ಹಸಿದವರಿಗೆ ಅನ್ನ ನೀಡುವುದಕ್ಕಿಂತಲೂ ದೊಡ್ಡ ಧರ್ಮ ಈ ಜಗತ್ತಿನಲ್ಲಿ ಯಾವುದಿದೆ?

KannadaprabhaNewsNetwork |  
Published : Jan 12, 2024, 01:47 AM ISTUpdated : Jan 12, 2024, 05:42 PM IST
48 | Kannada Prabha

ಸಾರಾಂಶ

ಬಡವರ ಹಸಿವಿಗೆ ನೀಡುವ ಅನ್ನದ ವಿಷಯದಲ್ಲೂ ರಾಜಕೀಯ ಮಾಡುವಂತಹ ಅಮಾನವೀಯ ಪ್ರವೃತ್ತಿ ತೋರಿದ ಬಿಜೆಪಿಗರು ಧರ್ಮದ ಕುರಿತಂತೆ ಮಾತನಾಡುತ್ತಿದ್ದರೇ, ಅದನ್ನು ಕಂಡು ನಗಬೇಕೋ ಅಳಬೇಕೋ ಎಂದು ನನಗೆ ತಿಳಿಯುತ್ತಿಲ್ಲ.

ಕನ್ನಡಪ್ರಭ ವಾರ್ತೆ ಮೈಸೂರು

ಬಡವರ ಹಸಿವಿಗೆ ಅನ್ನ ನೀಡುವುದಕ್ಕಿಂತಲೂ ದೊಡ್ಡ ಧರ್ಮ ಈ ಜಗತ್ತಿನಲ್ಲಿ ಯಾವುದಿದೆ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಪ್ರಶ್ನಿಸಿದ್ದಾರೆ.

ಹಸಿವು ಮುಕ್ತ ಕರ್ನಾಟಕದ ಉದ್ದೇಶದಿಂದ ಜಾರಿಗೊಳಿಸಿದ್ದ ಅನ್ನಭಾಗ್ಯ ಯೋಜನೆಗೆ ಹೆಚ್ಚಿನ ಹಣ ನೀಡಿ ಕೊಂಡುಕೊಳ್ಳುತ್ತೇವೆ ಎಂದಾಗಲೂ ಕೇಂದ್ರದಿಂದ ಅಕ್ಕಿ ನೀಡದವರು, ಈ ದಿನ ಧರ್ಮದ ಹೆಸರಲ್ಲಿ ಅಕ್ಷತೆಯ ಗಂಟನ್ನು ಮನೆ ಮನೆಗೆ ಕಳಿಸುತ್ತಿರುವುದನ್ನು ನೋಡಿದರೆ ಇವರಿಗೆ ಧರ್ಮದ ನೈಜ ಜವಾಬ್ದಾರಿಯ ಬಗ್ಗೆ ತಿಳುವಳಿಕೆ ಇಲ್ಲ ಎಂಬುದು ಸ್ಪಷ್ಟವಾಗಿ ಕಾಣುತ್ತದೆ ಎಂದು ಅವರು ಕಿಡಿಕಾರಿದ್ದಾರೆ.

ಬಡವರ ಹಸಿವಿಗೆ ನೀಡುವ ಅನ್ನದ ವಿಷಯದಲ್ಲೂ ರಾಜಕೀಯ ಮಾಡುವಂತಹ ಅಮಾನವೀಯ ಪ್ರವೃತ್ತಿ ತೋರಿದ ಬಿಜೆಪಿಗರು ಧರ್ಮದ ಕುರಿತಂತೆ ಮಾತನಾಡುತ್ತಿದ್ದರೆ, ಅದನ್ನು ಕಂಡು ನಗಬೇಕೋ ಅಳಬೇಕೋ ಎಂದು ನನಗೆ ತಿಳಿಯುತ್ತಿಲ್ಲ ಎಂದು ಅವರು ವ್ಯಂಗ್ಯವಾಡಿದ್ದಾರೆ.

ಗೇರಮರಡಿ ಘಟನೆ ಸಮಾನತೆ ಮತ್ತು ಭ್ರಾತೃತ್ವಕ್ಕೆ ವಿರುದ್ಧ:

ತರೀಕೆರೆ ತಾಲೂಕಿನ ಗೇರಮರಡಿ ಪ್ರದೇಶದಲ್ಲಿ ಜರುಗಿರುವ ಅಸ್ಪೃಶ್ಯತಾ ಆಚರಣೆಯ ಘಟನೆಯು ಎಂದಿನಂತೆಯೇ ಸಂವಿಧಾನ ಮತ್ತು ಸ್ವಾತಂತ್ರ್ಯದ ಆಶಯಗಳಾ ಸಮಾನತೆ ಮತ್ತು ಭ್ರಾತೃತತ್ವದ ಅಂಶಗಳಿಗೆ ವಿರುದ್ಧವಾದ ಸಂಗತಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ದೂರಿದ್ದಾರೆ.

ಶೂಗಳನ್ನೇ ಕೊಂಡುಕೊಳ್ಳಲು ಸಾಧ್ಯವಿಲ್ಲದ ಸ್ಥಿತಿ ಎದುರಿಸುತ್ತಿರುವ ಬಡ ವರ್ಗದ ಜನರು ಇರುವ ಸಮುದಾಯಗಳಲ್ಲೇ ಶಾಲಾ ಶೂಗಳನ್ನು ಧರಿಸಿ ನಡೆಯುವುದು ಮೈಲಿಗೆಗೆ ಕಾರಣವಾಗುತ್ತದೆ ಎಂಬ ಸಂಗತಿಯು ತಲೆ ತಗ್ಗಿಸುವಂತದ್ದು.

ಇದೇ ರೀತಿಯಲ್ಲಿ ಮೈಸೂರು ತಾಲೂಕಿನ ಕೆಂಚಲಗೂಡು ಗ್ರಾಮದ ವ್ಯಾಪ್ತಿಯಲ್ಲೂ ದಲಿತರು ದೇವಸ್ಥಾನ ಪ್ರವೇಶ ಮಾಡುತ್ತಾರೆಂದು ಪ್ರತ್ಯೇಕ ದೇವಸ್ಥಾನ ನಿರ್ಮಾಣ ಮಾಡುವ ಮನಸ್ಥಿತಿಯನ್ನು ಕಂಡೂ ನನ್ನ ಮನಸ್ಸು ಘಾಸಿಗೊಂಡಿದೆ ಎಂದು ಅವರು ಹೇಳಿದ್ದಾರೆ.

ಬಾಬಾ ಸಾಹೇಬರು ಹೇಳಿದಂತೆ ನಮ್ಮ ಜನರು ಅದರಲ್ಲೂ ಮುಖ್ಯವಾಗಿ ಯುವಕರು ಮೌಢ್ಯತೆಯಿಂದ ಹೊರಬಂದು, ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಶಿಕ್ಷಣ ಪಡೆದು ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದುವತ್ತ ಗಮನಹರಿಸಬೇಕು.

ಇಲ್ಲದೇ ಹೋದರೆ ಹಲವಾರು ತ್ಯಾಗ ಬಲಿದಾನಗಳಿಂದ ರೂಪುಗೊಂಡ ಸಂವಿಧಾನದ ಆಶಯಗಳು ನಾಶವಾಗುತ್ತವೆ. ಯಾವ ಮನುವಾದಿ ಮಾದರಿಯ ಮಾರ್ಗವನ್ನು ನಮ್ಮ ಕೆಳವರ್ಗದ ಜನರು ಹಿಡಿಯಬಾರದೆಂದು ಬಾಬಾ ಸಾಹೇಬರು ಬಯಸಿದ್ದರೋ ಅದೇ ಮಾರ್ಗವನ್ನೇ ಕೆಲವರು ಹಿಡಿದಿರುವುದು ಅತ್ಯಂತ ಶೋಚನೀಯ ಮತ್ತು ಬೇಸರದ ಸಂಗತಿ ಎಂದು ಅವರು ತಿಳಿಸಿದ್ದಾರೆ.

ಇನ್ನು ಮುಂದೆ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಇಂತಹ ಅಸ್ಪೃಶ್ಯತಾ ಆಚರಣೆ ಘಟನೆಗಳು ತಲೆದೋರದಂತೆ ನಮ್ಮ ಅಧಿಕಾರಿ ವರ್ಗವು ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಸರ್ಕಾರವೂ ಈ ಕುರಿತಂತೆ ಅಗತ್ಯವಾದ ಅರಿವು ಮೂಡಿಸುವ ಕೆಲಸ ಮಾಡಲಿದೆ ಎಂದು ಈ ಮೂಲಕ ಅಧಿಕಾರಿಗಳಿಗೆ ಸೂಚಿಸುತ್ತೇನೆ ಮತ್ತು ಸಮಾನ ಸಮಾಜದತ ನಿರ್ಮಾಣದ ಆಶಯವನ್ನು ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ