು ಕೊಪ್ಪಳ ಗವಿಸಿದ್ದೇಶ್ವರ ಶ್ರೀಗಳು ಹೇಳಿದರು.
ಅಹಿಂಸೆ, ದ್ವೇಷ ತಿಳಿದಿದ್ದರೇ ಮಹಾಭಾರತ ನಡೆಯುತ್ತಿರಲಿಲ್ಲ: ದಾಯಾದಿಗಳ ದ್ವೇಷದಿಂದಲೇ ಮಹಾಭಾರತವಾಯಿತು. ಕುಂತಿ ಮಕ್ಕಳಿಗೆ ರಾಜ್ಯ ಕೊಡಲೊಪ್ಪದ ಕಾರಣಕ್ಕೆ ಮತ್ತು ಮಕ್ಕಳ ಮೇಲಿನ ವ್ಯಾಮೋಹದಿಂದ ಹುಟ್ಟಿದ ದ್ವೇಷವು ಮಹಾಭಾರತವನ್ನೇ ಸೃಷ್ಟಿಸಿತು. ಮನುಷ್ಯ ಸಂಬಂಧಗಳು ಕೆಡುತ್ತಿವೆ, ನಿಸರ್ಗದ ಸಂಬಂಧಗಳು ಉತ್ತಮವಾಗಿದ್ದು ಗಟ್ಟಿಯಾಗಿವೆ ಎಂದರು.
ಮನುಷ್ಯ ಭೂಮಿಯೊಂದಿಗೆ ಸಂವೇದನಾಶೀಲರಾಗಿರಬೇಕು. ಭೂಮಿ ತಾಯಿಗೆ ನಾವು ಕಸವನ್ನು ಹಾಕಿದರೆ ಅವಳು ರಸವನ್ನು ನೀಡುತ್ತಾಳೆ, ಇಂತಹ ಅದ್ಭುತವಾದ ಭೂಮಿ ಹಾಗೂ ಜಗತ್ತನ್ನು ನೋಡಿ ಕೆಡಿಸುವ ಮನಸ್ಸು ನಮ್ಮಲ್ಲಿ ಮೂಡುತ್ತಿದೆ. ಗುಬ್ಬಚ್ಚಿಗಳು ಹುಲ್ಲಿನಿಂದ ಮಾಡಿದ ಮನೆ ಬೀಳುವುದಿಲ್ಲ. ಎಂಜಿನಿಯರ್ ಕಟ್ಟಿದ ಮನೆಗಳು ಬೀಳುತ್ತಿದ್ದು, ಹುಡುಕುತ್ತಾ ಹೋದರೆ ಜಗತ್ತಿನಲ್ಲಿ ಇಂತಹ ಆಶ್ಚರ್ಯಗಳು ಸಾಕಷ್ಟಿವೆ ಎಂದರು.ನಮ್ಮ ನಿರೀಕ್ಷೆಗಳು ಬದಲಾಗಿವೆ ಹೀಗಾಗಿ ಸಂಬಂದಗಳು ಬದಲಾಗುತ್ತಿವೆ, ನಾವು ಕಟ್ಟುತ್ತಿರುವ ಮನೆಯ ಗೋಡೆಗಳು ಅಣ್ಣ, ತಮ್ಮಂದಿರನ್ನು ತಂದೆ ಮಕ್ಕಳನ್ನು ಬೇರ್ಪಡಿಸುತ್ತಿವೆ ಎಂಬುದು ಎಲ್ಲರಿಗೂ ಎಚ್ಚರವಿರಲಿ. ತುಂಬಿದ ಕುಟುಂಬದಲ್ಲಿ ಕರುಣೆ ಎಂಬ ಗೋಡೆಗಳಿಂದ ಮನೆಯನ್ನು ನಿರ್ಮಿಸಿದ್ದೇ ಆದಲ್ಲಿ ಅದೊಂದು ಸುಂದರವಾದ ಮನೆಯಾಗಿ ಪರಿವರ್ತನೆಯಾಗಲಿದೆ.
ಇನ್ನೊಬ್ಬರ ದುಖಃವನ್ನು ಎಂದಿಗೂ ವಿಜೃಂಭಿಸಬಾರದು, ನಮಗೆ ಬೇಡವಾದ ವಸ್ತುಗಳ ಜಗತ್ತಿನಲ್ಲಿರಬಾರದು ಎಂಬುದು ಮೂರ್ಖತನದ ಪರಮಾವಧಿ, ಎಲ್ಲ ರೋಗಗಳ ಮೂಲವೇ ದ್ವೇಷ, ಹೀಗಾಗಿ ಪ್ರೀತಿಯಿಂದ ಬದುಕಬೇಕು, ನಮ್ಮಲ್ಲಿರುವ ಅಭಿರುಚಿಗಳ ಬದಲಾವಣೆ ಆದಂತೆ ಇಡೀ ವಿಶ್ವವೇ ಇನಬ್ಯಾಲನ್ಸ್ ಆಗುತ್ತಿದೆ, ಕಾರಣವಿಲ್ಲದೇ ನಡೆಯುತ್ತಿರುವ ಯುದ್ಧಗಳು ಇನ್ನೊಬ್ಬರು ಬದುಕುವುದನ್ನು ಪ್ರಶ್ನಿಸುತ್ತಿವೆ ಎಂದರು.