ಬ್ರಿಟಿಷರನ್ನೇ ಒದ್ದೊಡಿಸಿದ ಕಾಂಗ್ರೆಸ್‌ಗೆ ಬಿಜೆಪಿ ಯಾವ ಲೆಕ್ಕ?

KannadaprabhaNewsNetwork | Published : Nov 27, 2024 1:01 AM

ಸಾರಾಂಶ

ಕಾಂಗ್ರೆಸ್‌ನವರು ಬ್ರಿಟಿಷರನ್ನು ಒದ್ದೊಡಿಸಿದವರು. ಬಿಜೆಪಿಯವರು ಯಾವ ಲೆಕ್ಕ ನಮಗೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಕಾಂಗ್ರೆಸ್‌ನವರು ಬ್ರಿಟಿಷರನ್ನು ಒದ್ದೊಡಿಸಿದವರು. ಬಿಜೆಪಿಯವರು ಯಾವ ಲೆಕ್ಕ ನಮಗೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಸಿದ್ಧಾಂತವೇ ಗೊತ್ತಿಲ್ಲ. ಸಿದ್ಧಾಂತದ ಬಗ್ಗೆ ಗೌರವವೇ ಇಲ್ಲ. 12 ವರ್ಷ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮೂರೂವರೆ ವರ್ಷ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದರೂ ಒಂದೇ ಒಂದು ಯೋಜನೆ ಬಡವರ ಪರ, ರೈತರ ಪರ ತಂದಿದ್ದಾರಾ ಎಂದು ಪ್ರಶ್ನಿಸಿದರು.

ಸಣ್ಣ ರಾಜ್ಯಗಳಿಗಿಂತ ನಮ್ಮ ರಾಜ್ಯಕ್ಕೆ ಕಡಿಮೆ ಅನುದಾನ ಬರುವ ಬಗ್ಗೆ ಚರ್ಚೆ ಮಾಡದ ಬಿಜೆಪಿಯವರಿಗೆ ರಾಜ್ಯದ ಹಿತಾಸಕ್ತಿ ಬೇಕಿಲ್ಲ. ಇವರಿಗೆ ಹಿಂದು, ಮುಸ್ಲಿಂ ಬೇಕು. ಮಸೀದಿ, ದೇವಾಲಯಗಳು ಬೇಕು. ಈ ರಾಜ್ಯದ ಬಡವರ ಬಗ್ಗೆ ಚರ್ಚೆ ಮಾಡಲು ಬಿಜೆಪಿಯ ಯಾರಿಗೂ ಇಷ್ಟ ಇಲ್ಲ ಎಂದರು.ವಕ್ಫ್ ಬಗ್ಗೆ ಮಾತನಾಡುತ್ತಾರಲ್ಲ, 2019-20ನೇ ಸಾಲಿನಲ್ಲಿ ಇವರು ಎಷ್ಟು ಜನರಿಗೆ ನೋಟಿಸ್ ನೀಡಿದ್ದಾರೆ ಎಂಬುದರ ಬಗ್ಗೆ ನನ್ನ ಹತ್ತಿರ ದಾಖಲೆ ಇದೆ. ವಕ್ಫ್ ನೋಟಿಸ್ ಕೊಟ್ಟವರು ಯಾರು? ರೈತರ ಒಕ್ಕಲೆಬ್ಬಿಸಿದವರು ಯಾರು? ಬಿಜೆಪಿಯವರೇ. ಈಗ ರೈತರ ವಿಚಾರದಲ್ಲಿ ಕೇಸರಿ ಟವೆಲ್ ಹಾಕಿ ಊರೂರು ಅಡ್ಡಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.ಮುಡಾ ಕೇಸ್‌ ರಾಜಕೀಯ ಪ್ರೇರಿತ:

ಸಿಎಂ ಸಿದ್ದರಾಮಯ್ಯ ವಿರುದ್ಧ ಮುಡಾ ಪ್ರಕರಣ ರಾಜಕೀಯ ಪ್ರೇರಿತವಾಗಿದೆ. ಬಹಳ ಸ್ಪಷ್ಟವಾಗಿಯೇ ಎಲ್ಲರೂ ಹೇಳಿದ್ದೇವೆ. ಸಿದ್ದರಾಮಯ್ಯ ಈ ರಾಜ್ಯಕ್ಕೆ ಸಾಕಷ್ಟು ಕೊಡುಗೆ ಕೊಟ್ಟಿದ್ದಾರೆ. ಅದನ್ನು ಸಹಿಸಿಕೊಳ್ಳಲಾಗದೇ ಸಿಬಿಐ ಕೇಸ್ ಹಾಕುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹದ್ದಕ್ಕೆಲ್ಲ ನಾವು ಹೆದರಲ್ಲ. ರಾಜಕೀಯ ಪ್ರೇರಿತ ಕೇಸ್ ಹಾಕಿದ್ದಕ್ಕೆ ರಾಜಕೀಯವಾಗಿ ಈಗಾಗಲೇ ಉತ್ತರ ಕೊಟ್ಟಿದ್ದೇವೆ. ಮೊನ್ನೆ ಮೂರು ಉಪಚುನಾವಣೆ ಗೆಲ್ಲುವ ಮೂಲಕ ರಾಜಕೀಯವಾಗಿ ಉತ್ತರ ನೀಡಿದ್ದೇವೆ. ಬಿಜೆಪಿ- ಜೆಡಿಎಸ್‌ಗೆ ಜನರು ಯಾರ ಪರ ಇದ್ದಾರೆ ಎಂಬ ಸ್ಪಷ್ಟ ಸಂದೇಶ ಹೋಗಿದೆ. ಸಿಎಂ ವಿರುದ್ಧ ಕೇಸ್ ಹಾಕಿದ್ದಕ್ಕೆ ಬಿಜೆಪಿ ವಿರುದ್ಧ ರಾಜ್ಯದ ಜನ ರೊಚ್ಚಿಗೆದ್ದಿದ್ದಾರೆ ಎಂದು ಸ್ಪಷ್ಟವಾಗಿದೆ ಎಂದರು.ನಮ್ಮ ಮೇಲೆ ಎಂತಹ ಕೇಸ್ ಹಾಕಿದರೂ ರಾಜಕೀಯವಾಗಿ ಜನ ನಿರ್ಧಾರ ಮಾಡುತ್ತಾರೆ. ಮೈಸೂರು, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಮೂರು ಭಾಗಗಳಲ್ಲಿ ನಾವು ಗೆದ್ದಿದ್ದೇವೆ. ಜನರೇ ತೀರ್ಪು ಕೊಟ್ಟ ಮೇಲೆ ಇವರ ಪರಿಸ್ಥಿತಿ ಏನಾಗಿದೆ? ಇನ್ನು ಮೇಲಾದರೂ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ, ಜೆಡಿಎಸ್ ಎಚ್ಚರಿಕೆ ಹೆಜ್ಜೆ ಇಡಬೇಕು. ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡಬೇಕು. ಮುಡಾ ಬಗ್ಗೆ ಚರ್ಚೆ ಮಾಡಿ ಹೋರಾಟ ಮಾಡಿದ ರಿಸಲ್ಟ್ ಏನಾಯ್ತು? ಜನರು ತೀರ್ಪು ಕೊಟ್ಟಿದ್ದಾರೆ. ಇವರ ಪರಿಸ್ಥಿತಿ ಏನಾಗಿದೆ? ಇನ್ಮೇಲಾದರೂ ಬಿಜೆಪಿ, ಜೆಡಿಎಸ್ ಸರಿದಾರಿಯಲ್ಲಿ ನಡೆಯುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.ಬಿಜೆಪಿ ಒಡೆದ ಮನೆಯಾಗಿದೆ, ಮನೆಯೊಂದು ಮೂರು ಬಾಗಿಲಾಗಿದೆ. ಯತ್ನಾಳ್, ವಿಜಯೇಂದ್ರ, ಬೊಮ್ಮಾಯಿ ಮೇಲೆ ಇಡಿ ತನಿಖೆ ಆಗಬೇಕು. ಯತ್ನಾಳ್ ಸ್ಪಷ್ಟವಾಗಿ, ಸಿಎಂ ಆಗಲು ಬಿಜೆಪಿಯಲ್ಲಿ ₹2 ಸಾವಿರ ಕೋಟಿ ಕೊಡಬೇಕು ಎಂದು ಹೇಳಿದ್ದರು. ಬೊಮ್ಮಾಯಿ ಸಿಎಂ ಆಗಲು ಎಷ್ಟು ದುಡ್ಡು ಕೊಟ್ಟಿದ್ದಾರೆ? ಎಲ್ಲರಿಗಿಂತ ಜೂನಿಯರ್ ವಿಜಯೇಂದ್ರ ರಾಜ್ಯಾಧ್ಯಕ್ಷರಿದ್ದಾರೆ ಅಂದರೆ ಎಷ್ಟು ದುಡ್ಡು ಕೊಟ್ಟಿದ್ದಾರೆ? ಬಿಜೆಪಿಯಲ್ಲಿ ಪ್ರತಿಯೊಂದು ಹುದ್ದೆಯೂ ಮಾರಾಟಕ್ಕಿದೆ. ಇದನ್ನು ಕಾಂಗ್ರೆಸ್‌ನವರು ಹೇಳಿಲ್ಲ, ಬಿಜೆಪಿಯವರೇ ಹೇಳಿದ್ದಾರೆ. ವಿಜಯೇಂದ್ರ ದುಡ್ಡು ಕೊಟ್ಟು ಅಧ್ಯಕ್ಷರಾಗಿದ್ದಾರೆ ಎಂದು ಯತ್ನಾಳ ಹೇಳಿದ್ದಾರೆ. ಮೊದಲು ಬಿಜೆಪಿಯವರ ವಿರುದ್ಧ ತನಿಖೆಯಾಗಬೇಕು ಎಂದು ಆಗ್ರಹಿಸಿದರು.

Share this article