ಪದಾರ್ಥಕ್ಕೆ ಕಪ್ಪೆ ಚಿಪ್ಪು ಸಂಗ್ರಹಿಸಲು ಹೋದವರು ಜಲಸಮಾಧಿಯಾದರುರಾಘವೇಂದ್ರ ಹೆಬ್ಬಾರ
ಶಿರಾಲಿಯ ತಟ್ಟಿಹಕ್ಲಿನ ವೆಂಕಟಾಪುರ ಹೊಳೆ ನೀರಿನಲ್ಲಿ ನಡೆದ 11 ಜನರ ಸಾವಿನ ದುರ್ಘಟನೆಯಿಂದ ಮೃತರ ಊರಾದ ಸಾರದಹೊಳೆಯಲ್ಲಿ ನೀರವ ಮೌನ ಆವರಿಸಿದೆ.
ವಿಧಿ ಆಟ ಆಡದೇ ಇದ್ದರೆ ಸಾರದಹೊಳೆಯ ಈ 11 ಜನರೂ ಭಾನುವಾರ ಮಧ್ಯಾಹ್ನ ತಾವು ಸಂಗ್ರಹಿಸಿದ್ದ (ಮಳವಿ) ಕಪ್ಪೆಚಿಪ್ಪಿನ ಪದಾರ್ಥ ತಯಾರಿಸಿ ಮನೆಯಲ್ಲಿ ಆರಾಮವಾಗಿ ಕುಟುಂಬದವರ ಜತೆ ಕುಳಿತು ಊಟ ಮಾಡುತ್ತಿದ್ದರು. ಆದರೆ ಇವರ ಪಾಲಿಗೆ ವಿಧಿಯಾಟವೇ ಬೇರೆಯಾಗಿತ್ತು. ಭಾನುವಾರ ಬೆಳಗಿನ ಜಾವ ಸುರಿದ ಭಾರೀ ಮಳೆ ನಿಂತ ಮೇಲೆ ಕಪ್ಪೆ ಚಿಪ್ಪು ಸಂಗ್ರಹಿಸಲು ಒಟ್ಟಿಗೆ ತೆರಳಿದ್ದ ಸಾರದಹೊಳೆಯ ಹೆಗ್ಗಡತಿಮನೆ, ಹಿರೇಹಿತ್ಲು ಕುಟುಂಬದ 14 ಜನರು ತಟ್ಟಿಹಕ್ಲಿನಲ್ಲಿ ಕೂಡುವ ವೆಂಕಟಾಪುರ ಹೊಳೆಯಲ್ಲಿ ಕಪ್ಪೆ ಚಿಪ್ಪು ಸಂಗ್ರಹಿಸಿದ್ದಾರೆ. ಇನ್ನೇನು ಎಲ್ಲರೂ ದಡಕ್ಕೆ ಬರಬೇಕು ಎನ್ನುವಷ್ಟರಲ್ಲೇ ನೀರಿನ ಉಬ್ಬರ ಜಾಸ್ತಿಯಾಗಿ ಇವರನ್ನು ಆವರಿಸಿದ್ದು, ಮೇಲಕ್ಕೆ ಬರಲು ಸಾಧ್ಯವಾಗಲೇ ಇಲ್ಲ. ಎಲ್ಲರೂ ಒಟ್ಟಿಗೆ ನಿಂತು ಕಪ್ಪೆ ಚಿಪ್ಪು ಸಂಗ್ರಹಿಸುತ್ತಿದ್ದರು. 14 ಜನರಲ್ಲಿ ಮೂವರು ಅದೃಷ್ಟವಶಾತ್ ಬದುಕುಳಿದಿದ್ದಾರೆ. ಬದುಕುಳಿದ ಮಾದೇವಿ ಮಂಜುನಾಥ ನಾಯ್ಕ, ನಾಗರತ್ನಾ ಈಶ್ವರ ನಾಯ್ಕ ಮತ್ತು ಲಲಿತಾ ಜಗದೀಶ ನಾಯ್ಕ ಇವರು ತಮ್ಮ ಕಣ್ಣಾರೆ 11 ಜನರು ನೀರಲ್ಲಿ ಮುಳುಗುವ ದೃಶ್ಯ ನೋಡಿದ್ದಾರೆ. ನಾಗರತ್ನಾ ಈಶ್ವರ ನಾಯ್ಕ ಅವರ ಅಕ್ಕ ಮೃತಪಟ್ಟಿದ್ದು, ಅವರು ನಾಗರತ್ನಾ ಅವರನ್ನು ದಡಕ್ಕೆ ದೂಡಿದ್ದರಿಂದ ಬಚಾವ್ ಆಗಿದ್ದಾರೆ.ಸಾರದಹೊಳೆಯಲ್ಲಿ ನೀರವ ಮೌನ ಆವರಿಸಿದ್ದು, ಮೃತರೆಲ್ಲರೂ ಕೂಲಿ ಮಾಡುವವರು ಮತ್ತು ತೀರಾ ಬಡವರು. ಅವರು ಕೂಲಿಯ ಜತೆಗೆ ಕಪ್ಪೆಚಿಪ್ಪು ಸಂಗ್ರಹಿಸಿ ಮಾರಾಟ ಮಾಡುವ ಕೆಲಸದಲ್ಲೂ ನಿರತರಾಗಿದ್ದರು. ಭಾನುವಾರ ರಜೆ ಆದ್ದರಿಂದ ಮನೆಯಲ್ಲಿ ಕುಟುಂಬದವರು ಎಲ್ಲರೂ ಇರುತ್ತಾರೆ, ಮಧ್ಯಾಹ್ನದೊಳಗೆ ಕಪ್ಪೆಚಿಪ್ಪು ಸಂಗ್ರಹಿಸಿ ತಂದು ಮನೆಯಲ್ಲೇ ಆಹಾರ ಪದಾರ್ಥ ಮಾಡಿ, ಊಟ ಮಾಡುವ ಉದ್ದೇಶದಿಂದ ಎಲ್ಲರೂ ಒಟ್ಟಿಗೆ ಸೇರಿ ತಟ್ಟಿಹಕ್ಲು ಹೊಳೆಗೆ ಹೋಗಿದ್ದಾರೆ.
ವಿಧಿ ಯಾಕಾದರೂ ಇವರ ಬಾಳಿನಲ್ಲಿ ಆಟ ಆಟ ಆಡಬೇಕಿತ್ತು ಎನ್ನುವುದೇ ಪ್ರಶ್ನೆಯಾಗಿದೆ. ಒಂದೇ ದಾಯಾದಿ ಕುಟುಂಬದ 8 ಮಂದಿ ಅಸುನೀಗಿದ್ದಾರೆ. ಇವರೆಲ್ಲರ ಮನೆ ಆಸುಪಾಸು ಇದ್ದು, ಎಲ್ಲರೂ ಅನ್ಯೋನ್ಯವಾಗಿ ಬದುಕು ಸಾಗಿಸುತ್ತಿದ್ದರು. ಭಟ್ಕಳ ಕಂಡಂತಹ ದೊಡ್ಡ ದುರಂತ ಇದಾಗಿದೆ. ಯಾರು ಎಷ್ಟೇ ಧೈರ್ಯ, ಸಾಂತ್ವನ ಹೇಳಿದರೂ ದುರ್ಘಟನೆ ನಡೆದು ಹೋಗಿದೆ. ಇನ್ನಾದರೂ ಜಾಗೃತಿ ವಹಿಸಬೇಕು. ಮೃತರು ತೀರಾ ಬಡಕುಟುಂಬದವರಾಗಿದ್ದರಿಂದ ಮತ್ತು ಕಪ್ಪೆಚಿಪ್ಪು ಸಂಗ್ರಹಿಸಿ ಮಾರಾಟ ಮಾಡುವವರಾಗಿದ್ದರಿಂದ ಸರ್ಕಾರ ಈಗಾಗಲೇ ಪರಿಹಾರ ಘೋಷಿಸಿದ್ದರೂ ಮತ್ತಷ್ಟು ಹೆಚ್ಚಿನ ಪರಿಹಾರ ನೀಡುವ ಜತೆಗೆ ಅಗತ್ಯವಿದ್ದವರಿಗೆ ಹೊಸ ಮನೆ ನಿರ್ಮಾಣ ಮತ್ತು ಮಕ್ಕಳ ವಿದ್ಯಾಭ್ಯಾಸ, ಕಲಿತವರಿಗೆ ಉದ್ಯೋಗದ ಜವಾಬ್ದಾರಿ ವಹಿಸಿಕೊಂಡರೆ ಅನುಕೂಲವಾದೀತು ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.
25ಬಿಕೆಲ್1,2: