ಕಾರವಾರ: ಮಂಡ್ಯ ಜಿಲ್ಲೆಯಲ್ಲಿ ಡಿ. 20ರಿಂದ 22ರ ವರೆಗೆ ನಡೆಯಲಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುವ ಕನ್ನಡ ಜ್ಯೋತಿ ರಥಯಾತ್ರೆಯನ್ನು ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸೋಮವಾರ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸ್ವಾಗತಿಸಿ ಪೂಜೆ ಸಲ್ಲಿಸಿ ಬರಮಾಡಿಕೊಳ್ಳಲಾಯಿತು.
ಆನಂತರ ಮಾತನಾಡಿದ ಸಹಾಯಕ ಆಯುಕ್ತ ಕನಿಷ್ಕ, ಕನ್ನಡ ಕೇವಲ ಭಾಷೆಯಲ್ಲ ತನ್ನದೇ ಆದ ನೆಲ, ಜಲ, ಸಂಸ್ಕೃತಿಯ ಹಿರಿಮೆಯನ್ನು ಒಳಗೊಂಡಿದೆ, ಮಂಡ್ಯದಲ್ಲಿ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲಿ ಎಂದು ಶುಭಹಾರೈಸಿದರು.ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ಮಾತನಾಡಿ, ಸಕ್ಕರೆ ನಾಡು ಮಂಡ್ಯದಲ್ಲಿ ಡಿ. 20ರಿಂದ 22ರ ವರೆಗೆ ನಡೆಯುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಜ್ಯೋತಿ ರಥವು 87 ದಿನಗಳ ಕಾಲ ರಾಜ್ಯದ 240 ತಾಲೂಕುಗಳಲ್ಲಿ ಸಂಚರಿಸಲಿದೆ. ಈ ರಥಯಾತ್ರೆಯ ಮೂಲಕ ಕನ್ನಡ ನಾಡು, ನುಡಿ, ಜಲ, ಸಂಸ್ಕೃತಿಯನ್ನು ಎಲ್ಲೆಡೆ ಪಸರಿಸುವ ಮತ್ತು ಜಾಗೃತಿ ಮೂಡಿಸುವ ಉದ್ದೇಶ ಹೊಂದಲಾಗಿದೆ. ಈ ರಥವು ಇಲ್ಲಿಂದ ಕಾಣಕೋಣ (ಗೋವಾ), ಜೋಯಿಡಾ, ದಾಂಡೇಲಿ, ಹಳಿಯಾಳ, ಯಲ್ಲಾಪುರ, ಶಿರಸಿ ಮೂಲಕ ಹಾನಗಲ್ ಮಾರ್ಗವಾಗಿ ಹಾವೇರಿ ಜಿಲ್ಲೆಗೆ ತಲುಪಲಿದೆ ಎಂದರು.ಕಸಾಪ ತಾಲೂಕು ಅಧ್ಯಕ್ಷ ರಾಮ ನಾಯ್ಕ ತಹಸೀಲ್ದಾರ್ ನಿಶ್ಚಲ್ ನರೋನಾ, ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಗಲಾ ಎಂ. ಮತ್ತಿತರರು ಇದ್ದರು.
ಕುಮಟಾದಲ್ಲಿ ಕನ್ನಡ ರಥಕ್ಕೆ ಭವ್ಯ ಸ್ವಾಗತ:ಮಂಡ್ಯದಲ್ಲಿ ಹಮ್ಮಿಕೊಂಡಿರುವ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ ಸಿದ್ದಾಪುರದ ಭುವನೇಶ್ವರಿ ದೇವಸ್ಥಾನದಿಂದ ಹೊರಟ ಕನ್ನಡ ರಥ ಭಾನುವಾರ ಸಾಯಂಕಾಲ ಕುಮಟಾ ಪಟ್ಟಣದ ಗಿಬ್ ವೃತ್ತಕ್ಕೆ ಆಗಮಿಸಿತು. ಈ ವೇಳೆ ತಾಲೂಕು ಆಡಳಿತ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದಿಂದ ಸಂಭ್ರಮದಿಂದ ಸ್ವಾಗತಿಸಲಾಯಿತು.ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ, ತಹಸೀಲ್ದಾರ್ ಸತೀಶ ಗೌಡ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ, ಸಾಹಿತಿಗಳಾದ ರೋಹಿದಾಸ ನಾಯಕ, ಬೀರಣ್ಣ ನಾಯಕ, ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ, ತಾಲೂಕಾಧ್ಯಕ್ಷ ಸುಬ್ಬಯ್ಯ ನಾಯ್ಕ, ಪಿ.ಎಂ. ಮುಕ್ರಿ, ಗೌರವ ಕಾರ್ಯದರ್ಶಿ ಪ್ರಮೋದ ನಾಯ್ಕ, ಪ್ರದೀಪ ನಾಯಕ, ಸೂರಜ ನಾಯ್ಕ, ರಾಜು ಮಾಸ್ತಿಹಳ್ಳ, ಪಿಎಸ್‌ಐ ಮಂಜುನಾಥ ಗೌಡ ಇನ್ನಿತರರು ಇದ್ದರು. ಬಳಿಕ ಕನ್ನಡಾಂಬೆಯ ರಥವನ್ನು ಮೆರವಣಿಗೆಯಲ್ಲಿ ತಾಲೂಕು ಸೌಧದ ಎದುರು ಒಯ್ದು ಪೂಜೆ ಸಲ್ಲಿಸಲಾಯಿತು.