ರೈತರಿಗೆ ಎಚ್‌ಡಿ ಕುಮಾರಸ್ವಾಮಿ ಕೊಡುಗೆ ಏನು: ಸಿದ್ದರಾಮಯ್ಯ

KannadaprabhaNewsNetwork |  
Published : Dec 07, 2025, 02:30 AM IST

ಸಾರಾಂಶ

ಕೇಂದ್ರ ಸರ್ಕಾರ ಜಿಎಸ್ಟಿ ಕಡಿಮೆ ಮಾಡಿರುವುದರಿಂದ ರಾಜ್ಯಕ್ಕೆ 12 ಸಾವಿರ ಕೋಟಿ ರು. ನಷ್ಟ ಆಗುತ್ತಿದೆ. ಈ ನಷ್ಟದ ಬಗ್ಗೆ ಕುಮಾರಸ್ವಾಮಿ ಎಂದಾದರೂ ಕೇಂದ್ರ ಸಚಿವರಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರಾ?

ಕನ್ನಡಪ್ರಭ ವಾರ್ತೆ ಹಾಸನ

ಅಹಿಂದಗೆ ಸಿದ್ದರಾಮಯ್ಯ ಕೊಡುಗೆ ಏನು ಎಂದು ಪ್ರಶ್ನಿಸಿದ್ದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಟಾಂಗ್‌ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರಿಗೆ ರೈತನ ಮಗನ ಕೊಡುಗೆ ಏನು ಎಂದು ಮರು ಪ್ರಶ್ನೆ ಹಾಕಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರದಿಂದ ಭಾಗ್ಯಗಳ ಕಾರ್ಯಕ್ರಮ ಮಾಡಿರುವುದು ಬಡವರಿಗಾಗಿ. ಹೆಣ್ಣುಮಕ್ಕಳಿಗೆ , ದಲಿತರಿಗೆ, ಹಿಂದುಳಿದ ವರ್ಗದವರಿಗೆ, ಅಲ್ಪಸಂಖ್ಯಾತರಿಗೆ, ಕಾರ್ಮಿಕರಿಗಾಗಿ. ಇದೆಲ್ಲ ಅಹಿಂದ ಅಲ್ವಾ ಎಂದು ಕೇಳಿದರು.

ಕೇಂದ್ರ ಸಚಿವರಾದವರು ಕೇಂದ್ರ ಸಚಿವರ ರೀತಿ ಮಾತನಾಡಬೇಕು. ಅವರು ರೈತನ ಮಗ ಅಲ್ಲವೆ. ಮಂಡ್ಯದ ರೈತರಿಗೆ ಏನು ಕೊಡುಗೆ ಕೊಟ್ಟಿದ್ದಾರೆ. ನಿನ್ನೆ ಫೈನಾನ್ಸ್, ಅಬಕಾರಿ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಲಾಯಿತು, ಕೇಂದ್ರ ಸರ್ಕಾರ ಜಿಎಸ್ಟಿ ಕಡಿಮೆ ಮಾಡಿರುವುದರಿಂದ ರಾಜ್ಯಕ್ಕೆ 12 ಸಾವಿರ ಕೋಟಿ ರು. ನಷ್ಟ ಆಗುತ್ತಿದೆ. ಈ ನಷ್ಟದ ಬಗ್ಗೆ ಕುಮಾರಸ್ವಾಮಿ ಎಂದಾದರೂ ಕೇಂದ್ರ ಸಚಿವರಾಗಿ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರಾ? 2017 ರಲ್ಲಿ ನರೇಂದ್ರ ಮೋದಿ ಜಿಎಸ್​ಟಿ ತಂದರು. ಜಿಎಸ್‌ಟಿ ತೆರಿಗೆ ಕೇಂದ್ರಕ್ಕೆ ಹೋಗುತ್ತದೆ. ಜಿಎಸ್‌ಟಿ ನಂತರದಲ್ಲಿ ಕೇರಳ, ಕರ್ನಾಟಕ, ಮಹಾರಾಷ್ಟ್ರ ಮಾತ್ರ ಉತ್ತಮ ಸ್ಥಿತಿಯಲ್ಲಿದ್ದು, ಉಳಿದೆಲ್ಲಾ ರಾಜ್ಯಗಳಲ್ಲಿ ಅಭಿವೃದ್ಧಿಯೇ ಇಲ್ಲವಾಗಿದೆ ಎಂದರು.

ಟೀಕೆ ಮಾಡುವುದಕ್ಕೋಸ್ಕರ ಮಾತನಾಡಬಾರದು. ನಾವು ಏನು ಮಾಡಿದ್ದೇವೆ ಅಂತ ಹೇಳುತ್ತೇವೆ. ಗ್ಯಾರಂಟಿ ಯೋಜನೆಗಳಿಗೆ 1.08 ಲಕ್ಷ ಕೋಟಿ ಖರ್ಚು ಮಾಡಿದ್ದೇವೆ. ಬೇಕಾದರೆ ಪರಿಶೀಲಿಸಲಿ. ಇದೇ ನರೇಂದ್ರ ಮೋದಿ ಗ್ಯಾರಂಟಿ ಯೋಜನೆ ಅನುಷ್ಠಾನ ಮಾಡಿದರೆ ರಾಜ್ಯ ದಿವಾಳಿ ಆಗುತ್ತದೆ ಎಂದು ಹೇಳಿದ್ದರು. ಆದರೆ, ಈಗ ಜನರೇ ಗ್ಯಾರಂಟಿಗಳನ್ನು ಹೊಗಳುತ್ತಿದ್ದಾರೆ ಎಂದರು.

ಮಂಡ್ಯದ ಅಭಿವೃದ್ಧಿ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಮೇಕೆದಾಟು ಯೋಜನೆ ಬಗ್ಗೆ ಕೇಂದ್ರದಿಂದ ಏಕೆ ಅನುಮತಿ ಕೊಡಿಸಲಿಲ್ಲ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಕಳೆದ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5 ಸಾವಿರ ಕೋಟಿ ಕೊಡುತ್ತೇವೆ ಎಂದು ಘೋಷಣೆ ಮಾಡಿದ್ದರು. ಆದರೆ ಇದುವರೆಗೆ ಹಣ ಬಿಡುಗಡೆ ಮಾಡಿಲ್ಲ. ಇದರ ಬಗ್ಗೆ ಕುಮಾರಸ್ವಾಮಿ ಏಕೆ ಮಾತನಾಡುತ್ತಿಲ್ಲ. ಇದರಿಂದಾಗಿ ಮಂಡ್ಯ ಜಿಲ್ಲೆಗೂ ಅನ್ಯಾಯವಾಗುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಹೈಕಮಾಂಡ್‌ ಬಲಿಷ್ಟವಾಗಿದೆ:

ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಹೈಕಮಾಂಡ್ ತುಂಬಾ ಬಲವಾಗಿದೆ. ಹೈಕಮಾಂಡ್ ಏನು ತೀರ್ಪು ಕೊಡುತ್ತದೆ ಅದಕ್ಕೆ ನಾನು ಡಿ.ಕೆ. ಶಿವಕುಮಾರ್ ಬದ್ಧರಾಗಿದ್ದೇವೆ ಎಂದರು.ಮಹಿಳಾ ಮೀಸಲಾತಿ ಜಾರಿ ವಿಳಂಬ ಕುರಿತು ಸುಪ್ರೀಂ ಕೋರ್ಟ್ ಕಳವಳ ವಿಚಾರವಾಗಿ ಮಾತನಾಡಿ, ನಾವು ಮೊದಲಿನಿಂದ ಮಹಿಳಾ ಮೀಸಲಾತಿ ಆಗಬೇಕು ಎನ್ನುವವರು. ಮಹಿಳಾ ಮೀಸಲಾತಿ ಆಗಬೇಕು, ಮೀಸಲಾತಿ ಕೊಡಬೇಕು ಎಂದರೆ ಕೊಡಬೇಕು ಏಕೆ ಮುಂದಕ್ಕೆ ಹಾಕಬೇಕು ಎಂದು ಪ್ರಶ್ನಿಸಿದರು.

ಬಿಜೆಪಿ ಜೆಡಿಎಸ್ ಅವಿಶ್ವಾಸ ನಿರ್ಣಯ ತರುವ ವಿಚಾರವಾಗಿ ಮಾತನಾಡುತ್ತಾ, ಅವಿಶ್ವಾಸನಾದ್ರೂ ತರಲಿ ಮುಂದೂಡಿಕೆ ಗೊತ್ತುವಳಿಯನ್ನಾದರೂ ತರಲಿ ಯಾವುದೇ ಕ್ರಮಕ್ಕೆ ನಾವು ಎದುರಿಸಲು ತಯಾರಿದ್ದೇವೆ. ನಮ್ಮದು ತೆರೆದ ಪುಸ್ತಕ ಪಾರದರ್ಶಕ ಸರ್ಕಾರ ಎಲ್ಲವನ್ನು ಎದುರಿಸಲು ಸಿದ್ದರಾಗಿದ್ದೇವೆ ಎಂದರು.ಜಿಲ್ಲೆಯಲ್ಲಿ ಕಾಡಾನೆ ಹಾವಳಿ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಈ ಸಮಸ್ಯೆಯನ್ನು ಪ್ರಾಮಾಣಿಕವಾಗಿ ಬಗೆಹರಿಸುವಂತಹ ಪ್ರಯತ್ನ ಮಾಡುತ್ತೇವೆ ಎಂದರು. ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಮುಖಂಡನ ಹತ್ಯೆ ವಿಚಾರವಾಗಿ ಕಾನೂನು ರೀತಿ ಕ್ರಮ ತೆಗೆದುಕೊಳ್ಳಲು ಅಲ್ಲಿನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಸಿಎಂ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ