ಗುಂಡ್ಲುಪೇಟೆಯಲ್ಲಿ ಓವರ್ ಲೋಡ್ ಟಿಪ್ಪರ್‌ಗೆ ಬ್ರೇಕ್ ಬೀಳೋದು ಯಾವಾಗ!

KannadaprabhaNewsNetwork | Published : Nov 30, 2024 12:45 AM

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಬೇಗೂರು ಭಾಗದ ಕ್ರಷರ್‌ಗಳಿಗೆ ಕ್ವಾರಿಯ ಕಲ್ಲು ಹಾಗೂ ಕ್ರಷರ್‌ ಉತ್ಪನ್ನಗಳ ಸಾಗಾಣಿಕೆ ಮಾಡುವ ಟಿಪ್ಪರ್‌ಗಳು ನಿಯಮ ಮೀರಿ ಸಂಚರಿಸುತ್ತಿದ್ದರೂ ಪೊಲೀಸ್‌ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಮೌನ ವಹಿಸಿವೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಬೇಗೂರು ಭಾಗದ ಕ್ರಷರ್‌ಗಳಿಗೆ ಕ್ವಾರಿಯ ಕಲ್ಲು ಹಾಗೂ ಕ್ರಷರ್‌ ಉತ್ಪನ್ನಗಳ ಸಾಗಾಣಿಕೆ ಮಾಡುವ ಟಿಪ್ಪರ್‌ಗಳು ನಿಯಮ ಮೀರಿ ಸಂಚರಿಸುತ್ತಿದ್ದರೂ ಪೊಲೀಸ್‌ ಹಾಗೂ ಪ್ರಾದೇಶಿಕ ಸಾರಿಗೆ ಇಲಾಖೆ ಮೌನ ವಹಿಸಿವೆ. ಓವರ್‌ ಲೋಡ್‌ ಟಿಪ್ಪರ್‌ಗಳ ಸಂಚಾರಕ್ಕೆ ಬ್ರೇಕ್‌ ಬೀಳೋದು ಯಾವಾಗ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.ಗುಂಡ್ಲುಪೇಟೆ, ತೆರಕಣಾಂಬಿ ಹಾಗೂ ಬೇಗೂರು ಸುತ್ತ ಮುತ್ತಲಿನ ಕ್ವಾರಿ ಹಾಗೂ ಕ್ರಷರ್‌ಗಳಿಂದ ಓವರ್ ಲೋಡ್ ಕಲ್ಲು, ಕ್ರಷರ್‌ ಉತ್ಪನ್ನಗಳ ತುಂಬಿಕೊಂಡು ಸಾಗಾಣಿಕೆ ಹೊತ್ತು ಗೊತ್ತಿಲ್ಲದ ಸಮಯದಲ್ಲಿ ಮೈಸೂರು-ಊಟಿ ಹೆದ್ದಾರಿಯಲ್ಲಿ ಸಂಚರಿಸುತ್ತಿವೆ. ಗುಂಡ್ಲುಪೇಟೆ ಬಳಿಯ ಕ್ವಾರಿಗಳಿಂದ ಟಿಪ್ಪರ್‌ಗಳಲ್ಲಿ ಓವರ್ ಲೋಡ್ ಕಲ್ಲು ತುಂಬಿಕೊಂಡು ಕೆಲ ಟಿಪ್ಪರ್‌ಗಳು ಅತೀ ವೇಗದಲ್ಲಿ ಸಂಚರಿಸುತ್ತಿವೆ. ಅಲ್ಲದೆ ಖಾಲಿ ಟಿಪ್ಪರ್‌ಗಳು ನಾ ಮುಂದು ತಾ ಮುಂದೆ ಎಂದು ವೇಗದಲ್ಲಿ ಕ್ವಾರಿಯತ್ತ ತೆರಳುತ್ತಿವೆ. ಈ ಸಮಯದಲ್ಲಿ ಟಿಪ್ಪರ್‌ಗಳ ಹಿಂಬದಿ ಸಂಚರಿಸುವ ಬೈಕ್‌, ಸೈಕಲ್‌ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ.

ತಾಲೂಕಿನ ಕ್ವಾರಿಗಳಲ್ಲಿ ಕಲ್ಲು ಹಾಗೂ ಕ್ರಷರ್‌ನಿಂದ ಸಾಗಿಸುವ ಉಪ ಉತ್ಪನ್ನಗಳನ್ನು ಸಾಗಿಸುವ ಟಿಪ್ಪರ್‌ಗಳು ಸುರಕ್ಷತೆ ಪಾಲಿಸುತ್ತಿಲ್ಲ. ಮೊದಲೇ ಪರ‍್ಮಿಟ್ ಇಲ್ಲದೆ ಅನೇಕ ಟಿಪ್ಪರ್ ಅಕ್ರಮವಾಗಿ ಸಾಗಿಸುತ್ತಿವೆ. ಅಲ್ಲದೇ ಬಹುತೇಕ ಟಿಪ್ಪರ್‌ಗಳಲ್ಲಿ ಓವರ್ ಲೋಡ್ ಕಲ್ಲು ತುಂಬಿಕೊಂಡು ಯಾವುದೇ ಸುರಕ್ಷತೆ ಇಲ್ಲದೆ ಅತೀ ವೇಗದಲ್ಲಿ ಗುಂಡ್ಲುಪೇಟೆ ಪಟ್ಟಣ ಹಾಗೂ ಬೇಗೂರು, ತೆರಕಣಾಂಬಿ ಗ್ರಾಮದಲ್ಲಿ ಚಾಲಕರು ಲಂಗು ಲಗಾಮಿಲ್ಲದೆ ಓಡಿಸುತ್ತಿದ್ದಾರೆ. ಗುಂಡ್ಲುಪೇಟೆ ಪಟ್ಟಣ, ಬೇಗೂರು, ತೆರಕಣಾಂಬಿ ಗ್ರಾಮದಲ್ಲಿ ಶಾಲಾಕಾಲೇಜು, ಮಾಡ್ರಹಳ್ಳಿ, ಅಗತಗೌಡನಹಳ್ಳಿ, ಬೇಗೂರು, ಹೆಡಿಯಾಲ ಕ್ರಾಸ್‌ಗಳಲ್ಲಿ ಶಾಲೆಗಳಿವೆ. ಮಕ್ಕಳು ಶಾಲೆ ತೆರಳುವ ಹಾಗೂ ಬಿಡುವ ಸಮಯದಲ್ಲಾದರೂ ಟಿಪ್ಪರ್‌ಗಳು ಸಂಚರಿಸದಂತೆ ತಾಲೂಕು ಆಡಳಿತ ಕ್ರಮ ತೆಗೆದುಕೊಳ್ಳಲಿ ಎಂದು ಸಾರ್ವಜನಿಕರ ಒಕ್ಕಲೂರಿನ ಆಗ್ರಹವಾಗಿದೆ.

ಹೆದ್ದಾರಿಯಲ್ಲಿ ಬೈಕ್, ಸೈಕಲ್ ಸವಾರರು ಹಾಗೂ ಪಾದಚಾರಿಗಳು ಸಂಚರಿಸುವ ವೇಳೆ ಟಿಪ್ಪರ್‌ಗಳಲ್ಲಿ ಮೇಲೊದಿಕೆ ಇಲ್ಲದೆ ತೆರಳುವ ಟಿಪ್ಪರ್‌ಗಳಿಂದ ಧೂಳು ಜನರ ಕಣ್ಣಿಗೆ ತುಂಬುತ್ತಿದೆ. ಇದನ್ನು ತಪ್ಪಿಸಲಾದರೂ ಟಿಪ್ಪರ್‌ಗಳಲ್ಲಿ ಕಡ್ಡಾಯ ಹೊದಿಕೆ ಹಾಕಿ ಸಂಚರಿಸಿ ಎಂದು ಹೇಳಲು ಇಲ್ಲಿನ ಪೊಲೀಸರಿಂದ ಆಗಿಲ್ಲ!

ಅಕ್ರಮ ಸಾಗಣೆ?:

ಪಟ್ಟಣ ಬಳಿ ಹಾಗೂ ಬೇಗೂರು ಸುತ್ತಮುತ್ತಲಿನ ಕ್ವಾರಿಗಳಿಂದ ಓವರ್ ಕಲ್ಲು ತುಂಬಿದ ಟಿಪ್ಪರ್‌ಗಳಲ್ಲಿ ಪರ‍್ಮಿಟ್ ಇರುವುದೇ ಇಲ್ಲ. ಆದರೂ ೩೦ರಿಂದ ೩೫ ಟನ್‌ ೧೨ ಟನ್‌ ಪರ‍್ಮಿಟ್ ಹಾಕಿಕೊಂಡು ತೆರಳುತ್ತಿವೆ. ಇದರಿಂದ ಸರ್ಕಾರಕ್ಕೆ ರಾಜಧನ ಸೋರಿಕೆಯಾಗುತ್ತಿದೆ. ಟಿಪ್ಪರ್‌ಗಳು ಅಪಘಾತ ನಡೆದಾಗ ಹಾಗೂ ಪತ್ರಿಕೆಗಳಲ್ಲಿ ವರದಿ ಬಂದಾಗ ಸ್ಥಳೀಯ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಟಿಪ್ಪರ್ ತಡೆದು ದಂಡ ಹಾಕುವ ಕೆಲಸ ಚಾಚು ತಪ್ಪದೆ ಮಾಡುತ್ತಾರೆ. ಪ್ರಾದೇಶಿಕ ಸಾರಿಗೆ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಗುಂಡ್ಲುಪೇಟೆಯತ್ತ ಬರುತ್ತಾರೆ ಎಂಬ ಮಾಹಿತಿ ಕ್ವಾರಿ ಮಾಲೀಕರು ಹಾಗೂ ಟಿಪ್ಪರ್ ಮಾಲೀಕರಿಗೆ ಮೊದಲೇ ತಿಳಿದು ಟಿಪ್ಪರ್ ಓಡಾಟ ಕಡಿಮೆ ಮಾಡುತ್ತಿದ್ದಾರೆ ಎಂಬ ಮಾತಿದೆ.

ಪೊಲೀಸರು ಟಿಪ್ಪರ್‌ಗಳು ತಪಾಸಣೆ ಸಮಯದಲ್ಲಿ ಅತೀ ವೇಗ ಎಂದು ದಂಡ ಹಾಕುತ್ತಾರೆ ಅಷ್ಟೆ. ದಾಖಲಾತಿ ನೋಡೋದಿಲ್ಲ. ಓವರ್ ಲೋಡ್ ಕಲ್ಲು ಇರುವ ಟಿಪ್ಪರ್‌ಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಒಪ್ಪಿಸೋದಿಲ್ಲ. ಗುಂಡ್ಲುಪೇಟೆ ಹಾಗೂ ಬೇಗೂರು ಭಾಗದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಓವರ್ ಲೋಡ್ ಕಲ್ಲು ಸಾಗಾಣಿಕೆ ಹಾಗೂ ಪರ‍್ಮಿಟ್ ಇಲ್ಲದೆ ಅಕ್ರಮ ಸಾಗಾಟದ ಬಗ್ಗೆ ತಪಾಸಣೆ ಮಾಡೋದು, ದೂರು ಬಂದ ದಿನಗಳಲ್ಲಿ ಮಾತ್ರ ಅನ್ನೋದು ವಿಶೇಷ.

ಗುಂಡ್ಲುಪೇಟೆ ರಸ್ತೆಯಲ್ಲಿ ಟಿಪ್ಪರ್ ಹಾವಳಿಯಿದ್ದು ಸುರಕ್ಷತಾ ಕ್ರಮ ಇಲ್ಲದೆ ಸಂಚರಿಸುತ್ತಿವೆ. ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳು ಈ ಟಿಪ್ಪರ್‌ಗಳ ಓಡಾಟದಲ್ಲಿ ಚಕಾರ ಎತ್ತುತ್ತಿಲ್ಲ.ವೆಂಕಟೇಶ್, ನಿವಾಸಿ, ಗುಂಡ್ಲುಪೇಟೆ

Share this article