ರಸ್ತೆ ವಿಸ್ತರಣೆ ೩೫ ಅಡಿಗೆ ಸೀಮಿತಗೊಳಿಸಿ ಚರಂಡಿ ಏಕೆ?

KannadaprabhaNewsNetwork |  
Published : Feb 20, 2026, 01:45 AM IST
19 ಜೆ.ಜಿ.ಎಲ್.1 ಅ) ಜಗಳೂರು ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ರಸ್ತೆ ವಿಸ್ತರಣೆ ಹೋರಾಟ ಸಮಿತಿ ಅಧ್ಯಕ್ಷ ಸಣ್ಣ ಓಬಯ್ಯ ,ಸೇರಿದಂತೆ ವಿವಿಧ ಸಂಘಟನೆ ಮುಖಂಡರುಗಳು ಮಾತನಾಡಿದರು. | Kannada Prabha

ಸಾರಾಂಶ

ಜಗಳೂರು ಪಟ್ಟಣದೊಳಗೆ ಹಾದುಹೋಗಿರುವ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ- ೬೦ರ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡುವಾಗ ಶಾಸಕ ಬಿ.ದೇವೇಂದ್ರಪ್ಪ ಅವರು ೬೯ ಅಡಿ ಅಗಲೀಕರಣ ನಡೆಸುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದೀಗ ೩೫ ಅಡಿಗೆ ಸೀಮಿತಗೊಳಿಸಿ ಚರಂಡಿ ನಿರ್ಮಿಸಲು ಮುಂದಾಗಿರುವುದು ಅನುಮಾನಕ್ಕೆ ದಾರಿ ಮಾಡಿದೆ ಎಂದು ರಸ್ತೆ ವಿಸ್ತರಣೆ ಹೋರಾಟ ಸಮಿತಿ ಅಧ್ಯಕ್ಷ ಸಣ್ಣ ಓಬಯ್ಯ ಹೇಳಿದ್ದಾರೆ.

- ರಸ್ತೆ ಮಧ್ಯದಿಂದ ೬೯ ಅಡಿ ವಿಸ್ತರಣೆ ಹೋರಾಟದಿಂದ ಹಿಂದೆ ಸರಿಯಲ್ಲ: ಸಣ್ಣ ಓಬಯ್ಯ- - -

ಕನ್ನಡಪ್ರಭ ವಾರ್ತೆ ಜಗಳೂರು

ಜಗಳೂರು ಪಟ್ಟಣದೊಳಗೆ ಹಾದುಹೋಗಿರುವ ಮಲ್ಪೆ- ಮೊಳಕಾಲ್ಮೂರು ರಾಜ್ಯ ಹೆದ್ದಾರಿ- ೬೦ರ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡುವಾಗ ಶಾಸಕ ಬಿ.ದೇವೇಂದ್ರಪ್ಪ ಅವರು ೬೯ ಅಡಿ ಅಗಲೀಕರಣ ನಡೆಸುವುದಾಗಿ ಘೋಷಣೆ ಮಾಡಿದ್ದರು. ಆದರೆ ಇದೀಗ ೩೫ ಅಡಿಗೆ ಸೀಮಿತಗೊಳಿಸಿ ಚರಂಡಿ ನಿರ್ಮಿಸಲು ಮುಂದಾಗಿರುವುದು ಅನುಮಾನಕ್ಕೆ ದಾರಿ ಮಾಡಿದೆ ಎಂದು ರಸ್ತೆ ವಿಸ್ತರಣೆ ಹೋರಾಟ ಸಮಿತಿ ಅಧ್ಯಕ್ಷ ಸಣ್ಣ ಓಬಯ್ಯ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಮಧ್ಯದಿಂದ ೬೯ ಅಡಿ ರಸ್ತೆ ವಿಸ್ತರಣೆ ತೆರವುಗೊಳಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ತೋರುತ್ತಿರುವ ಮೃಧುದೋರಣೆ ತೀವ್ರವಾಗಿ ಖಂಡಿಸುತ್ತೇವೆ ಎಂದರು.

ಕರುನಾಡ ನವನಿರ್ಮಾಣ ವೇದಿಕೆ ರಾಜ್ಯಾಧ್ಯಕ್ಷ ಮಹಾಲಿಂಗಪ್ಪ ಮಾತನಾಡಿ, ಸರ್ಕಾರಿ ಕಟ್ಟಡ ಮತ್ತು ಸರ್ಕಾರಿ ಜಾಗ ಮತ್ತು ಒತ್ತುವರಿ ಜಾಗಗಳಿಗೆ ಸಂಬಂಧಿಸಿದಂತೆ ದಾಖಲಾತಿ ಮಾಹಿತಿ ನೀಡಿ ಎಂದು ಕೇಳಿದ್ದೇವೆ. ಆದರೆ ಅಧಿಕಾರಿಗಳು ಯಾರ ಒತ್ತಡಕ್ಕೆ ಮಣಿದಿದ್ದಾರೋ ನಮಗೆ ಸ್ಪಂದಿಸುತ್ತಿಲ್ಲ. ರಸ್ತೆ ಅಗಲೀಕರಣ ಸಮಿತಿಯ ಹೋರಾಟಗಾರರು ಯಾರ ಎಂಜಲು ಕಾಸನ್ನು ಮುಟ್ಟಿಲ್ಲ. ೬೯ ಅಡಿ ಅಗಲೀಕರಣವೇ ನಮ್ಮ ಅಂತಿಮ ಗುರಿ. ಸಾರ್ವಜನಿಕರು ಅನಗತ್ಯ ಅನುಮಾನ ಬಿಟ್ಟು ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಹೊಂದಾಣಿಕೆ ರಾಜಕಾರಣ:

ಮುಖಂಡ ಗೌರಿಪುರ ಸತ್ಯಮೂರ್ತಿ ಮಾತನಾಡಿ, ಪಟ್ಟಣದ ರಸ್ತೆಯನ್ನು ೬೯ ಅಡಿ ಅಗಲಿಕರಣ ಮಾಡುವಂತೆ ಯಾರು ಹೇಳಿಲ್ಲ. ಜಿಲ್ಲಾಧಿಕಾರಿ ಮತ್ತು ಶಾಸಕರೇ ಪತ್ರಿಕೆಗಳಿಗೆ ಹೇಳಿಕೆ ನೀಡಿದ್ದರು. ಆರಂಭದಲ್ಲಿ ಶಾಸಕರು ರಸ್ತೆ ವಿಸ್ತರಣೆ ವಿಚಾರದಲ್ಲಿ ನನ್ನ ಶಾಸಕ ಸ್ಥಾನ ಕಳೆದುಕೊಂಡರೂ ಪರವಾಗಿಲ್ಲ, ಸಂಘಟನೆಗಳ ಬೆಂಬಲವಾಗಿರುತ್ತೇನೆ ಎಂದು ಭರವಸೆ ನೀಡಿದ್ದರು. ಇಂಥವರು ಇಂದು ನಿರ್ಧಾರ ಬದಲಾಯಿಸಿದ್ದಾರೆ. ಕ್ಷೇತ್ರದಲ್ಲಿ ವಿಪಕ್ಷ ಬಿಜೆಪಿ ಇದ್ದೂ ಇಲ್ಲದಂತಾಗಿದೆ. ಹಾಲಿ ಶಾಸಕರು ಮತ್ತು ಮಾಜಿ ಶಾಸಕರು ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ. ಅವರ ಅನುಕೂಲಗಳಿಗಾಗಿ ಕ್ಷೇತ್ರದ ಮತದಾರರಿಗೆ ಮೋಸ ಮಾಡಲು ಹೊರಟ್ಟಿದ್ದಾರೆ ಎಂದು ಆರೋಪಿಸಿದರು.

ವಕೀಲ ಆರ್.ಓಬಳೇಶ್ ಮಾತನಾಡಿ, ಹೋರಾಟ ಸಮಿತಿ ತಮ್ಮ ಸ್ವಾರ್ಥಕ್ಕಾಗಿ ಪ್ರತಿಭಟನೆ ಮಾಡುತ್ತಿಲ್ಲ. ಸಾರ್ವಜನಿಕರ ಪರವಾಗಿ ನಿಂತಿದ್ದೇವೆ. ೬೯ ಅಡಿ ಅಗಲಿಕರಣಕ್ಕೆ ಚಾಲನೆ ನೀಡಿದ್ದ ಶಾಸಕರು ಇದೀಗ ೩೫ ಅಡಿಗೆ ಚರಂಡಿ ಮಾಡುತ್ತಿದ್ದಾರೆ. ಹೋರಾಟಗಾರರಿಗೆ ಯಾವ ಭಯ, ಆತಂಕ ಬೇಡ. ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾ ಹೋರಾಟಗಾರರಾದ ಎಸ್.ಆರ್.ಇಂದಿರಾ, ರೈತ ಸಂಘದ ಅಧ್ಯಕ್ಷ ಕುಮಾರ್ ಭರಮಸಮುದ್ರ, ದ.ಸಂ.ಸ. ಸಂಚಾಲಕ ಕುಬೇಂದ್ರಪ್ಪ, ಮಹಾಲಿಂಗಪ್ಪ, ಟಿ.ಬಿ. ಬೋರಯ್ಯ, ಬಿ.ಎನ್. ಓಬಳೇಶ್, ಸೂರಪ್ಪ, ಕಿರಣ್ ಕಮಾರ್ ಮತ್ತಿತರರಿದ್ದರು.

- - -

-19ಜೆ.ಜಿ.ಎಲ್.1.ಜೆಪಿಜಿ:

ಜಗಳೂರು ರಸ್ತೆ ವಿಸ್ತರಣೆ ಹೋರಾಟ ಸಮಿತಿ ಅಧ್ಯಕ್ಷ ಸಣ್ಣ ಓಬಯ್ಯ ಮತ್ತಿತರ ಮುಖಂಡರು ಸುದ್ದಿಗೋಷ್ಠಿ ನಡೆಸಿ ಶಾಸಕರ ನಡೆ ಖಂಡಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮತ್ತೆ ಆತಂಕ ಮೂಡಿಸಿದ ಚಿರತೆ ಹೆಜ್ಜೆ!
ಶಿಕ್ಷಣ ದೇಶದ ಅಭಿವೃದ್ಧಿಗೆ ಅಡಿಪಾಯ: ಡಾ. ಪ್ರಾನ್ಸಿಸ್ ಮರಿಯಾ