ಬಿಸಿಲಲ್ಲಿ ಬೆಂದವನಾರೆ.. ಬೆವರಲ್ಲಿ ಮಿಂದವನಾರೆ

KannadaprabhaNewsNetwork |  
Published : Sep 11, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಮಿಡ್ಲ್  | Kannada Prabha

ಸಾರಾಂಶ

ನೀರಾವರಿ ಹೋರಾಟ ಸಮಿತಿ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾದ ಭದ್ರೆ ಪೂಜಾ ಕಾರ್ಯಕ್ರಮದ ನಂತರ ನಡೆದ ಸಭೆಯಲ್ಲಿ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಪಿ.ಕೋದಂಡರಾಮಯ್ಯ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿತ್ರದುರ್ಗ ಕಾಲುವೆ ಮೂಲಕ ಮೊದಲ ಬಾರಿ ಭದ್ರೆ ಹರಿದು ಬಂದ ಹಿನ್ನಲೆ ನೀರಾವರಿ ಹೋರಾಟ ಸಮಿತಿ ಗೋನೂರು ಕೆರೆ ಬಳಿ ಗುರುವಾರ ಹಮ್ಮಿಕೊಂಡಿದ್ದ ಪೂಜಾ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಪಿ.ಕೋದಂಡರಾಮ್ಯಯ ಸೇರಿದಂತೆ ಹಲವರಿಗೆ ಬಿಸಿಲಿನ ಚುರುಕು ಮುಟ್ಟಿಸಿತು.

85 ವರ್ಷದ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಮಾಜಿ ಸಂಸದ ಪಿ.ಕೋದಂಡರಾಮಯ್ಯ ವಾತಾವರಣ ತಾಪಕ್ಕೆ ತುಸು ಬಸವಳಿದಂತೆ ಕಂಡರೂ ಸಾವರಿಸಿಕೊಂಡು ತಮ್ಮೊಳಗಿನ ಹಳೆಯ ನೆನಪುಗಳ ಹರವಿದರು. ಭವಿಷ್ಯದ ಹೋರಾಟದ ಆಶಯಗಳ ಹರಿಯಬಿಟ್ಟರು. ನನ್ನೊಳಗೆ ಇನ್ನು ಹುಮ್ಮಸ್ಸು ಇದೆ ಎಂಬುದನ್ನು ಪ್ರಕಟಿಸಿದರು.

ಕೆರೆ ಸಮೀಪದಲ್ಲಿಯೇ ಸಮಿತಿ ಕಾರ್ಯಕ್ರಮ ಆಯೋಜಿಸಿದ್ದರಿಂದ ನೆರಳು ನೀರಿನ ವ್ಯವಸ್ಥೆ ಕಡೆ ಗಂಭೀರ ಗಮನ ಹರಿಸಿದಂತೆ ಕಾಣಿಸಲಿಲ್ಲ. ಹನ್ನೊಂದು ಗಂಟೆಯಾಗಿದ್ದರಿಂದ ಸೂರ್ಯ ತನ್ನ ಪ್ರಖರತೆ ಪ್ರತಾಪ ತೋರಿಸಲು ಆರಂಭಿಸಿದ್ದ. ಹಾಗಾಗಿ ಬಿಸಿಲಲ್ಲಿಯೇ ಸಮಿತಿ ಪದಾಧಿಕಾರಿಗಳು, ರೈತ ಮುಖಂಡರು, ಕಾರ್ಯಕರ್ತರು, ಮಠಾಧೀಶರು ಆಸೀನರಾಗಬೇಕಾಯಿತು.

ಈ ವೇಳೆ ಮಾತನಾಡಿದ ಪಿ.ಕೋದಂಡರಾಮಯ್ಯ, ಭದ್ರಾ ಮೇಲ್ದಂಡೆ ಯೋಜನೆ ಜಾರಿ ಸಾಧ್ಯವೇ ಇಲ್ಲವೆಂಬ ಕಾಲಘಟ್ಟದಲ್ಲಿ ಹೋರಾಟ ಸಮಿತಿ ರಚಿಸಿಕೊಂಡು, ಸರ್ಕಾರಕ್ಕೆ ನೀರಿನ ಲಭ್ಯತೆ ಕುರಿತು ಮಾಹಿತಿ ನೀಡಿ ಅಸಾಧ್ಯವಾದುದನ್ನು ಸಾಧಿಸಿದ ಈ ಕ್ಷಣ ನಿಜಕ್ಕೂ ರೋಮಾಂಚನವೆಂದು ವ್ಯಾಖ್ಯಾನಿಸಿದರು.

ಯೋಜನೆ ಜಾರಿಗೊಂಡು ನೀರು ಹರಿಯುತ್ತಿದ್ದರೂ ಇನ್ನಷ್ಟು ಕೆಲಸಗಳು ಆಗಬೇಕಿದೆ. ಜಿಲ್ಲೆಯ ಎಲ್ಲ ತಾಲೂಕುಗಳು ಯೋಜನೆ ವ್ಯಾಪ್ತಿಗೆ ಸೇರಬೇಕಿದೆ. ಈ ನಿಟ್ಟಿನಲ್ಲಿ ಹೋರಾಟ ಮುಂದುವರಿಸಬೇಕಿದೆ ಎಂದರು.

ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಯೋಜನೆ ವಿಷಯದಲ್ಲಿ ಬದ್ಧತೆ ಪ್ರದರ್ಶಿಸಬೇಕು. ಸಕಾಲಕ್ಕೆ ಅನುದಾನ ನೀಡಿ ಕಾಮಗಾರಿ ಪೂರ್ಣಗೊಳಿಸಿ, ಬಯಲುಸೀಮೆ ಪ್ರದೇಶವನ್ನು ಸಂಪೂರ್ಣ ಹಸಿರನ್ನಾಗಿಸಲು ಮುಂದಾಗಬೇಕು. ಕೇಂದ್ರ ಸರ್ಕಾರ ತನ್ನ ಮಾತನ್ನು ಉಳಿಸಿಕೊಳ್ಳಬೇಕೆಂದು ಕೋದಂಡರಾಮಯ್ಯ ಆಗ್ರಹಿಸಿದರು.

ಸಮಿತಿ ಹಿರಿಯ ಮುಖಂಡ ಬೇಡರರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಹೋರಾಟದ ಆರಂಭದಲ್ಲಿ ಜನಬೆಂಬಲ ದೊರೆಯಲಿಲ್ಲ. ಆದರೂ ಸುಧೀರ್ಘ ಚಳವಳಿ ಪರಿಣಾಮ ಯೋಜನೆ ಜಾರಿಗೊಂಡಿದೆ. ಮೊಳಕಾಲ್ಮೂರು ಸೇರಿ ಇನ್ನಷ್ಟು ತಾಲೂಕುಗಳ ಕೆರೆಗೆ ನೀರು ಹರಿಯಬೇಕಿದೆ ಎಂದರು.

ಛಲವಾದಿ ಮಠದ ಶ್ರೀ ಬಸವನಾಗಿದೇವ ಸ್ವಾಮೀಜಿ, ವಿಪ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ರೈತ ಸಂಘದ ಹಿರಿಯ ಮುಖಂಡ ಈಚಗಟ್ಟದ ಸಿದ್ದವೀರಪ್ಪ, ಮರ‍್ಲಹಳ್ಳಿ ರವಿಕುಮಾರ್, ಲಕ್ಷ್ಮಿಕಾಂತ್, ಮಲ್ಲಿಕಾರ್ಜುನ್,

ಕೆ.ಟಿ.ತಿಪ್ಪೇಸ್ವಾಮಿ, ಎಂ.ಡಿ.ರವಿ, ಜೆ.ಯಾದವರೆಡ್ಡಿ, ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ, ಹೋರಾಟ ಸಮಿತಿ ಚಳವಳಿ ಹಾದಿ ಹಾಗೂ ಹೋರಾಟಗಾರರನ್ನು ಸದಾ ಸ್ಮರಿಸುವ ಗುಣ ನಾವೆಲ್ಲರೂ ಬೆಳೆಸಿಕೊಳ್ಳಬೇಕು. ಮುಖ್ಯವಾಗಿ ಸಮಗ್ರ ನೀರಾವರಿ ಜಾರಿಗೆ ಹೋರಾಟ ಕೈಗೆತ್ತಿಕೊಳ್ಳಬೇಕೆಂದು ತಿಳಿಸಿದರು.

ಸಮಿತಿ ಸಂಚಾಲಕರಾದ ಚಳ್ಳಕೆರೆ ಬಸವರಾಜ್, ನರೇನಹಳ್ಳಿ ಅರುಣ್‌ಕುಮಾರ್, ಜೋಗಿಮಟ್ಟಿ ಮಹೇಶಬಾಬು, ಮುಖಂಡರಾದ ಪ್ರಸನ್ನ ಎಂ.ಜಯಣ್ಣ, ಬಾಗೇನಾಳ್ ಕೊಟ್ರಬಸಪ್ಪ, ವೆಂಕಟೇಶ್, ದಗ್ಗೆ ಶಿವಪ್ರಕಾಶ್, ಸಿ.ಶಿವುಯಾದವ್, ಕೂನಿಕೆರೆ ರಾಮಣ್ಣ, ಡಿ.ಸಿ.ನಾಗರಾಜ್, ಮುದ್ದಾಪುರ ನಾಗರಾಜ್, ಹಂಪಯ್ಯನಮಾಳಿಗೆ ಬಸವರಾಜ್, ಎಚ್.ಲಕ್ಷ್ಮಣ್, ವೀರೇಂದ್ರ ಕೋಗುಂಡೆ ಮಠ, ಪಾಂಡುರಂಗಪ್ಪ, ಗೌನಹಳ್ಳಿ ಗೋವಿಂದಪ್ಪ, ಟಿ.ಎಂ.ಪ್ರದೀಪ್‌ಕುಮಾರ್, ಮಲ್ಲಿಕಾರ್ಜುನ್, ರೆಡ್ಡಿಹಳ್ಳಿ ವೀರಣ್ಣ, ಟಿ.ಮಂಜಣ್ಣ, ದಯಾನಂದ್, ರೇವಣ್ಣಸಿದ್ದಪ್ಪ, ಮುಂಗಸವಳ್ಳಿ ಪ್ರಕಾಶ್, ಸಂಪತ್‌ಕುಮಾರ್, ಗುರುಮೂರ್ತಿ, ರಾಜಣ್ಣ, ಕೆಪಿಎಂ ಗಣೇಶಯ್ಯ, ಮಲ್ಲೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಲಚ್ಚಪ್ಪ ಜಮಾದಾರ ನಿಂದನೆ ಖಂಡಿಸಿ ಪ್ರತಿಭಟನೆ
ಭವಿಷ್ಯದ ಸವಾಲುಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಿ: ಸಂಸದ ರಾಧಾಕೃಷ್ಣ ದೊಡ್ಡಮನಿ