ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಸಚಿವ ಸಂಪುಟ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ
ಸೋಮರಡ್ಡಿ ಅಳವಂಡಿ ಕೊಪ್ಪಳ
ಡಿ.ಕೆ. ಶಿವಕುಮಾರ ನೇತೃತ್ವದ ಸರ್ಕಾರದಲ್ಲಿ ಕೊಪ್ಪಳ ಜಿಲ್ಲೆಗೆ ಡಬಲ್ ಧಮಾಕಾ ಸಿಕ್ಕರೂ ಮೂರು ಭಾರಿ ಗೆದ್ದಿರುವ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳಗೆ ಸಚಿವ ಸ್ಥಾನ ತಪ್ಪಿದ್ದು ಹೇಗೆ ಎನ್ನುವುದು ಈಗ ಕಾಂಗ್ರೆಸ್ ಪಾಳೆಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಶಾಸಕ ರಾಘವೇಂದ್ರ ಹಿಟ್ನಾಳಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಬೆಂಬಲಿಗರು ಆಕ್ರೋಶಗೊಂಡಿದ್ದು, ಸಾಲು ಸಾಲು ಪದಾಧಿಕಾರಿಗಳು ರಾಜೀನಾಮೆ ನೀಡಲು ಆರಂಭಿಸಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಸಚಿವ ಸಂಪುಟ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ತಮ್ಮ ಕಟ್ಟಾಳುಗಳಿಗೆ ಸಚಿವ ಸ್ಥಾನ ಕೊಡಿಸಿದ್ದಾರೆ. ಆದರೆ ಕೊನೆ ಗಳಿಗೆಯ ಏರುಪೇರಿನಿಂದ ಮುನಿಸಿಕೊಂಡಿದ್ದಾರೆ.
ಯಲಬುರ್ಗಾ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ಪಟ್ಟು ಹಿಡಿದು ಸಚಿವ ಸ್ಥಾನ ಕೊಡಿಸುವಲ್ಲಿ ಯಶಸ್ವಿಯಾದರು. ಆದರೆ ಶಾಸಕ ರಾಘವೇಂದ್ರ ಹಿಟ್ನಾಳ ಅವರ ವಿಷಯದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಅಡ್ಡಿಯಾಗಿದ್ದಾರೆ ಎನ್ನಲಾಗಿದೆ. ಕುರುಬ ಸಮುದಾಯಕ್ಕೆ ಮೂರು ಸಚಿವ ಸ್ಥಾನ ನೀಡಲು ಹೈಕಮಾಂಡ್ ಒಪ್ಪಿಗೆ ನೀಡಿದೆ. ಅದರಲ್ಲಿ ಇಬ್ಬರು ಈಗಾಗಲೇ ಸಚಿವರಾಗಿದ್ದಾರೆ. ಉಳಿದ ಒಂದು ಸ್ಥಾನವನ್ನು ಹಾವೇರಿ ಶಾಸಕ ಬಸವರಾಜ ಶಿವಣ್ಣವರ ಅವರಿಗೆ ನೀಡುವಂತೆ ಹೇಳಿದ್ದರು. ಆದರೆ, ಕುರುಬ ಸಮುದಾಯದ ಗಾಯತ್ರಿ ಶಾಂತೇಗೌಡಗೆ ನೀಡಿದ್ದರಿಂದ ಸಿದ್ದರಾಮಯ್ಯ ಆಕ್ರೋಶಗೊಂಡ ಹಿನ್ನೆಲೆ ಅವರ ಹೆಸರನ್ನು ಕೊನೆಗಳಿಗೆಯಲ್ಲಿ ಕೈಬಿಡಲಾಯಿತು.
ಈಗ ಉಳಿದಿರುವ ಒಂದು ಸ್ಥಾನವನ್ನು ಸಿದ್ದರಾಮಯ್ಯ ಹೇಳಿದಂತೆ ಬಸವರಾಜ ಶಿವಣ್ಣವರಿಗೆ ನೀಡಬೇಕು. ಅದು ಕಷ್ಟ ಸಾಧ್ಯವಾಗಿದೆ. ಹೀಗಾಗಿ ಕಾಂಗ್ರೆಸ್ ಹೈಕಮಾಂಡ್ ನಾಗೇಂದ್ರ ಅವರನ್ನು ಕೈ ಬಿಟ್ಟು ತುಕಾರಾಮ ಅವರ ಪತ್ನಿಗೆ ನೀಡುವ ಮೂಲಕ ಎಸ್ಟಿ ಕೋಟಾ ಹಾಗೂ ಮಹಿಳಾ ಕೋಟಾ ಭರ್ತಿ ಮಾಡಬೇಕು ಎನ್ನುವ ಚಿಂತನೆ ನಡೆಸಿದೆ. ಹೀಗೆ ಮಾಡಿ ಸಿದ್ದರಾಮಯ್ಯ ಅವರ ಸೂಚನೆಯಂತೆ ಬಸವರಾಜ ಶಿವಣ್ಣವರಿಗೆ ನೀಡಲಾಗುತ್ತದೆ ಎನ್ನಲಾಗಿದೆ.
ಹಾಗೊಂದು ವೇಳೆ ಈ ಬೆಳವಣಿಗೆ ನಡೆದರೆ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳಗೆ ನೀಡುವಂತೆ ಕರ್ನಾಟಕ ಕುರುಬ ಸಮುದಾಯದ ನಾಯಕರು ಒತ್ತಾಯಿಸಿದ್ದಾರೆ.
ಸಚಿವ ಸಂಪುಟ ಕಸರತ್ತು ನಡೆದಾಗಲೇ ಉತ್ತರ ಕರ್ನಾಟಕದ 11 ಜಿಲ್ಲೆಗಳ ಕುರುಬ ಸಮುದಾಯದ ಮುಖಂಡರು ಖುದ್ದು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕೊಪ್ಪಳದ ಶಾಸಕ ರಾಘವೇಂದ್ರ ಹಿಟ್ನಾಳ ಅವರನ್ನು ಸಚಿವರನ್ನಾಗಿ ಮಾಡಿ ಎಂದು ಒತ್ತಾಯಿಸಿದ್ದರು. ಆದರೂ ಸಿದ್ದರಾಮಯ್ಯ ಬಸವರಾಜ ಶಿವಣ್ಣವರ ಪರ ಬ್ಯಾಟ್ ಮಾಡಿದ್ದರು.
ಹಾಗೇ ನೋಡಿದರೇ ಸಿದ್ದರಾಮಯ್ಯ ದತ್ತು ಪುತ್ರ ಎಂದು ಕರೆಯಲ್ಪಡುತ್ತಿದ್ದ ರಾಘವೇಂದ್ರ ಹಿಟ್ನಾಳಗೆ ಸಚಿವ ಸ್ಥಾನ ಧಕ್ಕಲು ಅವರೇ ಅಡ್ಡಿಯಾಗಿದ್ದಾರೆ. ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ ಕುರಿತು ಸಿದ್ದರಾಮಯ್ಯ ಮುನಿಸಿಕೊಂಡಿದ್ದು ಯಾಕೆ ಎನ್ನುವುದೇ ನಿಗೂಢ ರಹಸ್ಯದಂತಾಗಿದೆ.
ಹ್ಯಾಟ್ರಿಕ್ ಜಯ ಸಾಧಿಸಿರುವ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ನಾವು ಕಾಂಗ್ರೆಸ್ ಪಕ್ಷದಲ್ಲಿ ಮುಂದುವರೆಯುವ ಬಗ್ಗೆ ಚಿಂತಿಸಬೇಕಾಗುತ್ತದೆ. ಈಗಾಗಲೇ ರಾಜೀನಾಮೆ ನೀಡಿದ್ದೇನೆ ಎಂದು ಕೊಪ್ಪಳ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಾರಡ್ಡಿ ಗಲಬಿ ತಿಳಿಸಿದ್ದಾರೆ.
ನನಗೆ ಅತೀವ ನೋವಾಗಿದೆ. ನನಗೆ ಸಚಿವ ಸ್ಥಾನ ತಪ್ಪಿದ್ದಕ್ಕೇ ಕಾರಣ ಗೊತ್ತಾಗಿ ಬೇಸರವಾಗಿದೆ. ಈಗಲೇ ನಾನು ಏನೂ ಹೇಳಲಾರೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.