ಪ್ರವೀಣ ಹೆಗಡೆ ಕರ್ಜಗಿ
ಶಿರಸಿ- ಸಿದ್ದಾಪುರ ಹಾಗೂ ಯಲ್ಲಾಪುರ-ಮುಂಡಗೋಡ ವಿಧಾನಸಭಾ ಕ್ಷೇತ್ರದ ಶಾಸಕರು ಈ ಸಮಸ್ಯೆಯನ್ನು ಹತ್ತಿರದಿಂದ ಬಲ್ಲವರು. ಹಲವು ಬಾರಿ ರೈತರೆಲ್ಲರೂ ಸೇರಿ ಸಭೆ ನಡೆಸಿ, ಶಾಸಕರು ಹಾಗೂ ಸಚಿವರ ಬಳಿ ಮನವಿ ಸಲ್ಲಿಸಿ, ವಿಷಯ ಪ್ರಸ್ತಾಪಿಸಿದ್ದಾರೆ. ಅವರು ಇದು ಏಕೆ ಹೀಗಾಗಿದೆ ಎಂಬುದನ್ನು ಪರಿಶೀಲಿಸುತ್ತೇನೆ ಎಂದಿದ್ದಾರೆ. ಆದರೆ ಇದರ ಫಲಶ್ರುತಿ ಇನ್ನೂ ಬಹಿರಂಗವಾಗಿಲ್ಲ. ಹೀಗಾಗಿ ರೈತರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ.
ಅಡಕೆ ತೋಟಗಳ ಕೃಷಿಗೆ ಆಗಿನ ಬ್ರಿಟಿಷ್ ಸರ್ಕಾರವು ಕೆನರಾ ಪ್ರಿವಿಲೇಜ್ ಆ್ಯಕ್ಟ್‌ನಲ್ಲಿ ಸೊಪ್ಪಿನ ಬೆಟ್ಟವನ್ನು ಬಳಕೆಗಾಗಿ ರೈತರಿಗೆ ಬಿಟ್ಟುಕೊಟ್ಟಿದೆ. ಅಡಕೆ ಕೃಷಿಗೆ ಅಗತ್ಯವಾದ ದರಕೆಲೆ, ಹುಲ್ಲು, ಮರಗಳಿಗೆ ಧಕ್ಕೆಯಾಗದ ರೀತಿಯಲ್ಲಿ ಬೆಟ್ಟದಲ್ಲಿರುವ ಹಸಿ ಸೊಪ್ಪು ಸಂಗ್ರಹಿಸುವ ಸಲುವಾಗಿ ಪ್ರತಿ ಎಕರೆ ಅಡಕೆ ತೋಟಕ್ಕೆ ೯ ಎಕರೆಯಂತೆ ಸೊಪ್ಪಿನ ಬೆಟ್ಟ ಭೂಮಿಯನ್ನು ರೈತರಿಗೆ ಬ್ರಿಟಿಷರೇ ನೀಡಿದ್ದರು. ಸೊಪ್ಪಿನ ಬೆಟ್ಟದ ಪಹಣಿ ಪತ್ರಿಕೆಯಲ್ಲಿ ಸಹ ಅಡಕೆ ತೋಟಕ್ಕೆ ಲಾಗೂ ಎಂದು ದಾಖಲಿಸಲಾಗಿದೆ.ಮೊದಲು ಸೊಪ್ಪಿನ ಬೆಟ್ಟ ಪಹಣಿ ಪತ್ರಿಕೆಯ ‘ಅ’ ಕಾಲಂನಲ್ಲಿ ಖರಾಬ್ ಎಂದು ನಮೂದಿಸಲಾಗಿತ್ತು. ಸೊಪ್ಪಿನ ಬೆಟ್ಟಗಳು ಕೃಷಿ ಕಾರ್ಯಕ್ಕೆ ಯೋಗ್ಯವಲ್ಲ ಎಂಬ ಅರ್ಥ ಇದು ಸೂಚಿಸುತ್ತಿತ್ತು. ಆದರೆ ೨೦೧೬ರ ವೇಳೆ ಪಹಣಿ ಪತ್ರಿಕೆಯ ‘ಬ’ ಕಾಲಂನಲ್ಲಿ ಖರಾಬ್ ಎಂದು ನಮೂದಿಸಲಾಗಿದೆ. ‘ಬ’ ಖರಾಬ್ ಭೂಮಿ ಎಂದರೆ ಅದು ಸಾರ್ವಜನಿಕ ಆಸ್ತಿ ಎಂದು ಪರಿಗಣಿಸಲ್ಪಡುತ್ತದೆ. ಅಂದರೆ, ಸಾರ್ವಜನಿಕರಿಗೆ ಓಡಾಡಲು ರಸ್ತೆ, ದನಗಳು ಓಡಾಡುವ ದಾರಿ ಹಾಗೂ ಸಾರ್ವಜನಿಕರಿಗೆ ಸೇರಿದ ಸ್ವತ್ತು ಎಂಬ ಅರ್ಥ ಮೂಡಿಸುತ್ತದೆ. ಇದು ರೈತರನ್ನು ತೊಳಲಾಟಕ್ಕೆ ತಳ್ಳುವಂತೆ ಮಾಡಿದೆ.
ಶಿರಸಿ ಶಾಸಕ ಭೀಮಣ್ಣ ನಾಯ್ಕ ಅವರು ಬೆಂಗಳೂರಿನಲ್ಲಿ ನಡೆದ ಅಧಿವೇಶನದಲ್ಲಿ ‘ಬ’ ಖರಾಬ್ ವಿಷಯವನ್ನು ಸರ್ಕಾರದ ಗಮನ ಸೆಳೆದಿದ್ದಾರಲ್ಲದೇ, ಕಂದಾಯ ಸಚಿವರನ್ನು ಭೇಟಿಯಾಗಿ ವಿಷಯ ಪ್ರಸ್ತಾಪಿಸಿದ್ದಾರೆ. ಕಂದಾಯ ಸಚಿವರು ಕಾರವಾರಕ್ಕೆ ಭೇಟಿ ನೀಡಿದಾಗಲೂ ‘ಬ’ ಖರಾಬ್ ವಿಷಯವನ್ನು ಗಂಭೀರವಾಗಿ ಪರಿಗಣಿಸಲು ಸಚಿವರಿಗೆ ಶಾಸಕ ಭೀಮಣ್ಣ ನಾಯ್ಕ ಮನವರಿಕೆ ಮಾಡಿದ್ದಾರೆ. ವರದಿ ತರಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ಹೇಳಿರುವುದರಿಂದ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಹಿರಿಯ ಸಹಕಾರಿ ಹಾಗೂ ಬೆಟ್ಟ ಬಳಕೆದಾರರ ಹೋರಾಟಗಾರ ಎಸ್.ಕೆ. ಭಾಗ್ವತ್ ತಿಳಿಸಿದರು.
ಬೆಟ್ಟ ‘ಬ’ ಖರಾಬ್ ಕೆಲ ದಾಖಲಾತಿಗಳು ಬ್ರಿಟಿಷರ ಕಾಲದ್ದಾಗಿರುವುದರಿಂದ ಕೆಲ ದಾಖಲೆಗಳನ್ನು ಮಾತ್ರ ಸಂಗ್ರಹಿಸಲಾಗಿದೆ. ಇನ್ನೂ ಹಲವು ದಾಖಲೆಗಳು ಪುಣೆಯಲ್ಲಿವೆ. ಅವುಗಳ ಸಂಗ್ರಹಣೆ ನಡೆಯುತ್ತಿದೆ. ಸದ್ಯದಲ್ಲಿಯೇ ನಿಯೋಗ ತೆರಳಿ, ಸರ್ಕಾರವನ್ನು ಆಗ್ರಹಿಸುವುದರ ಜತೆ ಸಮಸ್ಯೆಯ ಕುರಿತು ಮನವರಿಕೆ ಮಾಡಲಾಗುತ್ತದೆ ಎಂದು ಎಸ್.ಕೆ. ಭಾಗ್ವತ್, ಶಿರ್ಸಿಮಕ್ಕಿ ತಿಳಿಸಿದರು.