ಚಿತ್ರದುರ್ಗ: ತಾವು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದಾಗ ನಿಮ್ ಜೊತೆ ಯಾರು ಬಂದು ನಿಂತ್ರ ಸ್ವಲ್ಪ ಹೇಳ್ತೀರಾ. ನನ್ ಮಗ ಯಾರಿಗೆ ವಿಷ ಇಟ್ಟಿದ್ದ ಅಂತ ಲೋಕಸಭೆ ಟಿಕೆಟ್ ತಪ್ಪಿಸಿ ನಂಬಿಕೆ ದ್ರೋಹ ಮಾಡಿದಿರಿ ಮೊದಲು ಸ್ಪಷ್ಟಪಡಿಸಿ ಎಂದು ಶಾಸಕ ಚಂದ್ರಪ್ಪ ನೇರವಾಗಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮೇಲೆ ವಾಗ್ದಾಳಿ ನಡೆಸಿದರು.
2019ರ ಲೋಕಸಭಾ ಚುನಾವಣೆಯಲ್ಲಿಯೇ ನನ್ನ ಮಗ ಎಂ.ಸಿ.ರಘುಚಂದನ್‍ಗೆ ಚಿತ್ರದುರ್ಗ ಕ್ಷೇತ್ರದಿಂದ ಟಿಕೆಟ್ ಕೇಳಿದ್ದೆ. ಆಗ ಮನೆಗೆ ಬಂದು ಮುಂದಿನ ಸಾರಿ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದರಿಂದ ಸುಮ್ಮನಾದೆವು. ಈ ಬಾರಿ ಕೊನೆ ಹಂತದವರೆಗೂ ನನ್ನ ಮಗನ ಹೆಸರಿತ್ತು. ಅಂತಿಮ ಗಳಿಗೆಯಲ್ಲಿ ಗೋವಿಂದ ಕಾರಜೋಳರನ್ನು ಅಭ್ಯರ್ಥಿಯನ್ನಾಗಿ ವರಿಷ್ಠರು ಘೋಷಿಸಿದ್ದಾರೆ. ನನ್ನ ಮಗನಿಗೆ ನೂರಕ್ಕೆ ನೂರು ಟಿಕೆಟ್ ಸಿಗುತ್ತದೆಂದು ನಂಬಿದ್ದೆ. ಆದರೆ ನಾನು ಯಾರನ್ನು ನಂಬಿದ್ದೆನೋ ಅವರೆ ನನ್ನ ಕತ್ತು ಕೊಯ್ದರು. ಹಾಗಾಗಿ ಸ್ವಾಭಿಮಾನಿ ಕಾರ್ಯಕರ್ತರ ಸಭೆ ಕರೆಯುವಂತ ಅನಿವಾರ್ಯ ಪರಿಸ್ಥಿತಿ ಒದಗಿ ಬಂದಿದೆ. ಇಂತಹ ಸಭೆಯಲ್ಲಿ ಮಾತನಾಡಲು ತುಂಬಾ ನೋವಾಗುತ್ತಿದೆ ಎಂದರು.
30 ವರ್ಷಗಳಿಂದಲೂ ರಾಜಕೀಯ ಮಾಡಿಕೊಂಡು ಬರುತ್ತಿದ್ದೇನೆ. 2008ರಿಂದ ಬಿಜೆಪಿ ಯಲ್ಲಿ ಮೂರು ಬಾರಿ ಶಾಸಕನಾಗಿ ಸಾರ್ವಜನಿಕರ ನಡುವೆ ಕೆಲಸ ಮಾಡುತ್ತಿದ್ದೇನೆ. ಬಾಣದ ಗುರ್ತಿಗೆ ಐದು ಜಿಲ್ಲೆಯಿಂದ ನಾನೊಬ್ಬನೆ ಶಾಸಕನಾಗಿದ್ದೆ. ಯಡಿಯೂರಪ್ಪನವರು ಬಿಜೆಪಿಯಿಂದ ಹೊರ ಬಂದು ಕೆಜೆಪಿ ಕಟ್ಟಿದಾಗ ಇನ್ನು ಏಳು ತಿಂಗಳು ಅವಧಿಯಿದ್ದಾಗಲೇ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಅವರ ಬೆನ್ನಿಗೆ ನಿಂತಿದ್ದೆ. ಆ ಕೃತಜ್ಞತೆಯೂ ಅವರಿಗಿಲ್ಲದಂತಾಯಿತು. ಮುಖ್ಯಮಂತ್ರಿಯಾಗಬೇಕಾದರೆ ಭೋವಿ ಸಮಾಜದ ಗೂಳಿಹಟ್ಟಿ ಡಿ.ಶೇಖರ್, ಶಿವರಾಜ್ ತಂಗಡಗಿ, ವೆಂಕಟರಮಣಪ್ಪ ಇವರುಗಳು ನನ್ನ ಮಾತಿಗೆ ಬೆಲೆ ಕೊಟ್ಟು ಬೆಂಬಲಿಸಿದರು. ಭೋವಿ ಸಮಾಜ ಕೊಟ್ಟ ಮಾತಿಗೆ ತಪ್ಪುವವರಲ್ಲ. ಬಿ.ವೈ.ಯಡಿಯೂರಪ್ಪನವರಿಂದ ಇಂತಹ ದ್ರೋಹವಾಗುತ್ತದೆ ಎಂದು ನಂಬಿರಲಿಲ್ಲವೆದರು.ಸರ್ವೆ ರಿಪೋರ್ಟ್, ಕಾರ್ಯಕರ್ತರ ಅಭಿಪ್ರಾಯಕ್ಕಾದರೂ ಪಕ್ಷದ ನಾಯಕರುಗಳು ಗೌರವ ಕೊಟ್ಟು ನನ್ನ ಮಗನಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ನೀಡಬಹುದಿತ್ತು. ಅದನ್ನು ಬಿಟ್ಟು ಐದು ನೂರು ಕಿಮೀ ದೂರದ ಗೋವಿಂದ ಕಾರಜೋಳರನ್ನು ಕರೆಸಿಕೊಳ್ಳುವ ಅಗತ್ಯವಾದರೂ ಏನಿತ್ತು. 2019 ಎಲ್ಲಿ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು ಕೇಂದ್ರದ ಮಂತ್ರಿಯಾದ ಎ.ನಾರಾಯಣಸ್ವಾಮಿ ಜಿಲ್ಲೆಯಲ್ಲಿ ಎಲ್ಲಿಯಾದರೂ ಸುತ್ತಾಡಿದ್ದಾರಾ. ಯಾರಾದರು ಅವರ ಮುಖ ನೋಡಿದ್ದೀರ ಎಂದು ಕಾರ್ಯಕರ್ತರನ್ನು ಪ್ರಶ್ನಿಸಿದರು.
ಟಿಕೆಟ್‍ನಿಂದ ವಂಚಿತ ಯುವ ಮುಖಂಡ ಎಂ.ಸಿ.ರಘುಚಂದನ್ ಮಾತನಾಡಿ ಎಂಟತ್ತು ವರ್ಷಗಳಿಂದಲೂ ಬಿಜೆಪಿಯಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಿಕೊಂಡು ಬರುತ್ತಿದ್ದೇನೆ. 2019 ರಲ್ಲಿಯೇ ಚಿತ್ರದುರ್ಗ ಪಾರ್ಲಿಮೆಂಟ್ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಟಿಕೆಟ್ ಕೇಳಿದ್ದೆ. ಆಗ ಯಡಿಯೂರಪ್ಪನವರು ಮನೆಗೆ ಬಂದು ಈ ಬಾರಿ ಸುಮ್ಮನಿರು, ಮುಂದಿನ ಸಲ ಖಂಡಿತ ನಿನಗೆ ಟಿಕೆಟ್ ಕೊಡಿಸುತ್ತೇನೆಂದು ವಾಗ್ದಾನ ಮಾಡಿದ್ದರಿಂದ ಸುಮ್ಮನಾಗಿದ್ದೆ. ಈ ಬಾರಿ ನನ್ನ ಹೆಸರು ಚರ್ಚೆಯಲ್ಲಿತ್ತು ಕೊನೆ ಗಳಿಗೆಯಲ್ಲಿ ಯಾರದೋ ಒತ್ತಡಕ್ಕೆ ಮಣಿದು ಗೋವಿಂದ ಕಾರಜೋಳರಿಗೆ ಟಿಕೆಟ್ ನೀಡಲಾಗಿದೆ ಎಂದು ದೂರಿದರು.
ಮಡಿವಾಳ ಸಮಾಜದ ಜಿಲ್ಲಾಧ್ಯಕ್ಷ ಬಿ.ರಾಮಜ್ಜ ಮಾತನಾಡಿ, ಟಿಕೆಟ್ ಕೊಡುತ್ತೇವೆಂದು ಮಾತು ಕೊಟ್ಟು ಕೊನೆಗಳಿಗೆಯಲ್ಲಿ ಎಂ.ಸಿ.ರಘುಚಂದನ್‍ಗೆ ಮೋಸ ಮಾಡಿರುವುದು ಪರಮ ಅನ್ಯಾಯ. ಎಲ್ಲಿಯವರೋ ಬಂದು ಇಲ್ಲಿಂದ ಸ್ಪರ್ಧಿಸಿ ಗೆದ್ದರೆ ಕ್ಷೇತ್ರದ ಜನರ ಕಷ್ಟ-ಸುಖ ಕೇಳುತ್ತಾರಾ. ಸ್ಥಳೀಯರಿಗೆ ಟಿಕೆಟ್ ಕೊಡಿ ಎನ್ನುವುದು ಎಲ್ಲರ ಒಕ್ಕೊರಲ ಅಭಿಪ್ರಾಯ. ಟಿಕೆಟ್ ಸಿಗಲಿಲ್ಲವೆಂದು ಬೇಸರ ಪಟ್ಟುಕೊಳ್ಳುವುದು ಬೇಡ. ಪಕ್ಷೇತರರಾಗಿ ಸ್ಪರ್ಧಿಸಿ ಗೆಲ್ಲಿಸಿಕೊಂಡು ಬರುವುದು ನಮ್ಮ ಜವಾಬ್ದಾರಿ ಎಂದು ಸಭೆಯಲ್ಲಿ ಸಲಹೆ ನೀಡಿದರು.
ತಿಪ್ಪಾರೆಡ್ಡಿ ನೆತ್ತಿ ಮೇಲೆ ಕೆಂಡದ ಮಳೆ: ತಮ್ಮ ಪುತ್ರನಿಗೆ ಟಿಕೆಟ್ ತಪ್ಪಲು ಕೇವಲ ಯಡಿಯೂರಪ್ಪ ಅವರನ್ನು ಮಾತ್ರ ಮೂದಲಿಸದ ಶಾಸಕ ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಅವರ ಮೇಲೂ ಮಾತಿನ ಕೆಂಡದ ಮಳೆ ಸುರಿಸಿದರು. ಹಿಂದೊಮ್ಮೆ ಕಾಂಗ್ರೆಸ್ ನಿಂದ ಸೋತಾಗ ಬಿಜೆಪಿಗೆ ಕರೆತಂದು ವಿಧಾ್ನಪರಿಷತ್ ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದೆವು. ನನ್ನ ಮಗನಿಗೆ ದ್ರೋಹ ಮಾಡಿದರೆ ಮುಂದೊಂದು ದಿನ ತಮಗೂ ಆದೀತೆಂಬ ಎಚ್ಚರವಿಲಿ ಎಂದು ಪರೋಕ್ಷವಾಗಿ ತಿಪ್ಪಾರೆಡ್ಡಿ ಅವರನ್ನು ಚುಚ್ಚಿದರು. ರಘುಚಂದನ್ ಕೂಡಾ ಭಾಷಣದಲ್ಲಿ ತಿಪ್ಪಾರೆಡ್ಡಿ ಯ ಮೂದಲಿಸುವುದ ಮರೆಯಲಿಲ್ಲ.