75ನೇ ಗಣರಾಜ್ಯೋತ್ಸವ । ಜ.26 ರಿಂದ ಫೆ.23ರ ವರೆಗೆ ಕಾರ್ಯಕ್ರಮ । ಮತದಾನ ಜಾಗೃತಿ । ಸಾಂಸ್ಕೃತಿಕ ಮೆರವಣಿಗೆ
೭೫ನೇ ಗಣರಾಜ್ಯೋತ್ಸವದ ಅಂಗವಾಗಿ ಹಾಸನ ಜಿಲ್ಲೆಯಾದ್ಯಂತ ೨೬ ರ ಜನವರಿಯಿಂದ ೨೩ರ ಫೆಬ್ರವರಿವರೆಗೆ ಹಾಸನ ಜಿಲ್ಲಾದ್ಯಂತ ಸಂವಿಧಾನ ಜಾಗೃತಿ, ಮತದಾನ ಜಾಗೃತಿ ಮೂಡಿಸುವ ಅಂಗವಾಗಿ ಸಂವಿಧಾನ ಜಾಗೃತಿ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಗಳಲ್ಲಿ ನಡೆಸಲಾಗುವುದು ಎಂದು ಬೇಲೂರು ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿ ರಮೇಶ್ ತಿಳಿಸಿದರು.
ಅಡಗೂರು, ಘಟ್ಟದಹಳ್ಳಿ ಗ್ರಾಮ ಪಂಚಾಯಿತಿ ಮುಗಿಸಿಕೊಂಡು ಸಂಜೆ ಹಳೆಬೀಡು ಪಟ್ಟಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ರಥಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ, ಪಂಚಾಯಿತಿಯ ಸದಸ್ಯರು, ಶಾಲಾ ಮಕ್ಕಳಿಂದ ಭವ್ಯ ಸ್ವಾಗತವನ್ನು ನೀಡಲಾಯಿತು. ಇದರೊಂದಿಗೆ ಸಾಂಸ್ಕೃತಿ ಕಾರ್ಯಕ್ರಮವಾದ ಡೋಲು ಕುಣಿತದೊಂದಿಗೆ ಹೊಯ್ಸಳ ಸರ್ಕಲ್‌ನಿಂದ ಗ್ರಾಮ ಪಂಚಾಯಿತಿ ಕಚೇರಿ ವರೆಗೂ ಪುಷ್ಪ ನಮನ ಮೂಲಕ ಮೆರವಣಿಗೆಯಿಂದ ಸ್ವಾಗತಿಸಲಾಯಿತು.ಗ್ರಾಮ ಪಂಚಾಯತ್ ಅಧ್ಯಕ್ಷ ನಿತ್ಯನಂದ, ಪಿ.ಡಿ.ಓ ವಿರುಪಾಕ್ಷ ಡಾ ಬಿ. ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆಯ ಮೂಲಕ ಜಾಥಾ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಾರಂಭ ಹಂತದಲ್ಲಿ ಭಾರತದ ಸಂವಿಧಾನದ ಬಗ್ಗೆ ಪ್ರತಿಜ್ಞೆಯನ್ನು ಕೆ.ಪಿ.ಎಸ್.ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ರಮೇಶ್ ನೀಡಿದರು. ಸಭೆಯಲ್ಲಿ ಮಾತನಾಡಿ, ‘ಪ್ರತಿ ವರ್ಷವೂ ನಾವು ಎರಡು ರಾಷ್ಟ್ರೀಯ ಹಬ್ಬವನ್ನು ಆಚರಣೆ ಯಾದ ಜನವರಿ ೨೬ರಂದು ಗಣರಾಜ್ಯೋತ್ಸವ, ಆಗಸ್ಟ್ 15 ರಂದು ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮವನ್ನು ಇಡೀ ಭಾರತ ದೇಶ ಸಡಗರದ ಹಬ್ಬವಾಗಿ ಆಚರಣೆ ಮಾಡುತ್ತ ಬಂದಿದ್ದೇವೆ. ಭಾರತಕ್ಕೆ ಸ್ವಾತಂತ್ರ ಸಿಕ್ಕಾಗ ಭಾರತೀಯರ ಸಂತೋಷಕ್ಕೆ ಪಾರವೇ ಇರಲಿಲ್ಲ. ಬ್ರಿಟಿಷರ ಪ್ರಭುತ್ವ ಕೊನೆಗೊಂಡು ಪ್ರಜಾಪ್ರಭುತ್ವದ ಹೊಸ ಮಾದರಿಯ ವ್ಯವಸ್ಥೆಗೆ ದೇಶ ತೆರೆದುಕೊಂಡಿತ್ತು. ಬಾಬಾ ಸಾಹೇಬ್ ಭಾರತದ ಸಂವಿಧಾನ ರಚನೆಯ ಇತಿಹಾಸ ಬರೆದ ಡಾ ಬಿ.ಆರ್. ಅಂಬೇಡ್ಕರ್ ಮತ್ತು ಸಂವಿಧಾನ ಒಂದೇ ನಾಣ್ಯದ ಮುಖಗಳಿದ್ದಂತೆ. ಒಂದನ್ನು ಬಿಟ್ಟು ಇನ್ನೊಂದು ಇರಲು ಸಾಧ್ಯವಿಲ್ಲ’ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕವಿತಾ ರಮೇಶ್, ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ತಾಲೂಕಿನ ಎಲ್ಲಾ ಅಧಿಕಾರಿಗಳು, ಸ್ಥಳೀಯ ಶಿಕ್ಷಕರು, ಮಕ್ಕಳು, ನಾಗರಿಕರು ಭಾಗವಹಿಸಿದ್ದರು.ಗ್ರಾಮ ಪಂಚಾಯಿತಿ ಅಧ್ಯಕ್ಷ ನಿತ್ಯಾನಂದ, ಪಿ.ಡಿ.ಒ. ವಿರುಪಾಕ್ಷ, ಸದಸ್ಯ ನಿಂಗಪ್ಪ ಡಾ ಬಿ. ಆರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.