ಆ್ಯಂಬುಲೆನ್ಸ್‌ ಸುಗಮ ಸಂಚಾರಕ್ಕೆವೈರ್‌ಲೆಸ್‌ ಸಂಪರ್ಕ ಬಳಕೆ: ಡಿಕೆಶಿ

KannadaprabhaNewsNetwork |  
Published : Jan 14, 2024, 01:33 AM ISTUpdated : Jan 14, 2024, 01:45 PM IST
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ನಟ ರಮೇಶ್ ಅರವಿಂದ್ ಅವರು ಐಡಿಯಾಥಾನ್ ಸ್ಪರ್ಧೆಯ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಐಶ್ವರ್ಯ ಡಿ.ಕೆ.ಎಸ್. ಉಪಸ್ಥಿತರಿದ್ದರು. | Kannada Prabha

ಸಾರಾಂಶ

ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಟ್ರಾಫಿಕ್ ಸಿಗ್ನಲ್‌ಗಳ ಜೊತೆ ವೈರ್‌ಲೆಸ್ ಸಂಪರ್ಕ, ಸಾರ್ವಜನಿಕ ಸ್ಥಳಗಳಲ್ಲಿ ಪಿಂಕ್ ಬೂತ್ ಸ್ಥಾಪನೆ ಸೇರಿ ಐಡಿಯಾಥಾನ್ ಸ್ಪರ್ಧೆಯ ಅತ್ಯುತ್ತಮ ಸಲಹೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು  ಡಿಕೆ ಶಿವಕುಮಾರ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಟ್ರಾಫಿಕ್ ಸಿಗ್ನಲ್‌ಗಳ ಜೊತೆ ವೈರ್‌ಲೆಸ್ ಸಂಪರ್ಕ, ಸಾರ್ವಜನಿಕ ಸ್ಥಳಗಳಲ್ಲಿ ಪಿಂಕ್ ಬೂತ್ ಸ್ಥಾಪನೆ, ಹೂವು ಮತ್ತು ಆಹಾರ ತ್ಯಾಜ್ಯಗಳ ಸಮರ್ಪಕ ವಿಲೇವಾರಿ ಸೇರಿ ಐಡಿಯಾಥಾನ್ ಸ್ಪರ್ಧೆಯ ಅತ್ಯುತ್ತಮ ಸಲಹೆಗಳನ್ನು ಅನುಷ್ಠಾನ ಮಾಡಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಯುವ ನಾಯಕತ್ವ ಸಮ್ಮೇಳನ ಹಾಗೂ ಐಡಿಯಾಥಾನ್ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಡಿ.ಕೆ. ಶಿವಕುಮಾರ್ ಅ‍ವರು, ಬ್ರ್ಯಾಂಡ್ ಬೆಂಗಳೂರು ಯೋಜನೆ ಮೂಲಕ ಬೆಂಗಳೂರಿನ ಸಮಸ್ಯೆಗಳಿಗೆ ಶಾಲಾ ಮಕ್ಕಳು ಐಡಿಯಾಥಾನ್ ಸ್ಪರ್ಧೆ ಮೂಲಕ ಉತ್ತಮ ಸಲಹೆಗಳನ್ನು ನೀಡಿದ್ದಾರೆ. 

ದೇಶದ ಬೆಳವಣಿಗೆಗೆ ನಿಮ್ಮ ಆಲೋಚನೆ, ನಾಯಕತ್ವ ಗುಣ ಅತ್ಯಗತ್ಯ. ಕೇವಲ ರಾಜಕಾರಣಿಗಳು ಮಾತ್ರ ನಾಯಕರಲ್ಲ. ನಿಮ್ಮಲ್ಲೂ ನಾಯಕತ್ವ ಗುಣ ಇವೆ. ನೀವು ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಂಡರೂ ನಾಯಕತ್ವದ ಗುಣ ಬೆಳೆಸಿಕೊಳ್ಳಬೇಕು. ಶಾಲಾ ಮಟ್ಟದಲ್ಲಿ ಇಂತಹ ಸ್ಪರ್ಧೆ ಏರ್ಪಡಿಸಲು ಬಿಬಿಎಂಪಿ ಆಯುಕ್ತರಿಗೆ ಸಲಹೆ ನೀಡುತ್ತೇನೆ ಎಂದರು.

ಇನ್ಫೋಸಿಸ್ ಫೌಂಡೇಶನ್‌ ಸಂಸ್ಥಾಪಕಿ ಸುಧಾಮೂರ್ತಿ ಮಾತನಾಡಿ, ಪ್ರತಿ ಮಗುವಿನಲ್ಲೂ ಹೊಸ ಆಲೋಚನೆಗಳು ಇರುತ್ತವೆ. ಇಂತಹ ಆಲೋಚನೆಗಳಿಗೆ ವೇದಿಕೆ ಕಲ್ಪಿಸುವುದು ಮುಖ್ಯ. ಸ್ಪರ್ಧೆಯಲ್ಲಿ ತಮ್ಮ ಆಲೋಚನೆ ವ್ಯಕ್ತಪಡಿಸಿದ ಮಕ್ಕಳ ಆತ್ಮವಿಶ್ವಾಸ ಕಂಡು ಸಂತೋಷವಾಗಿದೆ. 

ಇಲ್ಲಿನ ಮಕ್ಕಳ ಸಲಹೆಗಳನ್ನು ತೀರ್ಪುಗಾರರಾಗಿ ಆಯ್ಕೆ ಮಾಡುವುದು ನಿಜಕ್ಕೂ ಸವಾಲಿನ ಕೆಲಸ. ಯುವ ಪೀಳಿಗೆಯಿಂದ ನಾನೂ ಕೆಲವು ವಿಚಾರ ಕಲಿಯುವಂತಾಗಿದೆ ಎಂದರು. ಐಡಿಯಾಥಾನ್‌ ಪರಿಕಲ್ಪನೆ ಹುಟ್ಟುಹಾಕಿ ಕಾರ್ಯರೂಪಕ್ಕೆ ತಂದ ಐಶ್ವರ್ಯ ಡಿ.ಕೆ.ಎಸ್ ಮಾತನಾಡಿದರು.

ಸ್ಪರ್ಧೆಯಲ್ಲಿ ವಿಜೇತ ಶಾಲೆಗಳು ಬನಶಂಕರಿಯ ನ್ಯಾಷನಲ್ ಹಿಲ್ ವ್ಯೂ ಶಾಲೆ ಹಾಗೂ ಕಸ್ತೂರಿ ನಗರದ ಪ್ರೆಸಿಡೆನ್ಸಿ ಶಾಲೆಗಳು ಐಡಿಯಾಥಾನ್ ಸ್ಪರ್ಧೆಯ ವಿಜೇತರಾಗಿ ಹೊರಹೊಮ್ಮಿವೆ. ಪ್ರಶಸ್ತಿ ವಿಜೇತ ವಿದ್ಯಾರ್ಥಿಗಳಿಗೆ ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ನಡೆಯುವ 40 ಗಂಟೆಗಳ ಅನ್ವೇಷಣೆ ಮತ್ತು ವ್ಯಾಪಾರೋದ್ಯಮ ಕುರಿತ ಕಾರ್ಯಕ್ರಮಕ್ಕೆ ಸ್ಕಾಲರ್‌ಶಿಪ್ ಅನ್ನು ನೀಡಲಾಗುತ್ತದೆ.

PREV

Recommended Stories

ಕಾಂಗ್ರೆಸ್ ಸರ್ಕಾರದಿಂದ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು: ಶಾಸಕ ರಮೇಶ್‌ ಬಂಡಿಸಿದ್ದೇಗೌಡ
ಸರ್ಕಾರಿ ಶಾಲೆ ಉನ್ನತಿಗೆ ಎಲ್ಲರ ಸಹಕಾರ ಅಗತ್ಯ