ಬಿಜೆಪಿ ಮೇಲಿನ ಸಿಟ್ಟನ್ನು ಆರೆಸ್ಸೆಸ್‌ ಮೇಲೇಕೆ ತೋರಿಸ್ತೀರಿ ? : ಅಶೋಕ್‌

KannadaprabhaNewsNetwork |  
Published : Oct 20, 2025, 01:02 AM ISTUpdated : Oct 20, 2025, 08:11 AM IST
R Ashok RSS dress

ಸಾರಾಂಶ

ರಾಜ್ಯ ಕಾಂಗ್ರೆಸ್‌ ಸರ್ಕಾರವು ಪಾಕಿಸ್ತಾನಕ್ಕೆ ಜೈಕಾರ ಕೂಗುವವರನ್ನು ಬೆಂಬಲಿಸುತ್ತದೆ. ಭಾರತ ಮಾತಾ ಕೀ ಜೈ ಎನ್ನುವವರನ್ನು ವಿರೋಧಿಸುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

 ಬೆಂಗಳೂರು :  ರಾಜ್ಯ ಕಾಂಗ್ರೆಸ್‌ ಸರ್ಕಾರವು ಪಾಕಿಸ್ತಾನಕ್ಕೆ ಜೈಕಾರ ಕೂಗುವವರನ್ನು ಬೆಂಬಲಿಸುತ್ತದೆ. ಭಾರತ ಮಾತಾ ಕೀ ಜೈ ಎನ್ನುವವರನ್ನು ವಿರೋಧಿಸುತ್ತದೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಿಜೆಪಿ ಮೇಲೆ ಸಿಟ್ಟಿದ್ದರೆ ಬಿಜೆಪಿ ಮೇಲೆಯೇ ತೀರಿಸಿಕೊಳ್ಳಬೇಕು. ರಾಷ್ಟ್ರಭಕ್ತಿಯಿಂದ ಕೆಲಸ ಮಾಡುತ್ತಿರುವ ಆರ್‌ಎಸ್‌ಎಸ್‌ ವಿರುದ್ಧ ಕ್ರಮ ಕೈಗೊಳ್ಳುವ ಅಗತ್ಯವಿಲ್ಲ. ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜೈಕಾರ ಹಾಕಿದ್ದು ಸಾಬೀತಾಗಿದೆ. ಆದರೆ ಜೈಕಾರ ಹೇಳಿಯೇ ಇಲ್ಲ ಎಂದು ಸಚಿವರು ಹೇಳಿದ್ದರು. ಕುಕ್ಕರ್‌ ಬಾಂಬ್‌ ಬ್ಲಾಸ್ಟ್‌ ಮಾಡುವವರನ್ನು ಬ್ರದರ್‌ ಎಂದಿದ್ದರು. ಎಲ್ಲವೂ ಸಾಬೀತಾದರೂ ಅವರನ್ನೇ ಕಾಂಗ್ರೆಸ್‌ ನಾಯಕರು ಬೆಂಬಲಿಸುತ್ತಾರೆ ಎಂದರು.

ರಸ್ತೆ ಬಂದ್‌ ಮಾಡಿ ನಮಾಜ್‌:

ನಗರದ ಮಾರುಕಟ್ಟೆಯಲ್ಲಿ ಪ್ರತಿ ಶುಕ್ರವಾರ ರಸ್ತೆ ಬಂದ್‌ ಮಾಡಿ ನಮಾಜ್‌ ಮಾಡುತ್ತಾರೆ. ಬಿಜೆಪಿ ಸರ್ಕಾರ ಇದ್ದಾಗ ಇದನ್ನು ನಿಷೇಧಿಸಿರಲಿಲ್ಲ. ಆದರೆ, ಆರ್‌ಎಸ್‌ಎಸ್‌ ಪಥ ಸಂಚಲನಕ್ಕೆ ಅನುಮತಿ ನೀಡಲ್ಲ. ಇಲ್ಲಿ ಆರ್‌ಎಸ್‌ಎಸ್‌ ಅನುಮತಿ ಪಡೆದೇ ಪಥ ಸಂಚಲನ ಮಾಡುತ್ತಿದೆ. ಬಿಜೆಪಿ ನಾಯಕರ ಮಕ್ಕಳು ಆರ್‌ಎಸ್‌ಎಸ್‌ಗೆ ಖಂಡಿತಾ ಹೋಗುತ್ತಾರೆ. ಹಾಗಾದರೆ, ಕಾಂಗ್ರೆಸ್‌ ನಾಯಕರ ಮಕ್ಕಳು ಯಾವುದಾದರೂ ಹೋರಾಟಕ್ಕೆ ಹೋಗಿದ್ದಾರಾ? ಯಾವ ದಲಿತ ಸಂಘಟನೆಯ ಹೋರಾಟಗಳಲ್ಲಿ ನಾಯಕರ ಮಕ್ಕಳು ಭಾಗಿಯಾಗಿದ್ದಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ಗೆ ತಿರುಗುಬಾಣ:

ಆರ್‌ಎಸ್‌ಎಸ್‌ ವಿರುದ್ಧ ಕೈಗೊಳ್ಳುವ ಕ್ರಮಗಳು ಮುಂದೆ ಕಾಂಗ್ರೆಸ್‌ಗೆ ತಿರುಗುಬಾಣವಾಗಲಿವೆ. ಪಥ ಸಂಚಲನದ ಅನುಮತಿಗೆ ಸಂಬಂಧಿಸಿದಂತೆ ಕೋರ್ಟ್‌ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಯಾವುದೇ ಸಂಘಟನೆಗಳ ಕಾರ್ಯಕ್ರಮಕ್ಕೆ ನಾವು ಎಂದೂ ಕಡಿವಾಣ ಹಾಕಿಲ್ಲ. ಅದೇ ರೀತಿ ಕಾಂಗ್ರೆಸ್‌ ಕೂಡ ನಡೆದುಕೊಳ್ಳಬೇಕು. ಆರ್‌ಎಸ್‌ಎಸ್‌ನ ಕಾರ್ಯಗಳೇನು ಎಂಬುದನ್ನು ಇವರು ಮೊದಲು ತಿಳಿದುಕೊಳ್ಳಬೇಕು ಎಂದರು.

ಶ್ವೇತಪತ್ರಕ್ಕೆ ಆಗ್ರಹ:

ಪ್ರತಿ ವರ್ಷ ಬಿಜೆಪಿ ಸರ್ಕಾರ ಬಿಬಿಎಂಪಿಗೆ 7-8 ಸಾವಿರ ರು ಕೋಟಿ ರು. ನೀಡಿದೆ. ಇದೇ ಅನುದಾನದಲ್ಲಿ ಈಗಲೂ ರಸ್ತೆ ದುರಸ್ತಿ ಮಾಡಲಾಗುತ್ತಿದೆ. ಈಗಿನ ಸರ್ಕಾರದಲ್ಲಿ ಒಂದೇ ಒಂದು ಯೋಜನೆ ನಡೆದಿಲ್ಲ. ಸರ್ಕಾರ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ. ಗ್ರಂಥಪಾಲಕರು, ನೀರುಗಂಟಿಗಳಿಗೆ ಸಂಬಳ ಇಲ್ಲದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಹಿಂದಿನ ಹಾಗೂ ಈಗಿನ ಸರ್ಕಾರ ಎಷ್ಟು ಸಾಲ ಮಾಡಿದೆ? ಈಗ ಹಣ ಎಷ್ಟಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ವೇತಪತ್ರ ಹೊರಡಿಸಲಿ ಎಂದು ಆಗ್ರಹಿಸಿದರು.

ಸುಧಾಮೂರ್ತಿ ಅವರನ್ನು ಬೃಹಸ್ಪತಿಗಳಾ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಳುತ್ತಾರೆ. ಇಷ್ಟ ಇದ್ದರೆ ಮಾತ್ರ ಮಾಹಿತಿ ನೀಡಿ ಎಂದು ಹೈಕೋರ್ಟ್‌ ಹೇಳಿದೆ. ಆದರೂ ಅವರನ್ನು ಟೀಕಿಸುವುದು ನ್ಯಾಯಾಂಗ ನಿಂದನೆಯಾಗಿದೆ. ಇನ್ಫೋಸಿಸ್‌ನಿಂದಲೇ ಹೆಚ್ಚು ಆದಾಯ ಬರುತ್ತಿದೆ. ಅವರೂ ಆಂಧ್ರಕ್ಕೆ ಹೋದರೆ ಸರ್ಕಾರದ ಗತಿ ಏನು? ಸಿಎಂ ಸಿದ್ಧರಾಮಯ್ಯ ಯಾವ ರೀತಿಯ ಬೃಹಸ್ಪತಿ ಎಂದು ಆರ್‌.ಅಶೋಕ್‌ ಪ್ರಶ್ನಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಡಿಕೆಶಿ ಸಿಎಂ ಆದರೆ ನನಗೆ ಸಚಿವ ಸ್ಥಾನವೇ ಬೇಡ : ರಾಜಣ್ಣ
ದರ್ಶನ್‌ ಜೈಲಿಂದ ಹೊರಬರಲು ನಿತ್ಯ ಪ್ರಾರ್ಥಿನೆ: ನಟ ಜೈದ್‌