ಕನ್ನಡಪ್ರಭ ವಾರ್ತೆ ವಿಜಯಪುರ
ಶಾಲೆಗಳಲ್ಲಿ ಹಿಜಾಬ್‌ಗೆ ಅವಕಾಶ ಕಲ್ಪಿಸಿದ ವಿಚಾರವಾಗಿ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಭೂತಿ ಹಚ್ಚಿಕೊಳ್ಳಬಹುದು. ಕುಂಕುಮ ಹಚ್ಚಿಕೊಳ್ಳಬಹುದು, ನಾಮ ಹಚ್ಚಿಕೊಳ್ಳಬಹುದು ಅದರಲ್ಲೇನೂ ತಪ್ಪಿಲ್ಲ, ಅದನ್ಯಾರು ಬೇಡ ಎನ್ನುವುದಿಲ್ಲ. ಜನಿವಾರ, ಇಷ್ಟಲಿಂಗ ಹಾಕಿಕೊಳ್ಳುವುದರಿಂದ ಸಮಸ್ಯೆಯಿಲ್ಲ. ಆದರೆ ಕೇಸರಿಗೆ ಅವಕಾಶವಿಲ್ಲ, ಅದು ಗುಡಿಯ ಮೇಲೆ, ಮಠದ ಮೇಲೆ ಕೇಸರಿಯಿತ್ತು. ಶಾಲಾ ಮಕ್ಕಳು ಕೇಸರಿ ಧರಿಸ್ತಿದ್ರಾ? ಸುಮ್ಮನೆ ಯಾವುದಕ್ಕೋ ಲಿಂಕ್ ಮಾಡಿ ಮೊಂಡ ನ್ಯಾಯ ಮಾಡುವುದಲ್ಲ ಎಂದರು.
ಶಾಸಕ ಯತ್ನಾಳ ಕೇಸರಿ ಶಾಲು ಕೊಡುತ್ತೇನೆ ಎಂದ ವಿಚಾರವಾಗಿ ಪ್ರತಿಕ್ರಿಯಿಸಿ, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ಯತ್ನಾಳರು ಕೂಡ ಟೋಪಿ, ನಮಾಜ, ಟಿಪ್ಪುಸುಲ್ತಾನ ಜಯಂತಿ ಎಲ್ಲವನ್ನೂ ಮಾಡಿಯೇ ಬಿಟ್ಟಿದ್ದಾರೆ ಎಂದು ತಿರುಗೇಟು ನೀಡಿದರು.ಯತ್ನಾಳ ಹೊಸ ಪಕ್ಷ ಕಟ್ಟುವ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿ, ಅವರು ಹೊಸ ಪಕ್ಷ ಮಾಡಲಿ ಅವರಿಗೆ ಒಳ್ಳೆಯದಾಗಲಿ. ಹೊಸ ಪಕ್ಷ ಮಾಡಿದರೆ ನಾನು ಫುಲ್ ಸಪೋರ್ಟ್ ಮಾಡುತ್ತೇನೆ. ಅವರು ಬೇಗನೆ ಪಕ್ಷ ಮಾಡಲಿ. ತಮಿಳುನಾಡಿನ ವಿಜಯ ರೀತಿ ಅವರು ಮುಖ್ಯಮಂತ್ರಿಯಾಗುತ್ತಾರೆ. ತಮಿಳುನಾಡು ರೀತಿ ಇವರೂ ಸಕ್ಸಸ್‌ಫುಲ್ ಆಗುತ್ತಾರೆ. ಬೇಗ ಯತ್ನಾಳರು ಹೊಸ ಪಕ್ಷ ಮಾಡಲಿ. ಆದರೆ ಅವರು ಮಾಡುವುದಿಲ್ಲ. ಸುಮ್ಮನೆ ಬ್ಲಾಕ್‌ಮೇಲ್ ಮಾಡುತ್ತಿದ್ದಾರೆ. ಹೇಗಾದರೂ ಮಾಡಿ ನನ್ನನ್ನು ವಾಪಸ್ ತೆಗೆದುಕೊಳ್ಳಿ, ನನಗೆ ವಿಜಯಪುರ ಸಿಟಿಗೆ ಟಿಕೆಟ್ ಕೊಡಿ ಅಂತಾರಷ್ಟೆ ಅವರು ಎಂದು ಲೇವಡಿ ಮಾಡಿದರು.
ನರೇಂದ್ರ ಮೋದಿಯವರ ಅಚ್ಛೇದಿನದಲ್ಲಿ ಏನೆಲ್ಲ ಆಗಬೇಕು ಎಲ್ಲವೂ ಆಗುತ್ತಿದೆ. ಆದರೂ ಮೋದಿಯ ಸದ್ಭಕ್ತರು ಅರ್ಥ ಮಾಡಿಕೊಳ್ಳುತ್ತಿಲ್ಲ. ಈಗ ಬಂಗಾರ ಖರೀದಿ ಮಾಡಬೇಡಿ ಎಂದರು. ಕೊರೋನಾ ಸಮಯದಲ್ಲಿ ತಮಟೆ ಹೊಡೆಯಲು ಹಚ್ಚಿದರು. ಸುಮ್ಮನೆ ಇವೆಲ್ಲ ನಾಟಕೀಯ. ಕೊರೋನಾ ಬಂದಾಗ ವೈಜ್ಞಾನಿಕವಾಗಿ ಔಷಧ ಕೊಡಬೇಕು, ಅದುಬಿಟ್ಟು ತಮಟೆ ಹೊಡೆದರೆ ಕೊರೋನಾ ಹೋಗುತ್ತಾ? ಇದು ವಿಜ್ಞಾನವಾ? ಈಗೇನು ಮಾಡಬೇಕಂತೆ? ಸೈಕಲ್‌ಮೇಲೆ ಹೋಗಿ, ಗಾಡಿ ಬಿಡಿ ಎನ್ನುತ್ತಿದ್ದಾರೆ. ಯುಪಿಎ ಸರ್ಕಾರದಲ್ಲಿ ಮನಮೋಹನಸಿಂಗ್ ಅವರು ಇದ್ದಾಗ ಅರ್ಥ ವ್ಯವಸ್ಥೆ ಹೇಗಿತ್ತು? ಡಾಲರ್ ರೇಟು, ಪೆಟ್ರೋಲ್ ರೇಟು, ಡಿಸೇಲ್ ರೇಟಿನ ಬಗ್ಗೆ ಹಿಂದೆ ಇವರೇ ಮಾತನಾಡಿದ್ದಾರೆ. ಈಗೇನು ಆಗುತ್ತಿದೆ?, ಅಚ್ಛೇದಿನ ರೈತರಿಗೆ ಬಂದಿದೆಯಾ?, ಯಾರಿಗೆ ಬಂದಿದೆ ಎಂದು ಹಲವಾರು ಪ್ರಶ್ನೆಗಳನ್ನು ಕೇಳಿದರು.
ದುರ್ದೈವ ಎಂದರೆ ಹಿಂದೂ-ಮುಸ್ಲಿಂ ವಿಚಾರದಲ್ಲಿ ಬಾರಾ ಖೂನ್ ಮಾಫ್ ಅಂತಾರಲ್ಲ ಹಾಗೆಯೇ ಇವರದ್ದು ಬಾರಾ ಖೂನ್ ಮಾಫ್ ಆಗುತ್ತಲೇ ಬಂದಿದೆ. ಜನತೆ ಅರ್ಥ ಮಾಡಿಕೊಳ್ಳಬೇಕು. ಇಂದು ನಾವು ಪೆಟ್ರೋಲ್, ಡಿಸೇಲ್, ಗ್ಯಾಸ್ ಸಿಲಿಂಡರ್ ಸೇರಿದಂತೆ ಎಲ್ಲದಕ್ಕೂ ಹೆಚ್ಚಿನ ಬೆಲೆ ಕಟ್ಟಬೇಕಾಗಿ ಬಂದಿದೆ. ರೈತರ ಆದಾಯ ದ್ವಿಗುಣ ಮಾಡುತ್ತೇನೆ ಎಂದಿದ್ದರು ಮಾಡಿದ್ರಾ, ಏನೆಲ್ಲ ಮಾತನಾಡಿದರು. ಬರೀ ಸುಳ್ಳು ಆಶ್ವಾಸನೆಗಳು. ಭ್ರಷ್ಟಾಚಾರದ ಬಗ್ಗೆ, ಅಸ್ಸಾಂ ಮುಖ್ಯಮಂತ್ರಿ ಬಗ್ಗೆ, ಅಜೀತ್ ಪವಾರ ಬಗ್ಗೆ, ಬಿಹಾರ ಮುಖ್ಯಮಂತ್ರಿ ಬಗ್ಗೆ ಏನೆಲ್ಲ ಮಾತನಾಡಿದರು. ಇಂತಹವರೆಲ್ಲ ಕ್ರಿಮಿನಲ್ಸ್ ಬಿಜೆಪಿಗೆ ಹೋದ ತಕ್ಷಣ ಲಾಂಡ್ರಿ ಮಷಿನ್ (ವಾಶಿಂಗ್ ಮಷಿನ್) ನಲ್ಲಿ ಸ್ವಚ್ಛವಾಗಿಬಿಡ್ತಾರೆ. ಶುಭ್ರವಾಗಿಬಿಡ್ತಾರೆ ಅವರೆಲ್ಲ ಎಂದು ಕಿಡಿಕಾರಿದರು.