ದೊಡ್ಡಬಳ್ಳಾಪುರ: ಸಮಕಾಲೀನ ಮಾರುಕಟ್ಟೆ ಏರಿಳಿತಗಳಿಂದ ತಲ್ಲಣಗೊಂಡಿರುವ ಇಲ್ಲಿನ ನೇಕಾರಿಕೆ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತಯಾರಾಗುತ್ತಿರುವ ಸೀರೆಗಳು ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಪರಿಣಾಮವಾಗಿ ಸಾಂಪ್ರದಾಯಿಕ ಸೀರೆ ಉದ್ಯಮಕ್ಕೆ ಮಾರುಕಟ್ಟೆ ಕುಸಿದಿದೆ. ಇದರಿಂದ ಸಾವಿರಾರು ನೇಕಾರರ ಬದುಕು ಮೂರಾಬಟ್ಟೆಯಾಗಿದೆ. ಈ ಅಸ್ಥಿರತೆ ವಿರುದ್ದ ದೊಡ್ಡಬಳ್ಳಾಪುರದ ನೇಕಾರರು ಸಂಘಟಿತರಾಗಿ ಬೀದಿಗಿಳಿದಿದ್ದು, ಪ್ರತಿಭಟನೆಯ ಹಾದಿ ತುಳಿದಿದ್ದಾರೆ.
ವಿದ್ಯುತ್ ಮಗ್ಗಗಳ ಮೀಸಲು ಕಾಯ್ದೆ ರೂಪಿಸಿ:
ಗುಜರಾತಿನ ಸೂರತ್ ಹಾಗೂ ಇತರೆಡೆ ರೇಪಿಯರ್ ಮಗ್ಗಗಳಲ್ಲಿ ನೇಯ್ದ ಸೀರೆಗಳನ್ನು ಇಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ದೊಡ್ಡಬಳ್ಳಾಪುರದ ನೇಕಾರು ಸಂಕಷ್ಟಕ್ಕೆ ಸಿಲುಕಿದ್ದಾರೆ. ನೇಕಾರರ ಹಿತರಕ್ಷಣೆಗಾಗಿ ವಿದ್ಯುತ್ ಮಗ್ಗಗಳ ಮೀಸಲು ಕಾಯ್ದೆ ರೂಪಿಸಬೇಕು. ಹೊರ ರಾಜ್ಯಗಳಿಂದ ಬರುವ ಸೀರೆ ಮಾರಾಟ ತಡೆಯಬೇಕು. ನೇಯ್ದೆ ಉದ್ಯಮ ಬಿಕ್ಕಟ್ಟಿಗೆ ಸರ್ಕಾರ ಕೂಡಲೇಮಧ್ಯ ಪ್ರವೇಶಿಸಬೇಕೆಂದು ಪ್ರತಿ ಭಟನಾನಿರತರು ಆಗ್ರಹಿಸಿದರು.ಹೊರರಾಜ್ಯಗಳಿಂದ ಸೀರೆಗಳನ್ನು ಆಮದು ಮಾಡಿಕೊಂಡು ಮಾರಾಟ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು. ರೇಪಿಯರ್ ಮಗ್ಗಗಳಲ್ಲಿ ಇಲ್ಲಿನ ಮಾದರಿಯ ಸೀರೆಗಳನ್ನು ನೇಯದಂತೆ ಸರ್ಕಾರ ಕಾನೂನು ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಆಗ್ರಹಿಸಿದರು.
ಮುಕ್ತ ವ್ಯಾಪಾರ ಒಪ್ಪಂದ ಜಾಗತೀಕರಣದ ಪ್ರಭಾವದಿಂದ ನೇಕಾರರು ಮಾರಾಟ ಮಾಡುವ ಸೀರೆಗಳಿಗೆ ಮಾರುಕಟ್ಟೆ ಇಲ್ಲದಂತಾಗಿ ನೇಕಾರರು ಸಂಕಷ್ಟದಲ್ಲಿದ್ದಾರೆ. ಈ ಹಿಂದೆ ನೇಕಾರರ ಹೋರಾಟದ ಫಲವಾಗಿ ರಾಜ್ಯ ಉಚಿತ ವಿದ್ಯುತ್ ಸೌಲಭ್ಯಗಳು ಸರ್ಕಾರದಿಂದ ದೊರೆತಿತ್ತು. ಈಗ ಸರ್ಕಾರ ಕಚ್ಚಾ ವಸ್ತುಗಳ ಬೆಲೆ ಕಡಿಮೆ ಮಾಡುವುದರೊಂದಿಗೆ, ನೇಕಾರರು ಉತ್ಪಾದಿಸಿದ ಬಟ್ಟೆಗಳನ್ನು ಖರೀದಿಸುವ ವ್ಯವಸ್ಥೆ ಮಾಡಬೇಕಿದೆ. ಈ ಕುರಿತು ಡಿ.1 ರಂದು ಸಂವಾದ ಏರ್ಪಡಿಸಲಾಗಿದೆ ಎಂದು ನೇಕಾರರ ಹೋರಾಟ ಸಮಿತಿ ಅಧ್ಯಕ್ಷ ಬಿ.ಜಿ. ಹೇಮಂತರಾಜು ತಿಳಿಸಿದರು.
ಇಲ್ಲಿನ ನೇಕಾರರ ಸಮಸ್ಯೆಗಳ ಕುರಿತು ಚರ್ಚಿಸಲು ಜನಪ್ರತಿನಿಧಿಗಳ ಹಾಗೂ ನೇಕಾರರ ಸಂಘಟನೆಗಳ ಮುಖಂಡರ ನಿಯೋಗವನ್ನು ಭೇಟಿ ಮಾಡಲು ಜವಳಿ ಸಚಿವರು ಡಿ.4 ರಂದು ಸಮಯ ನಿಗದಿ ಮಾಡಿದ್ದಾರೆ.ನೇಕಾರರು ಭಾವನಾತ್ಮಕವಾಗಿರದೇ ವಾಸ್ತವ ಸಂಗತಿ ಅರ್ಥ ಮಾಡಿಕೊಳ್ಳಬೇಕಿದೆ. ಇದು ಸರ್ಕಾರದ ಕಾಯ್ದೆಗೆ ಸಂಬಂಧಿಸಿದ ವಿಚಾರವಾಗಿರುವುದರಿಂದ ನಿರಂತರ ಹೋರಾಟ ಹಾಗೂ ಒತ್ತಾಯದ ಮೂಲಕ ಬಗೆಹರಿಸಿಕೊಳ್ಳಬೇಕಿದೆ ಎಂದು ನೇಕಾರ ವೇದಿಕೆ ಅಧ್ಯಕ್ಷ ವೇಣುಗೋಪಾಲ್ ಹೇಳಿದರು.
ನೇಕಾರರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವಂತೆ ತಹಶೀಲ್ದಾರ್ ಮಲ್ಲಪ್ಪ ಕೆ.ಯರಗೋಳ, ಕರ್ನಾಟಕ ರಾಜ್ಯ ಕೈ ಮಗ್ಗ ಮತ್ತು ಜವಳಿ ಇಲಾಖೆ ಜಂಟಿ ನಿರ್ದೇಶಕ ಪ್ರಕಾಶ್, ಉಪನಿರ್ದೇಶಕ ಸುರೇಶ್ ಅವರಿಗೆ ನೇಕಾರರು ಮನವಿ ಸಲ್ಲಿಸಲಾಯಿತು.
ಕೇಂದ್ರ ರೇಷ್ಮೆ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಟೆಕ್ಸ್ ಟೈಲ್ಸ್ ವೀವರ್ಸ್ ಅಸೋಸಿಯೇಶನ್ ಮುಖಂಡ ಆರ್. ಎಸ್.ಶ್ರೀನಿವಾಸ್, ವಿ.ನರಸಿಂಹಮೂರ್ತಿ, ವಕೀಲ ಎಂ.ಕೃಷ್ಣಮೂರ್ತಿ, ನೇಕಾರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಪಿ.ಎ.ವೆಂಕಟೇಶ್, ಮುಖಂಡ ಡಿ.ಆರ್.ಧ್ರುವಕುಮಾರ್ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನೇಕಾರರು ಭಾಗವಹಿಸಿದ್ದರು.
28ಕೆಡಿಬಿಪಿ1- ದೊಡ್ಡಬಳ್ಳಾಪುರದಲ್ಲಿ ನೇಕಾರಿಕೆ ಉದ್ಯಮ ಸಂಕಷ್ಟ ಹಿನ್ನಲೆ ಸಾವಿರಾರು ನೇಕಾರರು ಬೀದಿಗಿಳಿದು ಬೃಹತ್ ಪ್ರತಿಭಟನಾ ಸಭೆ ನಡೆಸಿದರು.
28ಕೆಡಿಬಿಪಿ2- ದೊಡ್ಡಬಳ್ಳಾಪುರ ನೇಕಾರರ ಹಿತರಕ್ಷಣೆಗೆ ಆಗ್ರಹಿಸಿ ನೇಕಾರ ಸಂಘಟನೆಗಳ ನೇತೃತ್ವದಲ್ಲಿ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.