ಕನ್ನಡಪ್ರಭ ವಾರ್ತೆ ಬೆಳಗಾವಿ
ಡಿಸಿಸಿ ಬ್ಯಾಂಕಿನ ಆಡಳಿತದ ಮೇಲೆ ಜಾರಕಿಹೊಳಿ ಬಣವೋ ಇಲ್ಲವೇ ಕತ್ತಿ-ಸವದಿ ಬಣವೋ ಹಿಡಿತ ಸಾಧಿಸುತ್ತದೆಯೋ ಎಂಬ ಕುತೂಹಲ ಕೆರಳಿಸಿದೆ. ನಗರದ ಬಿ.ಕೆ.ಮಾಡೆಲ್ ಹೈಸ್ಕೂಲ್‌ನಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ. ಮಾಜಿ ಸಂಸದರಾದ ರಮೇಶ ಕತ್ತಿ, ಅಣ್ಣಸಾಹೇಬ ಜೊಲ್ಲೆ, ಶಾಸಕ ಲಕ್ಷ್ಮಣ ಸವದಿ ಸೇರಿ ಕಣದಲ್ಲಿರುವ 14 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.
ಚುನಾವಣೆ ನಡೆಯಲಿರುವ 7 ಕ್ಷೇತ್ರಗಳಲ್ಲಿ ಒಟ್ಟು 698 ಪಿಕೆಪಿಎಸ್‌ಗಳಿವೆ. ಇದರಲ್ಲಿ ಕೆಲವು ಪಿಕೆಪಿಎಸ್‌ಗಳು ಮತದಾನದ ಹಕ್ಕು ಕಳೆದುಕೊಂಡಿವೆ. ಹಾಗಾಗೀ, ಠರಾವು ಪಾಸ್ ಮಾಡಿಕೊಂಡು ಮತದಾನದ ಹಕ್ಕು ಪಡೆದ ಒಟ್ಟು 676 ಮತದಾರರು ಮಾತ್ರ ಮತದಾನ ಮಾಡಲಿದ್ದಾರೆ. ಮತದಾನ ಪಟ್ಟಿಯಲ್ಲಿ ಹೆಸರು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಭೀಮಸೇನ ಬಾಗಿ ಎಂಬುವರು ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಹುಕ್ಕೇರಿ ಕ್ಷೇತ್ರದ ಚುನಾವಣೆಯನ್ನು ಚುನಾವಣಾಧಿಕಾರಿ ಶುಕ್ರವಾರ ಆದೇಶ ಹೊರಡಿಸಿ ಮುಂದೂಡಿದ್ದರು. ಇದರಿಂದಾಗಿ ಚುನಾವಣೆಗೆ ಸ್ಪರ್ಧಿಸಿದ್ದ ರಮೇಶ ಕತ್ತಿ ಸೇರಿ ಅವರ ಬೆಂಬಲಿಗರಲ್ಲಿ ತೀವ್ರ ಆತಂಕ ಎದುರಾಗಿತ್ತು. ಶನಿವಾರ ಬೆಂಗಳೂರು ಹೈಕೋರ್ಟ್ ಚುನಾವಣೆಗೆ ಹಸಿರು ನಿಶಾನೆ ತೋರಿಸಿದ್ದರಿಂದ ರಮೇಶ ಕತ್ತಿ ನಿರಾಳರಾಗಿದ್ದಾರೆ. ಈ ಮೂಲಕ ಡಿಸಿಸಿ ಬ್ಯಾಂಕ್ ಚುನಾವಣೆ ಒಂದು ಹಂತಕ್ಕೆ ಬಂದು ನಿಂತಿದೆ.ಒಟ್ಟು 16 ನಿರ್ದೇಶಕರ ಸ್ಥಾನಗಳ ಬಲ ಹೊಂದಿರುವ ಡಿಸಿಸಿ ಬ್ಯಾಂಕ್‌ಗೆ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 7 ಜನರು ಜಾರಕಿಹೊಳಿ ಬಣದೊಂದಿಗೆ ಗುರುತಿಸಿಕೊಂಡಿದ್ದರೆ, ಶಾಸಕರಾದ ಗಣೇಶ ಹುಕ್ಕೇರಿ ಮತ್ತು ರಾಜು ಕಾಗೆ ಅವರು ತಟಸ್ಥವಾಗಿ ಉಳಿದುಕೊಂಡಿದ್ದಾರೆ. ಈಗ 7 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಇದರಲ್ಲಿ ಯಾರಿಗೆ ಹೆಚ್ಚು ಸ್ಥಾನಗಳು ಸಿಗಲಿವೆ ಎಂಬುವುದರ ಮೇಲೆ ಅಧಿಕಾರ ಹಸ್ತಾಂತರವಾಗಲಿದೆ.