ಮಂಗಳೂರು: ಪಶ್ಚಿಮ ಏಷ್ಯಾ ಸಂಘರ್ಷದಿಂದ ಉಂಟಾಗಿರುವ ಜಾಗತಿಕ ಆರ್ಥಿಕ ಸಂಕಷ್ಟವನ್ನು ತಗ್ಗಿಸಲು ಮತ್ತು ಎದುರಿಸಲು ಅರ್ಹ ಉದ್ಯಮಿಗಳಿಗೆ ಕೇಂದ್ರ ಸರ್ಕಾರ ತುರ್ತು ಸಾಲ ಯೋಜನೆಯನ್ನು ಘೋಷಿಸಿದೆ ಎಂದು ಬಿಜೆಪಿ ದ.ಕ. ಜಿಲ್ಲಾ ಆರ್ಥಿಕ ಪ್ರಕೋಷ್ಟದ ಸಂಚಾಲಕ ಸಿಎ ಎಸ್.ಎಸ್. ನಾಯಕ್ ತಿಳಿಸಿದರು.
2026ರ ಮಾರ್ಚ್ 31ರ ವೇಳೆಗೆ ಅಸ್ತಿತ್ವದಲ್ಲಿರುವ ಕಾರ್ಯನಿರತ ಬಂಡವಾಳ ಮಿತಿ ಹೊಂದಿರುವ ಎಂಎಸ್‌ಎಂಇ ಹಾಗೂ ಇತರ ಸಂಸ್ಥೆಗಳು ಹಾಗೂ ಸಾಲ ಸೌಲಭ್ಯ ಹೊಂದಿರುವ ವಿಮಾನ ಯಾನ ಸಂಸ್ಥೆಗಳು ಈ ಯೋಜನೆಯ ಪ್ರಯೋಜನ ಪಡೆಯಬಹುದು. ಈ ಮೇಲಿನ ಅವಧಿಗೆ ಬ್ಯಾಂಕ್ ಸಾಲ ಖಾತೆಯನ್ನು ಪ್ರಮಾಣಿತ ಎಂದು ವರ್ಗೀಕರಿಸಿದ್ದಲ್ಲಿ ಈ ಸಾಲ ಯೋಜನೆ ಅನ್ವಯವಾಗಲಿದೆ. ಬಡ್ಡಿ ದರ ಬ್ಯಾಂಕ್‌ಗಳಲ್ಲಿ ಶೇ. 0.75ರಿಂದ ಗರಿಷ್ಟ ಶೇ. 9 ಹಾಗೂ ಎನ್‌ಬಿಎಫ್‌ಸಿಗಳಿಂದ ಗರಿಷ್ಠ ಶೇ.13. ಒಂದು ವರ್ಷದ ಸಾಲ ಮರುಪಾವತಿಗೆ ವಿನಾಯಿತಿ (ಬಡ್ಡಿ ಪಾವತಿಸಬೇಕು)ಯೊಂದಿಗೆ ಸಾಲವನ್ನು ಒದಗಿಸಲಾಗುತ್ತದೆ. ಸಾಲವನ್ನು 2027ರ ಮಾ. 31ರೊಳಗೆ ಮಂಜೂರು ಮಾಡಿ, ಆ ವರ್ಷದ ಜೂ. 30ರೊಳಗೆ ವಿತರಿಸಬೇಕಿದೆ. ಉದ್ದಿಮೆದಾರರು ಈಗಲೇ ತಮ್ಮ ಅರ್ಹತೆಯನ್ನು ‘ಜನ ಸಮರ್ಥ್’ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದರು.
ಮುದ್ರಾಂಕ ಶುಲ್ಕ ವಿನಾಯಿತಿಗೆ ಒತ್ತಾಯ: ಕೇಂದ್ರ ಸರ್ಕಾರದ ಈ ತುರ್ತು ಸಾಲಕ್ಕೂ ರಾಜ್ಯ ಸರ್ಕಾರ ಶೇ. 1ರಷ್ಟು ಮುದ್ರಾಂಕ ಶುಲ್ಕ ವಿಧಿಸುತ್ತದೆ. ದೇಶದ ಆರ್ಥಿಕ ಸಂಕಷ್ಟದ ಸಮಯದಲ್ಲಿ ಈ ಮುದ್ರಾಂಕ ಶುಲ್ಕ ಸಂಪೂರ್ಣ ವಿನಾಯಿತಿ ನೀಡಬೇಕು ಎಂದು ಎಸ್.ಎಸ್. ನಾಯಕ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.ಸಹ ಸಂಚಾಲಕ ಯೋಗೀಶ್ ಪೈ, ಸದಸ್ಯರಾದ ರಾಜೇಶ್ ರಾವ್ ಎಂ., ವಸಂತ ಶೆಟ್ಟಿ, ಡಾ.ಎಸ್.ಎಂ. ಶಿವಪ್ರಕಾಶ್, ರಘುನಾಥ್ ಪೈ ಇದ್ದರು.