ಬಂಟ್ವಾಳದಲ್ಲಿ ವ್ಯಾಪಕ ಮಳೆ; ಅಪಾಯಮಟ್ಟದಲ್ಲಿ ನೇತ್ರಾವತಿ

KannadaprabhaNewsNetwork |  
Published : Jul 19, 2024, 12:48 AM IST
 ಬಂಟ್ವಾಳ ಮಳೆರಾಯನ ಆರ್ಭಟ ತೀವ್ರ | Kannada Prabha

ಸಾರಾಂಶ

ಬಂಟ್ವಾಳ ತಹಸೀಲ್ದಾರ್‌ ಅರ್ಚನಾ ಭಟ್ ನೇತೃತ್ವದಲ್ಲಿ ಪರಿಹಾರ ಕಾರ್ಯಾಚರಣೆಯು ನಡೆಯುತ್ತಿದ್ದು, ಅಗ್ನಿಶಾಮಕ ದಳ, ಈಜುಪಟುಗಳ ತಂಡ ಹಾಗೂ ಪೊಲೀಸರು ವಿಶೇಷ ನಿಗವಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬಂಟ್ವಾಳ

ತಾಲೂಕಿನಲ್ಲಿ ಮಳೆಯ ಆರ್ಭಟ ಜೋರಾಗಿದ್ದು , ನೇತ್ರಾವತಿ ಅಪಾಯಮಟ್ಟದಲ್ಲಿ ಹರಿಯುತ್ತಿದೆ. ಪಾಣೆಮಂಗಳೂರು, ಗೂಡಿನಬಳಿ, ಆಲಡ್ಕ ಬಸ್ತಿಪಡ್ಪು, ಜಕ್ರಿಬೆಟ್ಟು ಇಲ್ಲಿನ ತಗ್ಗು ಪ್ರದೇಶಗಳೆಲ್ಲಾ ಜಲಾವೃತಗೊಂಡಿದ್ದು, 10 ಮನೆಯ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಬಂಟ್ವಾಳ ತಹಸೀಲ್ದಾರ್‌ ಅರ್ಚನಾ ಭಟ್ ನೇತೃತ್ವದಲ್ಲಿ ಪರಿಹಾರ ಕಾರ್ಯಾಚರಣೆಯು ನಡೆಯುತ್ತಿದ್ದು, ಅಗ್ನಿಶಾಮಕ ದಳ, ಈಜುಪಟುಗಳ ತಂಡ ಹಾಗೂ ಪೊಲೀಸರು ವಿಶೇಷ ನಿಗವಹಿಸಿದ್ದಾರೆ.ವಿವಿಧೆಡೆ ವ್ಯಾಪಕ ಹಾನಿ: ಕೊಳ್ನಾಡು ಗ್ರಾಮದ ಸುರಿಬೈಲ್ ಖಂಡಿಗ ರಸ್ತೆ ಕೆಳಗಿನ ಮೋರಿಯು ಕೊಚ್ಚಿ ಹೋಗಿ ಸೇತುವೆಯು ಅಪಾಯಕಾರಿ ಸ್ಥಿತಿಯಲ್ಲಿದ್ದು ಕುಸಿದು ಬೀಳುವ ಸಾಧ್ಯತೆಯಿದೆ. ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ನಿರ್ಬಂಧಿಸಿ ಬ್ಯಾರಿಕೇಡ್ ಅಳವಡಿಸಲಾಗಿದೆ.

ಮಾಣಿ ಗ್ರಾಮದ ಕೊಡಾಜೆ -ಕೋಚಪಲ್ಕೆ ನಿವಾಸಿ ಸಂಜೀವ ಎಂಬವರು ಏಕಾಂಗಿಯಾಗಿ ವಾಸ್ತವ್ಯವಿದ್ದ ಶಿಥಿಲಗೊಂಡ ಮನೆಯು ಬುಧವಾರ ಸುರಿದ ಮಳೆಗೆ ಬಿದ್ದು ಪೂರ್ಣ ಹಾನಿಗೊಂಡಿದೆ. ಅವರು ಸಂಬಂಧಿಕರ ಮನೆಯಲ್ಲಿ ವಾಸ್ತವ್ಯವಿದ್ದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ. ಕಾವಳಪಡೂರು ಗ್ರಾಮದ ಮಧ್ವ ಕೊಮ್ಮಾಲೆ ನಿವಾಸಿಯಾದ ಮೀನಾಕ್ಷಿ ಎಂಬವರ ಮನೆಗೆ ತಾಗಿಕೊಂಡು ಇರುವ ಬಚ್ಚಲುಮನೆ ಸಂಪೂರ್ಣ ಹಾನಿಯಾಗಿದೆ. ವಿಟ್ಲ ಮುಡ್ನೂರು ಗ್ರಾಮ (ವಿಟ್ಲ ಹೋಬಳಿ)ದ ಕಂಬಳ ಬೆಟ್ಟು ಶಾಂತಿನಗರ ನಿವಾಸಿ ನಿಜಾಮುದ್ದಿನ್‌ ಎಂಬವರ ಮನೆಗೆ ಮಳೆಯಿಂದ ಭಾಗಶಃ ಹಾನಿಯಾಗಿದೆ. ನೆಟ್ಲ ಮುಡ್ನೂರು ಗ್ರಾಮದ ಕಮಲಾಕ್ಷಿ ಅವರ ವಾಸ್ತವ್ಯದ ಮನೆ ಭಾಗಶಃ ಹಾನಿಯಾಗಿದೆ.. ಶಿರಾಡಿ ರಸ್ತೆ ಬಂದ್; ಮಾಣಿಯಲ್ಲಿಯೇ ತಡೆ

ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿದಿರುವುದರಿಂದ ಸಕಲೇಶಪುರ, ಹಾಸನ, ಬೆಂಗಳೂರು ತೆರಳುವ ವಾಹನ ಸವಾರರು ಬದಲಿ ರಸ್ತೆಯಲ್ಲಿ ಸಂಚಾರ ನಡೆಸುವಂತೆ ಮಾಣಿಯಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಪೊಲೀಸರು ಆ ದಾರಿಯಾಗಿ‌ ಬರುವ ವಾಹನ ಸವಾರರಿಗೆ ಮಾಹಿತಿ ನೀಡಿ ಬದಲಿ ರಸ್ತೆಯನ್ನು ಬಳಸುವಂತೆ ತಿಳಿಸುತ್ತಿದ್ದಾರೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಶಿರಾಡಿ ಘಾಟ್‌ನಲ್ಲಿ ಗುಡ್ಡ ಕುಸಿದು ವಾಹನ‌ ಸಂಚಾರಕ್ಕೆ ಸಮಸ್ಯೆಯಾಗಿದೆ. ಈ ಹಿನ್ನಲೆ ಸಕಲೇಶಪುರ ತೆರಳಿ ಹಾಸನ ಮೂಲಕ ಬೆಂಗಳೂರು ತೆರಳುವ ವಾಹನಗಳು ಮಡಿಕೇರಿ, ಮೈಸೂರು ಮಾರ್ಗವಾಗಿ ತೆರಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ. ಈ ನಡುವೆ ರಾತ್ರಿ ೮ ಗಂಟೆಯ ಬಳಿಕ ಮಡಿಕೇರಿ ಮೂಲಕ ಸಂಚರಿಸುವ ರಸ್ತೆಯಲ್ಲೂ ನಿರ್ಬಂಧ ಹೇರಿರುವುದರಿಂದ ಎಲ್ಲ ವಾಹನಗಳು ಚಾರ್ಮಾಡಿ ಘಾಟಿ ಮೂಲಕವೇ ಸಂಚರಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ಹೆದ್ದಾರಿಯಲ್ಲಿ ದಿನವಿಡೀ ಟ್ರಾಫಿಕ್‌ ಜಾಮ್..‌ ಅತೀವ ಮಳೆ ಹಲವೆಡೆಗಳಲ್ಲಿ ಗುಡ್ಡ ಕುಸಿತವಾಗಿರುವ ಹಿನ್ನೆಲೆಯಲ್ಲಿ ಚಟತುಷ್ಪಥ ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸರತಿ ಸಾಲು ದಿನವಿಡೀ ಕಂಡು ಬಂದಿತ್ತು. ಬಂಟ್ವಾಳ ಸಂಚಾರಿ ಪೊಲೀಸರು ಮಳೆಯ ನಡುವೆಯೂ ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ವಿಶೇಷ ಶ್ರಮ ಪಟ್ಟರು.ತುಂಬಿ ಹರಿಯುವ ನದಿಯಲ್ಲಿ ಯುವಕರ ಹುಚ್ಚಾಟ ಪಾಣೆಮಂಗಳೂರು ನೇತ್ರಾವತಿಯಲ್ಲಿ ನೀರು ರಭಸದಿಂದ ಹರಿಯುತ್ತಿದ್ದು, ಕೆಲ ಯುವಕರು ಈ ನೀರಿನಲ್ಲಿ ಹಾರಿ ಹುಚ್ಚಾಟ ನಡೆಸುತ್ತಿರುವ ವಿಡಿಯೋ ಒಂದು ವೈರಲ್‌ ಆಗಿದ್ದು, ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತು ಬಂಟ್ವಾಳ ತಹಶೀಲ್ದಾರ್‌ ಅವರು ಮನವಿ ಮಾಡಿದ್ದು, ನೆರೆಭೀತಿ ಪ್ರದೇಶದಲ್ಲಿ ಯಾವುದೇ ಸೆಲ್ಫೀ ಮಾಡುವುದು, ಫೊಟೋ ತೆಗೆಯುವುದು ಮಾಡದೆ, ಅಪಾಯವಿದ್ದಲ್ಲಿ ತಾಲೂಕು ಸಹಾಯವಾಣಿ ಸಂಖ್ಯೆಗೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ.ಅಪಾಯಮಟ್ಟದಲ್ಲಿ ನೇತ್ರಾವತಿ.. ಗುರುವಾರ ದಿನವಿಡೀ ನೇತ್ರಾವತಿ ಅಪಾಯಮಟ್ಟದಲ್ಲಿ ಹರಿದಿದ್ದು, ಬೆಳಗ್ಗೆ ೭.೯ ರ ವರೆಗೆ ಏರಿತ್ತು. ಮಧ್ಯಾಹ್ನದ ವೇಳೆಗೆ ೭.೬ ಮೀಟರ್‌ ಗೆ ಇಳಿದ ನೇತ್ರಾವತಿ ನದಿ ನೀರಿನ ಮಟ್ಟ ಸಂಜೆ ವೇಳೆಗೆ ೭.೩ ಮೀಟರ್‌ ಗೆ ಇಳಿದಿತ್ತು. ಈ ನಡುವೆ ನೇತ್ರಾವತಿ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದ ಬಂಟ್ವಾಳ ಪುರಸಭಾ ವ್ಯಾಪ್ತಿಯ ಕೆಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ‌. ಜಲಾವೃತಗೊಂಡ ಪಾಣೆಮಂಗಳೂರು ಆಲಡ್ಕ ಸಹಿತ ಅನೇಕ ಕಡೆಗಳಿಗೆ ಮಂಗಳೂರು ಸಹಾಯಕ ಆಯುಕ್ತ ಹರ್ಷವರ್ದನ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

PREV

Recommended Stories

ಶಾಸಕರ ಭರವಸೆಗೆ ಧರಣಿ ಹಿಂಪಡೆದ ಚಲವಾದಿ ಸಮಾಜ
ರಾಜ್ಯಾದ್ಯಂತ ಏಕರೂಪ ಬೆಲೆ ನಿಗದಿಗೊಳಿಸಲು ಒತ್ತಾಯ