ಸಮಾಜವಾದದ ಹೆಸರಲ್ಲಿ ಮಾಡಬಾರದ್ದೆಲ್ಲಾ ಮಾಡಬಾರದು: ಸಿ.ಟಿ. ರವಿ

KannadaprabhaNewsNetwork |  
Published : Jul 13, 2024, 01:33 AM IST
ಸಿ.ಟಿ.ರವಿ  | Kannada Prabha

ಸಾರಾಂಶ

ಚಿಕ್ಕಮಗಳೂರು, ಮೈಸೂರಿನ ಮುಡಾ ಹಗರಣ ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜವಾದದ ಹೆಸರಿನಲ್ಲಿ ಮಾಡಬಾರದ್ದನ್ನೆಲ್ಲ ಮಾಡಬಾರದು. ಇದೀಗ ಸಿಎಂ ಜಾತಿ ಗುರಾಣಿ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಮೈಸೂರಿನ ಮುಡಾ ಹಗರಣ ಅಂಗೈ ಹುಣ್ಣಿನಷ್ಟೇ ಸ್ಪಷ್ಟ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜವಾದದ ಹೆಸರಿನಲ್ಲಿ ಮಾಡಬಾರದ್ದನ್ನೆಲ್ಲ ಮಾಡಬಾರದು. ಇದೀಗ ಸಿಎಂ ಜಾತಿ ಗುರಾಣಿ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳನ್ನು ಸಾವಿರ ಬಾರಿ ಸಮರ್ಥನೆ ಮಾಡಿಕೊಂಡರು ಅದನ್ನು ಸತ್ಯ ಮಾಡಲು ಸಾಧ್ಯವಿಲ್ಲ. ಅಕ್ರಮವನ್ನು ಸಮರ್ಥಿಸಿಕೊಂಡಷ್ಟು ಕಡು ಬೆತ್ತಲೆಗೆ ಒಳಗಾಗುತ್ತೀರಿ. ತಪ್ಪಾಗಿದ್ದರೆ ಅದನ್ನು ಒಪ್ಪಿಕೊಂಡು ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ತನಿಖೆ ಎದುರಿಸಿ ಎಂದು ಹೇಳಿದರು.

ಅತ್ಯಾಚಾರಿ ಹಾಗೂ ಭ್ರಷ್ಟಾಚಾರಿಗೆ ಜಾತಿ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದರು. ಈಗ ಅವರೇ ಜಾತಿಯನ್ನು ಗುರಾಣಿ ಮಾಡಿಕೊಳ್ಳಲು ಹೊರಟಿದ್ದಾರೆ. ಇದು ಸಮಾಜವಾದಕ್ಕೆ ಮಾಡುವ ಮಹಾ ದ್ರೋಹವಾಗಿದೆ. ಇದರಿಂದ ಶಾಂತವೇರಿ ಗೋಪಾಲಗೌಡ, ರಾಮ್ ಮನೋಹರ್ ಲೋಹಿಯಾ ಅವರ ಆತ್ಮಗಳು ನರಳಾಡುವಂತಾಗಿದೆ ಎಂದರು.

ಶಾಂತವೇರಿ ಗೋಪಾಲಗೌಡ ಅವರಿಗೆ ನಿವೇಶನ ನೀಡುತ್ತೇವೆ ಎಂದಿದ್ದಾಗ ಅವರು ಬೇಡ ಎಂದಿದ್ದರಂತೆ. ನಮ್ಮ ಸಮಾಜದ ಕಟ್ಟಕಡೆಯ ಬಡವನಿಗೆ ಎಲ್ಲಿಯವರೆಗೆ ನಿವೇಶನ ಸಿಗುವುದಿಲ್ಲವೋ ಅಲ್ಲಿಯವರೆಗೂ ನನಗೂ ಬೇಡ ಎಂದಿದ್ದರಂತೆ. ಅಂತವರ ಹೆಸರನ್ನು ಹೇಳುವ ಸಿಎಂ ಸಿದ್ದರಾಮಯ್ಯ ತಮ್ಮ ಪತ್ನಿಯ ಹೆಸರಲ್ಲಾಗಿರುವ ಅಕ್ರಮವನ್ನು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ, ಜೊತೆಗೆ ಜಾತಿ ತಳುಕನ್ನು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಹಿಂದ ರಾಜಕಾರಣ ಮಾಡಿ ರಾಜಕಾರಣ ದಕ್ಕಿಸಿಕೊಂಡಿರುವ ಸಿದ್ದರಾಮಯ್ಯ ಅವರ ಕಣ್ಣೆದುರೇ ಅನ್ಯಾಯ, ಮೋಸ ಆಗುತ್ತಿದ್ದರೂ ಅವರನ್ನು ರಕ್ಷಣೆ ಮಾಡುವ ಕೆಲಸವನ್ನು ಸಿಎಂ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ವಾಲ್ಮೀಕಿ ನಿಗಮದ ಹಗರಣ ಹೊರಗೆ ಬಂದ ಎರಡೇ ದಿನದಲ್ಲಿ ನೆಕ್ಕುಂಟಿ ನಾಗರಾಜ್ ಹಾಗೂ ನಾಗೇಂದ್ರ ಅವರ ಸಂಬಂಧ ವನ್ನು ಬಹಿರಂಗಪಡಿಸಿದ್ದೆ. ನಾಗೇಂದ್ರ ಶಾಂಗ್ರಿಲಾ ಹೋಟೆಲ್ ನಲ್ಲಿ ಅಧಿಕಾರಿಗಳ ಸಭೆ ಕರೆದು ಡೈರೆಕ್ಷನ್ ಕೊಟ್ಟಿದ್ದನ್ನು ಹೇಳಿದ್ದೆ. ನೆಕ್ಕುಂಟಿ ನಾಗರಾಜ್ ಈ ಅಕ್ರಮದ ಸೂತ್ರಧಾರ ಎಂದು ಹೇಳಿದ್ದೆ. ಜೊತೆಗೆ ಸಿಎಂ ಹಾಗೂ ಡಿಸಿಎಂಗೂ ನಾಗರಾಜ್ ಪರಮಾತ್ಮ ಎಂಬುದನ್ನು ಫೋಟೋ ಬಿಡುಗಡೆ ಮಾಡಿಯೇ ತೋರಿಸಿದ್ದೆ. ಇದಾದ ಬಳಿಕವೇ ನಾಗರಾಜ್ ನನ್ನು ಎಸ್ಐಟಿ ವಶಕ್ಕೆ ಪಡೆದಿತ್ತು ಎಂದರು.

ಸರ್ಕಾರ ಈ ಪ್ರಕರಣದ ತನಿಖೆ ಪೂರ್ಣ ದಾಖಲೆಗಳನ್ನು ಸಿಬಿಐ ವಶಕ್ಕೆ ಒಪ್ಪಿಸಬೇಕು. ಪ್ರಕರಣದ ಪಾತ್ರಧಾರಿಗಳಲ್ಲಿ ಕೆಲವರು ಸಿಕ್ಕಿಬಿದ್ದಿದ್ದಾರೆ ಆದರೆ ಸೂತ್ರಧಾರಿಗಳು ಮಾತ್ರ ಇನ್ನೂ ಸಿಕ್ಕಿ ಬಿದ್ದಿಲ್ಲ. ಸೂತ್ರಧಾರಿಗಳ ಮೇಲು ಅಷ್ಟೇ ಕಠಿಣ ಕ್ರಮವಾಗಬೇಕು ಎಂದು ಒತ್ತಾಯಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ