ಕೊಟ್ಟೂರು ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆಗೆ ಏರುವುದು ಯಾವಾಗ?

KannadaprabhaNewsNetwork |  
Published : Jun 22, 2025, 11:47 PM IST
ಕೊಟ್ಟೂರಿನಲ್ಲಿನ ಸಮುದಾಯ ಆರೋಗ್ಯ ಕೇಂದ್ರ ಹೆಸರಿನ ಸರ್ಕಾರದ ಸಣ್ಣ ಆಸ್ಪತ್ರೆ  | Kannada Prabha

ಸಾರಾಂಶ

ಕೊಟ್ಟೂರು ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರುವ ಅವಕಾಶವನ್ನು ಯಾವಾಗ ಪಡೆಯುವುದೋ ಎಂದು ತಾಲೂಕಿನ ನಾಗರಿಕರು ಕಾಯುತ್ತಿದ್ದಾರೆ.

ಜಿ. ಸೋಮಶೇಖರ

ಕನ್ನಡಪ್ರಭ ವಾರ್ತೆ ಕೊಟ್ಟೂರು

ಕೊಟ್ಟೂರು ಪಟ್ಟಣದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಮೇಲ್ದರ್ಜೆಗೆ ಏರುವ ಅವಕಾಶವನ್ನು ಯಾವಾಗ ಪಡೆಯುವುದೋ ಎಂದು ತಾಲೂಕಿನ ನಾಗರಿಕರು ಕಾಯುತ್ತಿದ್ದಾರೆ.

ತಾಲೂಕು ಕೇಂದ್ರವಾಗಿ 8 ವರ್ಷ ಕಳೆಯುತ್ತ ಬಂದಿದ್ದರೂ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇರುವುದು ಸಣ್ಣ ಪುಟ್ಟ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ವೈದ್ಯರು, ಸಿಬ್ಬಂದಿ. ಇದುವರೆಗೂ ಪೂರ್ಣ ಪ್ರಮಾಣದ ಸಿಬ್ಬಂದಿ ನೇಮಕಗೊಂಡಿಲ್ಲ. ಇದು ಸರ್ಕಾರದ ನಿರ್ಲಕ್ಷ್ಯ ಧೋರಣೆಗೆ ಸಾಕ್ಷಿ ಎನ್ನುತ್ತಾರೆ ಇಲ್ಲಿಯ ಜನರು.

ಪಟ್ಟಣದ 40 ಸಾವಿರ ಸೇರಿದಂತೆ ತಾಲೂಕಿನ 85 ಸಾವಿರಕ್ಕೂ ಹೆಚ್ಚಿನ ಜನರಿಗೆ ಉತ್ತಮ ಚಿಕಿತ್ಸೆಯ ವ್ಯವಸ್ಥೆಯ ಕಲ್ಪಿಸಬೇಕಿದ್ದ ಸರ್ಕಾರಿ ಆಸ್ಪತ್ರೆ ಸದಾ ಒಂದಿಲ್ಲ ಒಂದು ಕೊರತೆ ಎದುರಿಸುತ್ತಲೇ ಇದೆ.

ಈ ಆಸ್ಪತ್ರೆಯಲ್ಲಿ ಬೆರಳೆಣಿಕೆಯ ಬೆಡ್‌ಗಳು ಮಾತ್ರ ಇದ್ದು, ಜನರು ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗೆ ತೆರಳುವುದು ಅನಿವಾರ್ಯವಾಗಿದೆ.

ಅರವಳಿಕೆ, ಸ್ತ್ರೀ ರೋಗ, ಮಕ್ಕಳ ವೈದ್ಯರ ಹುದ್ದೆಗಳನ್ನು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದರೂ ಇದುವರೆಗೂ ಈ ತಜ್ಞರು ಬಂದಿಲ್ಲ. ಬಿಎಎಂಎಸ್ ಮತ್ತು ಎಂಬಿಬಿಎಸ್ ಆದ ಸ್ಥಳೀಯ ವೈದ್ಯರನ್ನು ತಾತ್ಕಾಲಿಕವಾಗಿ ನೇಮಿಸಿಕೊಂಡು ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಸರ್ಕಾರಿ ಆಸ್ಪತ್ರೆ ದುರವಸ್ಥೆ ಕುರಿತು ದೂರು ನೀಡಿದಾಗಲೆಲ್ಲ ಆಸ್ಪತ್ರೆ ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಲಾಗುತ್ತಿದೆ. ಆದರೆ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ.

ಸಂಸದರು ಇತ್ತೀಚೆಗೆ ಕೊಟ್ಟೂರಿಗೆ ಭೇಟಿ ನೀಡಿದಾಗ ಪಟ್ಟಣಕ್ಕೆ ನೂರು ಹಾಸಿಗೆಗಳ ಆಸ್ಪತ್ರೆ ಮಂಜೂರು ಆಗಿದೆ ಎಂದು ಹೇಳಿದರು. ವಾಸ್ತವದಲ್ಲಿ ಕೊಟ್ಟೂರಿಗೆ ಐವತ್ತು ಹಾಸಿಗೆಗಳ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪುಗೊಂಡಿದೆ. ಅಲ್ಲದೇ ಈ ಕುರಿತು ಆಡಳಿತಾತ್ಮಕ ಸರ್ಕಾರಿ ಆದೇಶ ಹೊರಬಿದ್ದಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೂ ಇದುವರೆಗೂ ಟೆಂಡರ್ ಪ್ರಕಟಣೆ ಹೊರ ಬಿದ್ದಿಲ್ಲ. ಹೀಗಾಗಿ ಕೇವಲ ಸಮುದಾಯ ಆರೋಗ್ಯ ಕೇಂದ್ರ ಎಂಬ ನಾಮಫಲಕ ಬಿಟ್ಟರೆ ಬೇರೆ ಯಾವ ಸೌಲಭ್ಯವು ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಿಗದಂತೆ ಆಗಿದೆ.

ಪರಿಣತ ವೈದ್ಯರು ಸೇವೆ ಸಲ್ಲಿಸಲು ಮುಂದೆ ಬಂದರೆ ಅವರನ್ನು ನೇಮಕ ಮಾಡಿಕೊಳ್ಳುತ್ತೇವೆ, ಇಲ್ಲವೇ ಅಕ್ಕ-ಪಕ್ಕದ ಆಸ್ಪತ್ರೆಗಳ ಸರ್ಕಾರಿ ವೈದ್ಯರನ್ನು ನಿಯೋಜಿಸುತ್ತೇವೆ ಎಂದು ಹೇಳುವ ಜಿಲ್ಲಾ ಆರೋಗ್ಯ ಅಧಿಕಾರಿಗಳು ಇಲ್ಲಿಂದ ಹೋದ ಆನಂತರ ಇಲ್ಲಿನ ಕುಂದು-ಕೊರತೆಗಳನ್ನು ನಿವಾರಿಸಲು ಆದ್ಯತೆ ನೀಡುತ್ತಿಲ್ಲ ಎನ್ನುವುದು ಇಲ್ಲಿನ ಜನರ ಅಳಲಾಗಿದೆ.

ಸರ್ಕಾರ ಮತ್ತು ಜನಪ್ರತಿನಿಧಿಗಳು ಗಮನಹರಿಸಿ ಕೊಟ್ಟೂರು ಸರ್ಕಾರಿ ಆಸ್ಪತ್ರೆಗೆ ಹೊಸ ರೂಪ ಮತ್ತು ಉಪಯುಕ್ತ ಸೇವೆ ಸಲ್ಲಿಸುವ ಯೋಜನೆಯನ್ನು ರೂಪಿಸಬೇಕು ಎಂದು ಜನರು ಒತ್ತಾಯಿಸುತ್ತಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಮತಗಿಯಲ್ಲಿ ನಿವೃತ್ತ ಯೋಧ ಲಕ್ಷ್ಮಣಗೆ ಭವ್ಯ ಸ್ವಾಗತ
ಉತ್ತರದ ಅಭಿವೃದ್ಧಿಗೆ ಪ್ರತ್ಯೇಕ ರಾಜ್ಯ ಅಗತ್ಯ: ಉ.ಕ.ಹೋರಾಟ ಸಮಿತಿ