ಶಿವಾನಂದ ಗೊಂಬಿ
ಪಶ್ಚಿಮ ಪದವೀಧರರ ಕ್ಷೇತ್ರದಿಂದ ವಿಧಾನಪರಿಷತ್‌ಗೆ 2026ರಲ್ಲಿ ಚುನಾವಣೆ ನಡೆಯಲಿದ್ದು ನ. 6ಕ್ಕೆ ನೋಂದಣಿ ಮುಗಿದಿದೆ. ಆದರೆ, ಪ್ರತಿ ಬಾರಿಯೂ ಪದವೀಧರ ಕ್ಷೇತ್ರದ ಚುನಾವಣೆಗೆ ನೋಂದಣಿ ಮಾಡಿಸುವುದು ಏಕೆ? ತಂತ್ರಜ್ಞಾನ ಮುಂದುವರಿದಿದ್ದರೂ ಹಳೆಯ ಪದ್ಧತಿ ಅನುಸರಿಸುವುದು ಏಕೆ?.
ಇಂಥ ಹತ್ತಾರು ಪ್ರಶ್ನೆಗಳು ಪದವೀಧರ ಮತದಾರರಷ್ಟೇ ಅಲ್ಲದೆ, ವಿವಿಧ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳಲ್ಲಿ ಉದ್ಭವಾಗಿದೆ.ಏನಿದು ನೋಂದಣಿ?
ಹೊಸ ಪದವೀಧರರ ನೋಂದಣಿ ಮಾಡಿಸಿದರೆ ಸರಿ. ಹಳೆಯ ಮತದಾರರನ್ನು ಮಾಡಿಸಬೇಕೆಂದರೆ ಹೇಗೆ? ಒಮ್ಮೆ ಪದವಿ ಪಡೆದರೆ ಜೀವನ ಪರ್ಯಂತ ಇರುತ್ತದೆ. ಇದನ್ನು ಚುನಾವಣಾ ಆಯೋಗ ಯೋಚಿಸುವುದಿಲ್ಲವೇ ಎಂಬ ಪ್ರಶ್ನೆ ಪದವೀಧರರದ್ದು. ಮೃತಪಟ್ಟಿದ್ದರೆ ಅವರ ಹೆಸರು ತೆಗೆದು ಹಾಕಬೇಕು ಎಂಬುದು ಪ್ರಜ್ಞಾವಂತರ ಅಭಿಮತ.
ಮತದಾರರ ನೋಂದಣಿಗೆ ಹಳೆಯ ಪದ್ಧತಿಯಂತೆ ಮಾರ್ಕ್ಸ್ ಕಾರ್ಡ್, ಆಧಾರ್ ಕಾರ್ಡ್, ವೋಟರ್ ಐಡಿ ಝೇರಾಕ್ಸ್ ಪ್ರತಿಗೆ ಸ್ವಯಂ ದೃಢೀಕರಣ ಮಾಡಿ ಸಲ್ಲಿಸಬೇಕು. ಹೀಗಾಗಿ ಪದವೀಧರರು ತಾವಾಗಿಯೇ ನೋಂದಣಿ ಮಾಡಿಸುತ್ತಿಲ್ಲ. ಟೆಕೆಟ್ ಆಕಾಂಕ್ಷಿಗಳು, ಅವರ ಬೆಂಬಲಿಗರೇ ಪದವೀಧರರನ್ನು ಹುಡುಕಾಡಿ ನೋಂದಣಿ ಮಾಡಿಸುತ್ತಿದ್ದಾರೆ. ಈ ಕಾರಣಕ್ಕಾಗಿಯೇ ಯಾರು ಎಷ್ಟು ನೋಂದಣಿ ಮಾಡಿಸುತ್ತಾರೆ ಅವರಿಗೆ ಟಿಕೆಟ್ ಎಂಬಂತಹ ಅಘೋಷಿತ ನಿಯಮವನ್ನೂ ಪಕ್ಷಗಳು ಆಕಾಂಕ್ಷಿಗಳ ಮೇಲೆ ಹೇರಿರುವುದುಂಟು. ಆಧುನಿಕ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದರೂ ಅದೇಕೆ ಹಳೆ ಪದ್ಧತಿಗೆ ಚುನಾವಣೆ ಆಯೋಗ ಜೋತು ಬಿದ್ದಿರುವುದು. ಆನ್‌ಲೈನ್‌ನಲ್ಲೇ ಎಲ್ಲ ದಾಖಲೆ ಸಲ್ಲಿಸಿ ನೋಂದಣಿ ಮಾಡಿಸುವ ವ್ಯವಸ್ಥೆ ಜಾರಿಗೊಳಿಸಬೇಕೆಂಬ ಆಗ್ರಹವೂ ಕೇಳಿ ಬಂದಿದೆ.
ಒಟ್ಟಿನಲ್ಲಿ ಪಶ್ಚಿಮ ಪದವೀಧರರ ಚುನಾವಣೆಗೆ ತಯಾರಿ ನಡೆದಿರುವ ಜತೆ ಜತೆಗೆ ಮತದಾರರ ನೋಂದಣಿ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿರುವುದಂತೂ ಸತ್ಯ.ಆಧುನಿಕ ತಂತ್ರಜ್ಞಾನದಲ್ಲಿ ಸಾಕಷ್ಟು ಮುಂದುವರಿದಿದ್ದು ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸುವ ಅಥವಾ ಯಾವ ವರ್ಷ ಎಷ್ಟು ಜನ ಪದವಿ ಪಡೆದಿದ್ದಾರೆ ಎಂಬ ಮಾಹಿತಿ ವಿಶ್ವ ವಿದ್ಯಾಲಯಗಳಲ್ಲಿ ಲಭ್ಯವಿರುತ್ತದೆ. ಅದರಂತೆ ಪದವೀಧರರನ್ನು ಮತದಾರರನ್ನಾಗಿಸಬೇಕು.
ಲಿಂಗರಾಜ ಪಾಟೀಲ, ಬಿಜೆಪಿ ಮುಖಂಡಹೊಸದಾಗಿ ಪದವಿ ಪಡೆದವರನ್ನು ಮತದಾರರ ಪಟ್ಟಿಗೆ ಸೇರ್ಪಡೆ ಮಾಡಬೇಕು. ಮತದಾರರು ಇಲ್ಲವಾಗಿದ್ದರೆ ಅವರ ಹೆಸರನ್ನು ತೆಗೆದು ಹಾಕಬೇಕು. ಪ್ರತಿಸಲ ಎಲ್ಲರದು ಹೊಸದಾಗಿ ಮಾಡಿಸುವುದು ಸರಿಯಲ್ಲ. ಹಳೆ ಪದ್ಧತಿಯಿಂದ ಹೊರಬರಬೇಕು. ಆನ್‌ಲೈನ್ ವ್ಯವಸ್ಥೆಯೂ ಅಳವಡಿಸಬೇಕು.