ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಯಾವ ಹಿಂದೂವಿಗೆ ಲಾಭವಾಗಿದೆ?

KannadaprabhaNewsNetwork | Published : Jan 7, 2024 1:30 AM

ಸಾರಾಂಶ

ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಂತೋಷ ಲಾಡ್ ಅವರು, ರಾಮಮಂದಿರ ಹೋರಾಟಗಾರ ಶ್ರೀಕಾಂತ್ ಪೂಜಾರಿ ಮೇಲೆ ಕೇಸ್ ಹಾಕಿದರೇ ನಮಗೇನು ಲಾಭ ಎಂದು ಪ್ರಶ್ನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ರಾಷ್ಟ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು 10 ವರ್ಷವಾಗಿದೆ. ಈ 10 ವರ್ಷದಲ್ಲಿ ಬಿಜೆಪಿಯವರಿಗೆ ಬಿಟ್ಟು ಹಿಂದೂಗಳಿಗೆ ಏನಾದರೂ ಲಾಭ ಆಗಿದೆಯಾ? ಶ್ರೀಕಾಂತ್‌ ಪೂಜಾರಿ ಮೇಲೆ ಕೇಸ್‌ ಹಾಕಿದರೆ ನಮಗೇನು ಲಾಭ? ಎಂದು ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಮಮಂದಿರ ಹೋರಾಟಗಾರ ಶ್ರೀಕಾಂತ್ ಪೂಜಾರಿ ಮೇಲೆ ಕೇಸ್ ಹಾಕಿದರೆ ನಮಗೇನು ಲಾಭ? ಈಗಾಗಲೇ ಆತನ ಮೇಲೆ ಹಲವಾರು ಪ್ರಕರಣಗಳಿವೆ. ಲಾಂಗ್‌ ಪೆಂಡಿಂಗ್‌ ಕೇಸ್‌ನಲ್ಲಿ ಅವನನ್ನು ಬಂಧಿಸಿದ್ದಾರೆ ಅಷ್ಟೇ. ಈತನೊಬ್ಬನನ್ನೇ ಬಂಧಿಸಿದ್ದಾರಾ? ಬೇರೆ ಬೇರೆ ಪ್ರಕರಣಗಳಲ್ಲೂ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿಲ್ವಾ? ಅವರು ಹಿಂದೂಗಳಲ್ವಾ? ಎಲ್‌ಪಿಆರ್‌ ಕೇಸ್‌ಗಳಲ್ಲಿ ಮುಸ್ಲಿಂರೂ ಇದ್ದಾರೆ ಎಂದರು.

ಬಿಜೆಪಿಯವರಿಗೆ ಇಂತಹದ್ದೇ ಬೇಕು. ಎಲೆಕ್ಷನ್‌ ಬಂದಾಗ ಹಿಂದೂಗಳು ಹಿಂದೂಗಳು ಎಂದು ಹೇಳುತ್ತಾರೆ. 10 ವರ್ಷ ಆಯಿತಲ್ಲಾ ಈ ಸರ್ಕಾರ ಬಂದು, ಹಿಂದೂಗಳಿಗೆ ಏನಾದರೂ ಲಾಭ ಆಗಿದೆಯಾ? ಹಿಂದೂಗಳಿಗೆ ಏನಾದರೂ ವಿಶೇಷ ಸ್ಕೀಂ ಅನೌನ್ಸ್‌ ಮಾಡಿದ್ದಾರಾ? ಮೋದಿ ಪ್ರಧಾನಿ ಆಗಿರುವುದರಿಂದ ಲಾಭ ಆಗಿರುವುದು ಬರೀ ಬಿಜೆಪಿಗರಿಗೆ ಮಾತ್ರ. ಯಾವ ಹಿಂದೂವಿಗೂ ಲಾಭವಾಗಿಲ್ಲ. ನಮ್ಮನ್ನು ಹಿಂದೂ ವಿರೋಧಿ ಎಂದು ಹೇಳುತ್ತಾರೆ ಎಂದು ತಿರುಗೇಟು ನೀಡಿದರು.

ಪಬ್ಲಿಸಿಟಿ ಸ್ಟಂಟ್‌ ನಡೆತಾ ಇದೆ ಅಷ್ಟೇ. ಪ್ರಧಾನಿ ನರೇಂದ್ರ ಮೋದಿ ವಿಶ್ವ ಗುರು ಅಂತಾರೆ, ಅವರಿಗೆ ಇಷ್ಟು ಪ್ರಚಾರ ಬೇಕಾ? ನೀರಲ್ಲಿ ಹೋದ್ರು ಕ್ಯಾಮರಾ ಬೇಕಾ? ಅವರು ಒಂದು ತಿಂಗಳು ಟಿವಿ ಬಂದ್ ಮಾಡಿ ಮತ ಕೇಳಲಿ, ಅವರನ್ನು ದೇವರು ಅಂತಾ ತೋರಿಸಿದರೆ ನಾವು ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯೆ ನೀಡಿದರು.

ರಾಮಮಂದಿರಕ್ಕೆ ಕೊಟ್ಟ ಇಟ್ಟಿಗೆ ಎಲ್ಲಿ ಹೋಯಿತು. ರಾಮಮಂದಿರ ಪಕ್ಕದ ಜಮೀನಿನ ವಿಚಾರದಲ್ಲಿ ಭ್ರಷ್ಟಾಚಾರ ಆಗಿದೆ. ಜಮೀನು ಬೆಲೆ ಹೆಚ್ಚಳ ಮಾಡಿ ಭ್ರಷ್ಟಾಚಾರ ಮಾಡಿದ್ದಾರೆ. ಈ ಮೂಲಕ ಅಲ್ಲಿರುವ ಪದಾಧಿಕಾರಿಗಳು ಕೋಟ್ಯಾಂತರ ರೂಪಾಯಿ ಲಾಭ ಪಡೆದುಕೊಂಡಿದ್ದಾರೆ. ಒಂದು ಅಂದಾಜಿನ ಪ್ರಕಾರ 17 ಲಕ್ಷಕ್ಕೆ ಭೂಮಿ ತಗೆದುಕೊಂಡು ಮೂರು ಕೋಟಿಗೆ ಮಾರಾಟ ಮಾಡಿದ್ದಾರೆ. ಇದರ ಬಗ್ಗೆ ಯಾರು ಹೋರಾಟ ಮಾಡಬೇಕು ಎಂದು ಪ್ರಶ್ನೆ ಮಾಡಿದರು.

ರಾಮನೂ ನಮ್ಮ ದೇವರು, ದಂಡಿನ ದುರ್ಗಮ್ಮನೂ ನಮ್ಮ ದೇವರು, ಮಾರಮ್ಮನೂ ನಮ್ಮ ದೇವರು, ಸೀತಾ ಮಾತೆಯೂ ನಮ್ಮ ದೇವರು. ಇವರಿಗಷ್ಟೇನಾ ಅವರು ದೇವರು? ಎಂದು ಖಾರವಾಗಿ ಪ್ರಶ್ನಿಸಿದರು.

Share this article