ಭದ್ರಾ ಕಾಮಗಾರಿ ಪ್ರಗತಿ ಕುಂಟುತ್ತಾ ಸಾಗುತ್ತಿರುವುದೇಕೆ?

KannadaprabhaNewsNetwork |  
Published : Sep 22, 2024, 01:52 AM IST
ಚಿತ್ರ 3 | Kannada Prabha

ಸಾರಾಂಶ

ಅಪ್ಪರ್ ಭದ್ರಾ ಯೋಜನೆಯ ಕಾಮಗಾರಿ ಆರಂಭವಾಗಿ ಸಾಕಷ್ಟು ವರ್ಷ ಕಳೆದಿದ್ದರೂ ಪ್ರಗತಿ ಮಾತ್ರ ಕುಂಟುತ್ತಾ ಸಾಗಿದೆ. ಈ ಕಾಮಗಾರಿಯ ಬಗ್ಗೆ ಸರ್ಕಾರದ ದೃಷ್ಟಿಕೋನ ಏನು ಎಂದು ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮೀಜಿ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಅಪ್ಪರ್ ಭದ್ರಾ ಯೋಜನೆಯ ಕಾಮಗಾರಿ ಆರಂಭವಾಗಿ ಸಾಕಷ್ಟು ವರ್ಷ ಕಳೆದಿದ್ದರೂ ಪ್ರಗತಿ ಮಾತ್ರ ಕುಂಟುತ್ತಾ ಸಾಗಿದೆ. ಈ ಕಾಮಗಾರಿಯ ಬಗ್ಗೆ ಸರ್ಕಾರದ ದೃಷ್ಟಿಕೋನ ಏನು ಎಂದು ಪಟ್ಟನಾಯಕನಹಳ್ಳಿಯ ಶ್ರೀ ನಂಜಾವಧೂತ ಸ್ವಾಮೀಜಿ ಪ್ರಶ್ನಿಸಿದರು.

ತಾಲೂಕಿನ ವಿವಿ ಸಾಗರದಿಂದ ವಿವಿ ಪುರ, ಮೇಟಿಕುರ್ಕೆ, ಸೂರಗೊಂಡನಹಳ್ಳಿ ಹಾಗೂ ಕೂನಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭರಮಗಿರಿ, ಗೌನಹಳ್ಳಿ, ಭೂತನಹಟ್ಟಿ, ಕೂನಿಕೆರೆ, ಬೀರೇನಹಳ್ಳಿ ಹಾಗೂ ತವಂದಿ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶನಿವಾರ ವಿವಿಪುರ ಗ್ರಾಮದಿಂದ ತಾಲೂಕು ಕಛೇರಿಯವರೆಗೆ ನಡೆಸಿದ ಪ್ರತಿಭಟನಾ ಪಾದಯಾತ್ರೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವಿವಿ ಸಾಗರ ಡ್ಯಾಂನ ಪಕ್ಕದಲ್ಲಿರುವ ಹಳ್ಳಿಗಳ ರೈತರಿಗೆ ನೀರಿಲ್ಲದಂತಾಗಿರುವುದು ದುರಂತ. ಹಿರಿಯೂರಿನ ರೈತರು ಗಟ್ಟಿದನಿಯ ಹೋರಾಟಗಾರರಾಗಿದ್ದಾರೆ. ಈ ಹಿಂದೆ ಬಸವರಾಜ್ ಬೊಮ್ಮಾಯಿಯವರು ನೀರಾವರಿ ಸಚಿವರಾಗಿದ್ದಾಗ 5 ಟಿಎಂಸಿ ನೀರಿನ ಆದೇಶ ಮಾಡುವವರೆಗೂ ಹೋರಾಟ ನಡೆಸಿದ್ದರು. ರೈತರು ನೊಂದರೆ, ಮುನಿದರೆ ಯಾವ ಸರ್ಕಾರಕ್ಕೂ ಶೋಭೆ ತರುವುದಿಲ್ಲ. ಇಲ್ಲಿನ ರೈತರ ಹೋರಾಟದ ಜತೆಗೆ ನಾನು ಸದಾ ಇರುತ್ತೇನೆ ಎಂದು ಬೆಂಬಲ ಸೂಚಿಸಿದರು.

ಇದಲ್ಲದೆ ಜೆಜಿ ಹಳ್ಳಿ ಹೋಬಳಿಯ ರೈತರ ಸಂಕಷ್ಟಕ್ಕೂ ಜತೆಯಾಗುತ್ತೇನೆ. ನಾವು ಶಾಶ್ವತ ನೀರಾವರಿಗೆ ಆದ್ಯತೆ ನೀಡಬೇಕು. ನಾಲೆ ಅಥವಾ ಪೈಪ್ ಲೈನ್ ಯಾವುದಾದರೊಂದರ ಮೂಲಕ ನೀರು ಕೊಡಲು ಸಂಬಂಧಪಟ್ಟವರು ಕ್ರಮ ಕೈಗೊಳ್ಳಬೇಕು. ಸರಿಯಾದ ಪ್ಲಾನ್ ಇಲ್ಲದೆ ನೀರಿನ ಹಾಹಾಕಾರ ಶುರುವಾಗಿದೆ. ಕುಡಿಯುವ ನೀರು ಕೊಡುವುದು ಆಳುವವರ ಕರ್ತವ್ಯ. ಹಾಗಾಗಿ ನೀರು ಕೊಡಲೇಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ರವರು ಈ ಬಗ್ಗೆ ತುರ್ತಾಗಿ ಕ್ರಮ ಕೈಗೊಳ್ಳಬೇಕು. ಎಲ್ಲಾ ಕೆರೆಗಳು ತುಂಬುವವರೆಗೂ ನಾನು ನಿಮ್ಮ ಜತೆಗಿರುತ್ತೇನೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಮಾತನಾಡಿ, ಕಳೆದ ಎರಡು ವರ್ಷಗಳಿಂದಲೂ ನಮಗೆ ಸರಿಯಾದ ಮಳೆ ಆಗಿಲ್ಲ. 2018 ರಿಂದ 2023 ರವರೆಗೆ ಆಗಬೇಕಾದ ಅಪ್ಪರ್ ಭದ್ರಾ ಕಾಮಗಾರಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಈಗ ನಮ್ಮ ಸರ್ಕಾರ ಬಂದ ಮೇಲೆ ರೈತರ ಹಿತ ಕಾಯುವ ನಿರ್ಧಾರ ಮಾಡಲಾಗಿದ್ದು, ಬರೀ ನಾಲ್ಕೈದು ಹಳ್ಳಿಗಳ ಕೆರೆಗಳೇ ಅಲ್ಲ ತಾಲೂಕಿನ ಎಲ್ಲಾ ಹಳ್ಳಿಗಳ ಕೆರೆಗಳನ್ನು ತುಂಬಿಸುವ ನಿರ್ಧಾರ ಮಾಡಲಾಗಿದೆ ಎಂದು ತಿಳಿಸಿದರು.

ಈಗಾಗಲೇ ಅಧಿಕಾರಿಗಳಿಗೆ ಆ ಬಗ್ಗೆ ಸೂಚಿಸಲಾಗಿದೆ. ಕೆಲವು ಕೆರೆಗಳು ನೀರು ಹರಿಯುವ ಮಟ್ಟದಿಂದ 60-70 ಅಡಿ ಎತ್ತರದಲ್ಲಿವೆ. ಹಾಗಾಗಿ ಚೆಕ್ ಡ್ಯಾಮ್ ಗಳನ್ನು ನಿರ್ಮಿಸಬೇಕಾಗುತ್ತದೆ. ಜನವರಿಗೆ ಕೆರೆಗಳಿಗೆ ನೀರು ಹರಿಸುತ್ತೇವೆ ಎಂದು ನಾನು ಹೇಳುವುದಿಲ್ಲ. ಆದರೆ ಸ್ವಲ್ಪ ಸಮಯ ಹಿಡಿದರೂ ಸರಿ, ಕೆರೆಗಳಿಗೆ ನೀರು ಹರಿಸುವ ಸಂಕಲ್ಪ ನನ್ನದು ಎಂದರು.

ರೈತ ಸಂಘದ ಅಧ್ಯಕ್ಷ ಕೆಟಿ. ತಿಪ್ಪೇಸ್ವಾಮಿ ಮಾತನಾಡಿ, ವಿವಿ ಸಾಗರ ಜಲಾಶಯದ ಕೆಳಭಾಗದಲ್ಲಿರುವ ಕೆರೆಗಳಿಗೆ ನೀರು ತುಂಬಿಸಬೇಕು. ಭದ್ರಾ ಜಲಾಶಯ ಮತ್ತು ಎತ್ತಿನಹೊಳೆ ಯೋಜನೆಯಿಂದ ವಿವಿ ಸಾಗರ ಡ್ಯಾಂಗೆ ಪ್ರತಿವರ್ಷ 10 ಟಿಎಂಸಿ ನೀರು ನಿಗದಿಪಡಿಸಬೇಕು. ಜೆಜಿ ಹಳ್ಳಿ ಹೋಬಳಿ ವ್ಯಾಪ್ತಿಯ ಗಾಯಿತ್ರಿ ಡ್ಯಾಂ ಸೇರಿದಂತೆ ಎಲ್ಲಾ ಕೆರೆಗಳಿಗೆ ನೀರು ತುಂಬಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ರೈತರ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ 100 ದಿನ ಪೂರೈಸುತ್ತಾ ಸಾಗುತ್ತಿದೆ ಎಂದರು.

ಸರ್ಕಾರ ಈ ಬಗ್ಗೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ರೈತರನ್ನು ಕಡೆಗಣಿಸುತ್ತಿದೆ. ಈಗಾಗಲೇ ತಾಲೂಕಿನಲ್ಲಿ ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದಿದೆ. ತಾಲೂಕಿನಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದ್ದು, ಸರ್ಕಾರ ರೈತರ ನೀರಿನ ಬೇಡಿಕೆಗಳನ್ನು ಈಡೇರಿಸದಿದ್ದರೆ ಮುಂದಿನ ದಿನಗಳಲ್ಲಿ ಹಿರಿಯೂರು ಬಂದ್ ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಕಾರ್ತಿಕ್, ತಹಸೀಲ್ದಾರ್ ರಾಜೇಶ್ ಕುಮಾರ್, ಗುರುಪ್ರಸಾದ್,ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸಿದ್ದವೀರಪ್ಪ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ್, ಆಲೂರು ಸಿದ್ದರಾಮಣ್ಣ, ಲಕ್ಷ್ಮಣ್ ಹೂಗಾರ್, ಕಂದಿಕೆರೆ ಜಗದೀಶ್, ಕಂದಿಕೆರೆ ರಂಗನಾಥ್, ಎಸ್ ಜೆ ಹನುಮಂತರಾಯ, ವೆಂಕಟೇಶ್, ರಂಗಸ್ವಾಮಿ, ಮುಕುಂದ, ತಿಪ್ಪೇಸ್ವಾಮಿ, ಗೋವಿಂದ ರಾಜು, ರಾಮಣ್ಣ, ಶ್ರೀನಿವಾಸ್, ಸಿದ್ದಮ್ಮ, ಕರಿಯಪ್ಪ, ಸುರೇಶ್ ಮುಂತಾದವರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ