ಕನ್ನಡಪ್ರಭ ವಾರ್ತೆ ಚಾಮರಾಜನಗರ
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಡಾ. ಎಚ್.ಸಿ. ಮಹದೇವಪ್ಪರವರ ಅಭಿಮಾನಿಗಳ ಬಳಗದ ವತಿಯಿಂದ ಅವರ ಜನ್ಮ ದಿನದ ಅಂಗವಾಗಿ ನಡೆದ ‘ಸಂವಿಧಾನ ರಕ್ಷಿಸಿ, ಪ್ರಜಾಪ್ರಭುತ್ವ ಉಳಿಸಿ’ ವಿಚಾರ ಸಂಕಿರಣದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂವಿಧಾನ ರಕ್ಷಿಸಿ ಎಂಬ ಕೂಗು ಕಳೆದ ೧೩ ವರ್ಷಗಳಿಂದ ಕೇಳಿ ಬರುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದಾಗಿನಿಂದ ಒಂದಲ್ಲ ಒಂದು ಕಾರಣಕ್ಕೆ ಸಂವಿಧಾನ ಹಾಗೂ ಮೀಸಲಾತಿ ಬಗ್ಗೆ ಚರ್ಚೆಯಾಗುತ್ತಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿಯವರು ೪೦೦ ಸೀಟು ನಮಗೆ ಕೊಡಿ ಸಂವಿಧಾನ ಬದಲಿಸುತ್ತೇವೆ ಎಂದು ಹೇಳಿದ್ದರು. ಆದರೆ, ಅದೃಷ್ಟವಶಾತ್ ನಮ್ಮವರು ಅವರ ಪಿತೂರಿಗೆ ಬಲಿಯಾಗಲಿಲ್ಲ. ಸಂವಿಧಾನದ ಸಲವತ್ತು ಪಡೆದುಕೊಂಡವರು ಹಾಗೂ ಅದರ ಫಲಾನುಭವಿಗಳು ಗಟ್ಟಿ ಧ್ವನಿಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹೆಚ್ಚು ಉಪಯುಕ್ತವಾಗಿದೆ ಎಂದರು.ಈಗ ರಾಜ್ಯದಲ್ಲಿ ನಮ್ಮದೇ ಪಕ್ಷದ ಸರ್ಕಾರ ಇದೆ. ಡಾ. ಎಚ್.ಸಿ. ಮಹದೇವಪ್ಪ, ಡಾ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಮುನಿಯಪ್ಪ ಸೇರಿದಂತೆ ಹಲವರು ಪರಿಶಿಷ್ಟ ಜಾತಿ ಹಾಗೂ ವರ್ಗಗಳ ಪ್ರಬಲ ಸಚಿವರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮ ಪರವಾಗಿದ್ದಾರೆ. ಆದರೂ ಸಹ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡಲು ಸಾಧ್ಯವಾಗಿಲ್ಲ. ಎಸ್.ಎಂ.ಕೃಷ್ಣ ಅವರ ಅವಧಿಯಲ್ಲಿ ನಡೆದ ಭರ್ತಿ ಬಿಟ್ಟರೆ ನಂತರ ಬಂದ ಸರ್ಕಾರಗಳು ಆ ಕೆಲಸ ಮಾಡುತ್ತಿಲ್ಲ. ಸರ್ಕಾರದಿಂದ ರಚನೆಯಾದ ಹಾವನೂರು ವರದಿ, ಮಂಡಲ ಆಯೋಗ ಹಾಗೂ ಕಾಂತರಾಜ್ ಆಯೋಗಗಳು ಸಹ ನಮ್ಮ ಪರವಾಗಿಲ್ಲ. ಹಿಂದುಳಿದ ವರ್ಗಗಳ ಪರವಾಗಿ ವರದಿಗಳನ್ನು ನೀಡಿದವು. ಅಲ್ಲದೇ ಪರಿಶಿಷ್ಟ ಸಮುದಾಯಗಳ ಪರವಾದ ಧ್ವನಿ ಬರಲಿಲ್ಲ. ಹೀಗಾಗಿ ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಯಾಗುತ್ತಿಲ್ಲ. ಇಂಥ ಪರಿಸ್ಥಿತಿಯನ್ನು ನಾವೇ ತಂದು ಕೊಂಡಿದ್ದೇವೆ. ನಮ್ಮ ತಂದೆ ಪೂಜ್ಯ ಬಿ. ರಾಚಯ್ಯ ಅವರಿಗೂ ಸಹ ಸಿಎಂ ಅಗುವ ಅವಕಾಶ ಕೈ ತಪ್ಪಿತ್ತು. ಪ್ರಬಲವಾದ ಸಮುದಾಯಗಳ ವಿರುದ್ಧ ಪೈಪೋಟಿ ಮಾಡುವುದು ಕಷ್ಟವಾಗಿದೆ ಎಂದು ಕೃಷ್ಣಮೂರ್ತಿ ತಿಳಿಸಿದರು.
ನಾವೆಲ್ಲರೂ ಭಾರತೀಯರು ಎಂಬ ಕೂಗು ಇದೆ. ಆದರೆ, ಒಂದಾಗುತ್ತಿಲ್ಲ. ಸಂವಿಧಾನದಡಿ ಮೀಸಲಾತಿ ಪಡೆದುಕೊಳ್ಳುತ್ತೇವೆ. ಸಂವಿಧಾನ ವಿಚಾರ ಬಂದಾಗ ಮಾತನಾಡುತ್ತಿಲ್ಲ. ಸಂವಿಧಾನದಲ್ಲಿ ಯಾರಿಗುಂಟು. ಯಾರಿಗಲ್ಲ ಮೀಸಲಾತಿ. ಸರ್ವರು ಮೀಸಲಾತಿ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಅವರ್‍ಯಾರು ಅಂಬೇಡ್ಕರ್ ಅವರನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನಾನೂ ಸಹ ಬಿಜೆಪಿಯಲ್ಲಿ ಇದ್ದವನು. ನಾನು ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ರಾಜೀನಾಮೆ ಕೊಟ್ಟು ಹೊರ ಬಂದೆ. ಡಾ. ಮಹದೇವಪ್ಪ ಅವರ ಹುಟ್ಟುಹಬ್ಬದಂದು ಜಿಲ್ಲೆಯ ಅನೇಕ ಕಡೆ ವಿಚಾರ ಸಂಕಿರಣ ಆಯೋಜನೆ ಮಾಡಿರುವುದು ಒಳ್ಳೆಯದು, ಆದರೆ, ಜಿಲ್ಲಾ ಕೇಂದ್ರದಲ್ಲಿ ಇಂಥ ಕಾರ್ಯಕ್ರಮ ಆಯೋಜಿಸಿ ಶಕ್ತಿ ಪ್ರದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಹೊಂಗನೂರು ಚಂದ್ರು, ತಾಲೂಕು ಅಧ್ಯಕ್ಷ ನಲ್ಲೂರು ಸೋಮೇಶ್ವರ, ಬ್ಲಾಕ್ ಅಧ್ಯಕ್ಷ ತೋಟೇಶ್, ತಾಪಂ ಮಾಜಿ ಅಧ್ಯಕ್ಷ ಮಹದೇವ್, ಜಿಪಂ ಮಾಜಿ ಉಪಾಧ್ಯಕ್ಷ ಅಯ್ಯನಪುರ ಶಿವಕುಮಾರ್, ಸಾಹಿತಿ ದೊಡ್ಡರಾಯಪೇಟೆ ಸಿದ್ದರಾಜು, ನಗರಸಭಾ ಸದಸ್ಯರಾದ ನೀಲಮ್ಮ, ಕೊಳ್ಳೇಗಾಲ ಸುಶೀಲ, ಜಿಪಂ ಮಾಜಿ ಸದಸ್ಯೆ ಕಾವೇರಿ ಶಿವಕುಮಾರ್, ಜಿಲ್ಲಾ ಕಾರ್ಯದರ್ಶಿ ಪದ್ಮ , ಉಮ್ಮತ್ತೂರು ಭಾಗ್ಯ, ಛಲವಾದಿ ಸಂಘದ ಅಧ್ಯಕ್ಷ ಶಿವನಾಗಣ್ಣ, ಸಂಚಾಲಕರಾದ ವಡಗೆರೆ ಮಹದೇವಯ್ಯ, ಕೆಂಪನಪುರ ನಾಗರಾಜು, ಪಿ. ಸಂಘಸೇನೆ, ಮೊದಲಾದವರು ಇದ್ದರು.