ಪಾಕ್‌ ವಿರುದ್ಧ ಹೋರಾಟದಲ್ಲಿ ಕೈ ನಿಲುವು ಏನು? : ಶೋಭಾ

KannadaprabhaNewsNetwork |  
Published : May 18, 2025, 01:06 AM ISTUpdated : May 18, 2025, 11:19 AM IST
Shobha Karandlaje

ಸಾರಾಂಶ

ಪಾಕಿಸ್ತಾನದ ವಿರುದ್ಧದ ಹೋರಾಟದಲ್ಲಿ ತನ್ನ ನಿಲುವು ಏನೆಂಬುದನ್ನು ಕಾಂಗ್ರೆಸ್ ಸ್ಪಷ್ಟ ಮಾಡಬೇಕು ಎಂದು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

  ಬೆಂಗಳೂರು : ಪಾಕಿಸ್ತಾನದ ವಿರುದ್ಧದ ಹೋರಾಟದಲ್ಲಿ ತನ್ನ ನಿಲುವು ಏನೆಂಬುದನ್ನು ಕಾಂಗ್ರೆಸ್ ಸ್ಪಷ್ಟ ಮಾಡಬೇಕು ಎಂದು ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.

ಶನಿವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ಕರ್ನಾಟಕ ಸೇರಿ ಇತರೆ ರಾಜ್ಯಗಳಲ್ಲಿ ಕಾಂಗ್ರೆಸ್ ಮುಖಂಡರ ಹೇಳಿಕೆಗಳು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ವಿರುದ್ಧವಾಗಿದೆ. ಹೈಕಮಾಂಡ್‌ ವಿರುದ್ಧ ಯಾವ ಕಾರಣಕ್ಕಾಗಿ ಹೇಳಿಕೆ ನೀಡಲಾಗುತ್ತಿದೆ? ಅಥವಾ ಇದು ಹೈಕಮಾಂಡ್‌ ಸೂಚನೆಯೋ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಸೈನಿಕರ ಶೌರ್ಯದ ಬಗ್ಗೆ ಅನುಮಾನಪಟ್ಟು ಕಾಂಗ್ರೆಸ್ ಏನು ಮಾಡಲು ಹೊರಟಿದೆ? ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕರ ಬಾಯಿ ಮುಚ್ಚಿಸಬೇಕು. ಇಲ್ಲದಿದ್ದರೆ ಅವರನ್ನು ಒಂದು ವರ್ಷ ಪಾಕಿಸ್ತಾನಕ್ಕೆ ಕಳುಹಿಸಬೇಕು. ಹೇಗೆ ಪಾಕಿಸ್ತಾನ ನಡೆಯುತ್ತಿದೆ ಎಂಬುದನ್ನು ಅಧ್ಯಯನ ಮಾಡಿಕೊಂಡು ಬರಲಿ ಎಂದು ತಿಳಿಸಿದರು.

ಸೈನಿಕರ ವಿಚಾರದಲ್ಲಿ ರಾಜಕಾರಣ ಮಾಡಲು ಹೊರಟಿರುವ ಕಾಂಗ್ರೆಸ್ ನಾಯಕರಿಗೆ ಧಿಕ್ಕಾರ ಇದೆ. ಅವರು ಎಲ್ಲೇ ಹೋದರೂ ಕಪ್ಪು ಬಾವುಟ ತೋರಿಸಬೇಕಿದೆ ಎಂದು ಹೇಳಿದರು.

ರಾಜ್ಯದಲ್ಲಿ ಪಾಕ್‌ ಪರ ವಕ್ತಾರರು ಹೆಚ್ಚಳ: ರವಿಕುಮಾರ್‌

ರಾಜ್ಯದಲ್ಲಿ ಪಾಕಿಸ್ತಾನ ಪರವಾಗಿ ವಕ್ತಾರರು ಹೆಚ್ಚಾಗುತ್ತಿದ್ದು, ಕಾಂಗ್ರೆಸ್‌ ಹೈಕಮಾಂಡ್‌ ತನಿಖೆ ನಡೆಸಬೇಕು ಎಂದು ವಿಧಾನಪರಿಷತ್‌ ಪ್ರತಿಪಕ್ಷ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಆಗ್ರಹಿಸಿದ್ದಾರೆ.ಶನಿವಾರ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಮಂಜುನಾಥ್, ಸಚಿವರಾದ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಪಾಕಿಸ್ತಾನದ ಪರ ಮಾತನಾಡುತ್ತಿದ್ದಾರೆ.

 ಸೇನಾ ನೆಲೆ, ಭಯೋತ್ಪಾದಕರ ಕೇಂದ್ರಗಳು ಸೇರಿ ತಮ್ಮ ಮೇಲೆ ದಾಳಿ ನಡೆದಿರುವುದನ್ನು ಪಾಕಿಸ್ತಾನವೇ ಒಪ್ಪಿಕೊಂಡಿದೆ. ಅಲ್ಲದೆ, ಅಜರ್ ಮಸೂದ್ ಸಂಬಂಧಿಕರ ಮತ್ತು ಕುಟುಂಬದವರ ಹತ್ಯೆ ಹಿನ್ನೆಲೆಯಲ್ಲಿ 14 ಕೋಟಿ ರು. ಅನ್ನು ಪಾಕಿಸ್ತಾನ ಸರ್ಕಾರವೇ ಆ ಕುಟುಂಬಕ್ಕೆ ಕೊಟ್ಟಿದೆ ಎಂದು ತಿಳಿಸಿದರು.ಒಂದೆಡೆ ತಾವು ಗೆದ್ದಿರುವುದಾಗಿ ಪಾಕಿಸ್ತಾನ ಹೇಳಿದರೆ, ಇನ್ನೊಂದೆಡೆ ಪ್ರಧಾನಿ ಮೋದಿ ನಾವು ಗೆದ್ದಿರುವುದಾಗಿ ಹೇಳಿದ್ದಾರೆ ಎಂಬುದಾಗಿ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

 ಅವರು ಭಾರತವನ್ನು ನಂಬುತ್ತಾರಾ? ಅಥವಾ ಪಾಕಿಸ್ತಾನವನ್ನು ನಂಬುತ್ತಾರಾ? ಪ್ರಿಯಾಂಕ್ ಖರ್ಗೆ ಮಾತನ್ನು ಗಮನಿಸಿದರೆ ಅವರು ಪಾಕಿಸ್ತಾನವನ್ನು ನಂಬುತ್ತಿರುವುದು ಅರ್ಥವಾಗುತ್ತದೆ. ಚಿತ್ತಾಪುರದ ಸಾವಿರಾರು ಜನ ಪ್ರಿಯಾಂಕ್ ಖರ್ಗೆಗೆ ಮತ ಹಾಕಿದ್ದು, ಅವರು ವ್ಯಥೆ ಪಡುತ್ತಿರಬಹುದು ಎಂದು ಟೀಕಿಸಿದರು.ಕೆಲ ಸಚಿವರು, ಕಾಂಗ್ರೆಸ್ ಪಕ್ಷಕ್ಕೆ ಪಾಕಿಸ್ತಾನ ಭಯೋತ್ಪಾದನೆಗೆ ಬಲಿಯಾದ ಸೈನಿಕರ ಬಗ್ಗೆ ಕಳಕಳಿ ಇಲ್ಲವೇ? ಲಕ್ಷಾಂತರ ಜನ ಪಂಡಿತರು ಜಮ್ಮು-ಕಾಶ್ಮೀರದಿಂದ ಬೇರೆಡೆಗೆ ಸ್ಥಳಾಂತರ ಹೊಂದಿದ್ದಾರೆ. 4 ಲಕ್ಷ ಪಂಡಿತರು ಫುಟ್‍ಪಾತ್ ಮೇಲೆ ಬದುಕಿದ್ದು, ಕೋಲಾರ ಶಾಸಕರಿಗೆ ಗೊತ್ತಿದೆಯೇ? ಈ ರೀತಿಯ ದಾಸ್ಯ, ಮತಬ್ಯಾಂಕ್‌ಗಾಗಿ ಸುಳ್ಳು ಹೇಳುವುದು, ಗುಲಾಮಿತನದ ಮಾತು ಅವರಿಗೆ ಶೋಭೆ ತರುವುದಿಲ್ಲ ಎಂದು ಟೀಕಾಪ್ರಹಾರ ನಡೆಸಿದರು.

ಭಯೋತ್ಪಾದನಾ ಚಟುವಟಿಕೆ ಮಾಹಿತಿ ನೀಡಲು ಭಾರತವು ವಿದೇಶಗಳಿಗೆ ನಿಯೋಗ ಕಳಿಸುತ್ತಿದೆ. ಅದೇ ಮಾದರಿಯಲ್ಲಿ ಪಾಕ್ ಭಯೋತ್ಪಾದನೆ ಕೇಂದ್ರಗಳ ನಾಶದ ಕುರಿತು ತಿಳಿದುಕೊಳ್ಳಲು ಅಲ್ಲಿಗೆ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್, ಮಂಜುನಾಥ್ ಅವರು ಹೋಗಿ ಬರಲಿ ಎಂದು ಇದೇ ವೇಳೆ ಸವಾಲು ಹಾಕಿದರು.

ಯಾವ ಕಾರಣಕ್ಕಾಗಿ ಸಾಧನಾ ಸಮಾವೇಶ?:

ರಾಜ್ಯದಲ್ಲಿ ಏನೇನೂ ಅಭಿವೃದ್ಧಿಯಾಗಿಲ್ಲ. ಏನು ಸಾಧನೆ ಮಾಡಿದ್ದಾರೆಂದು ಸಾಧನಾ ಸಮಾವೇಶ ಮಾಡುತ್ತಾರೆ ? ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದ್ದಕ್ಕೆ ಸಾಧನಾ ಸಮಾವೇಶವೇ? ಪಿಎಫ್‍ಐ, ಕೆಎಫ್‍ಡಿಯ 1600 ಜನರ ಪ್ರಕರಣ ರದ್ದು ಮಾಡಿದ್ದಕ್ಕೆ ಸಮಾವೇಶವೇ? ಹುಬ್ಬಳ್ಳಿ, ಶಿವಮೊಗ್ಗದಲ್ಲಿ ಪೊಲೀಸರಿಗೆ ಅಪಮಾನಕ್ಕಾಗಿ ಸಮಾವೇಶವೇ? ಎಂದು ಕಿಡಿಕಾರಿದರು.

PREV
Read more Articles on

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ